ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿಯಾದ ಸಂಸದ ತೇಜಸ್ವಿ ಸೂರ್ಯ ಹೇಳಿದ್ದೇನು?
ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ (tejasvi surya) ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ (siddaramaiah) ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಬೆಂಗಳೂರು: ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ (tejasvi surya) ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ (siddaramaiah) ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಸಿಎಂ ಗೃಹ ಕಚೇರಿ ಕೃಷ್ಣಾಕ್ಕೆ ತೆರಳಿದ ತೇಜಸ್ವಿ ಸೂರ್ಯ, ತುಸು ಹೊತ್ತು ಮಾತುಕತೆ ನಡೆಸಿದ್ದಾರೆ. ಬೆಂಗಳೂರು ಸಬ್ ಅರ್ಬನ್ ರೈಲು ಯೋಜನೆ ಅನುಷ್ಠಾನ, ಬೆಂಗಳೂರು ಮಹಾನಗರದ ಅಭಿವೃದ್ಧಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಸಿದ್ದರಾಮಯ್ಯ ಜೊತೆ ಅವರು ಸಮಾಲೋಚನೆ ನಡೆಸಿದ್ದಾರೆ. ಈ ಹಿಂದೆ ಹಲವು ಬಾರಿ ಚುನಾವಣಾ ಪ್ರಚಾರಗಳ ಸಂದರ್ಭದಲ್ಲಿ ತೇಜಸ್ವಿ ಸೂರ್ಯ ವಿರುದ್ಧ ಸಿದ್ದರಾಮಯ್ಯ ಟೀಕೆಗಳನ್ನು ಮಾಡಿದ್ದರು. ಸಿದ್ದರಾಮಯ್ಯ ವಿರುದ್ಧವೂ ತೇಜಸ್ವಿ ಸೂರ್ಯ ವಾಗ್ದಾಳಿ ನಡೆಸಿದ್ದರು.
ಬಿಜೆಪಿ ಕಾರ್ಯಕರ್ತರ ವಿರುದ್ಧ ಸುಳ್ಳು ಕೇಸ್; ಸೂರ್ಯ ಆರೋಪ
ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ತೇಜಸ್ವಿ ಸೂರ್ಯ, ಬಿಜೆಪಿ ಕಾರ್ಯಕರ್ತರ ವಿರುದ್ಧ ಧಮಕಿ ಹಾಕಿ, ಸುಳ್ಳು ಅಪಾದನೆಗಳ ಮೂಲಕ ಕೇಸ್ ದಾಖಲಿಸುವುದು ನಮ್ಮ ಗಮನಕ್ಕೆ ಬಂದಿದೆ. ಸಿದ್ದರಾಮಯ್ಯ ಅವರ ಮೊದಲ ಅವಧಿಯಲ್ಲಿ ಇದೇ ರೀತಿ ದ್ವೇಷದ ರಾಜಕಾರಣ ಮಾಡಲಾಗಿತ್ತು. ನಮ್ಮ ಕಾರ್ಯಕರ್ತರ ಮೇಲೆ ಅಂದು ರೌಡಿ ಶೀಟ್ ಓಪನ್ ಮಾಡುವ ಕೆಲಸ ಆಗಿತ್ತು. ಹಿಂದೂ ಕಾರ್ಯಕರ್ತರ ಹತ್ಯೆ ಆದಾಗ ಸರಿಯಾಗಿ ಕೇಸ್ ನಡೆಸದೇ ಇದ್ದಿದ್ದೂ ನಮ್ಮ ಗಮನಕ್ಕೆ ಬಂದಿದೆ. ಕಾಂಗ್ರೆಸ್ ಸರ್ಕಾರದ ಕಾನೂನಾತ್ಮಕ ದೌರ್ಜನ್ಯಗಳನ್ನು ಎದುರಿಸಲು ಹೆಲ್ಪ್ ಲೈನ್ ನಂಬರ್ ಅನ್ನು ರಾಜ್ಯದಲ್ಲಿ ಘೋಷಣೆ ಮಾಡುತ್ತೇವೆ. 24 ಗಂಟೆ ಕಾಲ ಈ ಹೆಲ್ಪ್ ಲೈನ್ ಕಾರ್ಯಕರ್ತರ ಸಹಾಯಕ್ಕೆ ಇರಲಿದೆ. ರಾಜ್ಯದಲ್ಲಿ ಇರುವ ನಮ್ಮ ವಕೀಲರ ತಂಡ ಕಾರ್ಯಕರ್ತರ ನೆರವಿಗೆ ಧಾವಿಸಲಿದೆ. ಬಿಜೆಪಿಯ ಕಾನೂನು ಪ್ರಕೋಷ್ಠದಿಂದ ತಂಡವನ್ನು ಸಜ್ಜುಗೊಳಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.
ಗಣಪತಿ ಪೆಂಡಾಲ್ ಹಾಕಲು ಕೂಡಾ ಕೋರ್ಟ್ ವರೆಗೂ ಹೋಗಿ ಅನುಮತಿ ಪಡೆಯುವ ದೈನೇಸಿ ಸ್ಥಿತಿ ಬಂದಿತ್ತು. ಆ ಸ್ಥಿತಿ ಮತ್ತೆ ಬರದಂತೆ ಕೋರ್ಟ್ ನಲ್ಲಿ ಪಿಐಎಲ್, ರಿಟ್ ಹಾಕಲು ಬೆಂಗಳೂರು, ಧಾರವಾಡ ಮತ್ತು ಕಲ್ಬುರ್ಗಿಯಲ್ಲಿ ವಕೀಲರ ತಂಡ ಇರಲಿದೆ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ