ನಾಯಿ ಕಡಿತದಿಂದ ಸ್ಪಲ್ಪದರಲ್ಲೇ ಪಾರಾದ ಶ್ರೇಯಸ್ ಅಯ್ಯರ್; ವಿಡಿಯೋ
Shreyas Iyer Dog Bite Scare at Airport: ಟೀಂ ಇಂಡಿಯಾ ಉಪನಾಯಕ ಶ್ರೇಯಸ್ ಅಯ್ಯರ್ ವಿಮಾನ ನಿಲ್ದಾಣದಲ್ಲಿ ನಾಯಿ ಕಡಿತದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ನ್ಯೂಜಿಲೆಂಡ್ ಸರಣಿಗೆ ತೆರಳುವ ಮುನ್ನ ಈ ಘಟನೆ ನಡೆದಿದ್ದು, ವೈರಲ್ ಆಗಿದೆ. ಇತ್ತೀಚೆಗೆ ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿದ್ದ ಅಯ್ಯರ್‌ಗೆ ಮತ್ತೊಂದು ಗಾಯದ ಅಪಾಯದಿಂದ ಪಾರಾಗಿರುವುದು ಸಮಾಧಾನ ತಂದಿದೆ. ಇದು ಅವರ ಮುಂಬರುವ ಪ್ರದರ್ಶನದ ಮೇಲೆ ಪರಿಣಾಮ ಬೀರಬಹುದಿತ್ತು.
ಟೀಂ ಇಂಡಿಯಾ ಉಪನಾಯಕ ಶ್ರೇಯಸ್ ಅಯ್ಯರ್ ವಿಮಾನ ನಿಲ್ದಾಣದಲ್ಲಿ ನಾಯಿ ಕಡಿತದಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗಾಗಿ ವಡೋದರಾಗೆ ತೆರಳುವ ವೇಳೆ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಇದೀಗ ಈ ಘಟನೆಯ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದು, ಅದೃಷ್ಟವಶಾತ್ ಅವಘಡ ಸಂಭವಿಸುವ ಮುನ್ನವೇ ಎಚ್ಚೆತ್ತುಕೊಂಡ ಶ್ರೇಯಸ್ ನಾಯಿ ಕಡಿತದಿಂದ ತಪ್ಪಿಸಿಕೊಂಡಿದ್ದಾರೆ.
ಶ್ರೇಯಸ್ ಅಯ್ಯರ್ ವಿಮಾನ ನಿಲ್ದಾಣದಿಂದ ಹೊರಬರುವಾಗ ಯುವ ಅಭಿಮಾನಿಯೊಬ್ಬರು ಆಟೋಗ್ರಾಫ್ ಕೇಳಿದ್ದಾರೆ. ಅದೇ ಸಮಯದಲ್ಲಿ, ಅಲ್ಲಿದ್ದ ಮಹಿಳೆಯೊಬ್ಬರು ತಮ್ಮ ಸಾಕು ನಾಯಿಯನ್ನು ಹಿಡಿದುಕೊಂಡು ಶ್ರೇಯಸ್ ಬಳಿಗೆ ಬಂದಿದ್ದಾರೆ. ಶ್ವಾನವನ್ನು ನೋಡಿದ ಕೂಡಲೇ ಶ್ರೇಯಸ್, ಅದನ್ನು ಮುದ್ದಿಸಲು ಪ್ರಯತ್ನಿಸಿದ್ದಾರೆ. ಆದರೆ ಈ ವೇಳೆ ಕೆರಳಿದ ಶ್ವಾನ ಇದ್ದಕ್ಕಿದ್ದಂತೆ ಅಯ್ಯರ್ ಅವರ ಕೈಯನ್ನು ಕಚ್ಚಲು ಯತ್ನಿಸಿದೆ. ನಾಯಿಯ ದಾಳಿಯನ್ನು ಗಮನಿಸಿದ ಶ್ರೇಯಸ್ ಮಿಂಚಿನ ವೇಗದಲ್ಲಿ ತನ್ನ ಕೈಯನ್ನು ಹಿಂದಕ್ಕೆ ಎಳೆದುಕೊಂಡಿದ್ದಾರೆ. ಈ ಮೂಲಕ ನಾಯಿ ಕಡಿತದಿಂದ ಅಯ್ಯರ್ ಪಾರಾಗಿದ್ದಾರೆ.
ಒಂದು ವೇಳೆ ಶ್ರೇಯಸ್ ನಾಯಿ ಕಡಿತಕ್ಕೀಡಾಗಿದ್ದರೆ, ಮತ್ತೆ ಟೀಂ ಇಂಡಿಯಾದಿಂದ ಹೊರಬೀಳಬೇಕಿತ್ತು. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಗಾಯಗೊಂಡಿದ್ದ ಶ್ರೇಯಸ್, ದೀರ್ಘ ವಿರಾಮದ ನಂತರ ಈಗ ತಂಡಕ್ಕೆ ಮರಳುತ್ತಿದ್ದಾರೆ. ಜನವರಿ 11 ರಂದು ವಡೋದರಾದಲ್ಲಿ ಪ್ರಾರಂಭವಾಗುವ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಅವರು ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ.
ಶ್ರೇಯಸ್ ಅಯ್ಯರ್ ಅವರನ್ನು ಏಕದಿನ ತಂಡದಲ್ಲಿ ಮಾತ್ರವಲ್ಲದೆ ಟಿ20 ತಂಡದಲ್ಲಿಯೂ ಸೇರಿಸಿಕೊಳ್ಳುವ ಸಾಧ್ಯತೆಯಿದೆ. ಸ್ಟಾರ್ ಆಟಗಾರ ತಿಲಕ್ ವರ್ಮಾ ಗಾಯದಿಂದಾಗಿ ಮೊದಲ ಮೂರು ಟಿ20 ಪಂದ್ಯಗಳಿಗೆ ಹೊರಗುಳಿದಿರುವುದರಿಂದ, ಅವರ ಬದಲಿಗೆ ಶ್ರೇಯಸ್ ಅವರನ್ನು ಆಯ್ಕೆ ಮಾಡಲು ಬಿಸಿಸಿಐ ಯೋಜಿಸುತ್ತಿದೆ.

