ವಾರ್ನರ್ ಅಬ್ಬರ… ಬೈರ್ಸ್ಟೋವ್ ಸಿಡಿಲಬ್ಬರ… ಕೊನೆಗೂ ಗೆದ್ದ ವಿಲಿಯಮ್ಸನ್ ಪಡೆ
The Hundred: ಜಾನಿ ಬೈರ್ಸ್ಟೋವ್ ಬ್ಯಾಟ್ನಿಂದ 50 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 86 ರನ್ಗಳು ಮೂಡಿಬಂತು. ಆದರೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್ ಸಿಗದ ಕಾರಣ ವೆಲ್ಷ್ ಫೈರ್ ತಂಡವು 100 ಎಸೆತಗಳಲ್ಲಿ 6 ವಿಕೆಟ್ ಕಳೆದುಕೊಂಡು 155 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಕೇನ್ ವಿಲಿಯಮ್ಸನ್ ನಾಯಕತ್ವದ ಲಂಡನ್ ಸ್ಪಿರಿಟ್ ತಂಡವು 8 ರನ್ಗಳ ರೋಚಕ ಜಯ ಸಾಧಿಸಿತು.
ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ದಿ ಹಂಡ್ರೆಡ್ ಲೀಗ್ನ 6ನೇ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಕಾರ್ಡಿಫ್ನ ಸೋಫಿಯಾ ಗಾರ್ಡನ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ವೆಲ್ಷ್ ಫೈರ್ ಹಾಗೂ ಲಂಡನ್ ಸ್ಪಿರಿಟ್ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್ನಲ್ಲಿ ಟಾಸ್ ಗೆದ್ದ ವೆಲ್ಷ್ ಫೈರ್ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಲಂಡನ್ ಸ್ಪಿರಿಟ್ ತಂಡಕ್ಕೆ ಅನುಭವಿ ಆರಂಭಿಕ ದಾಂಡಿಗ ಡೇವಿಡ್ ವಾರ್ನರ್ ಸ್ಫೋಟಕ ಆರಂಭ ಒದಗಿಸಿದ್ದರು. ಕಳೆದ ಕೆಲ ಪಂದ್ಯಗಳಿಂದ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದ ವಾರ್ನರ್ ಈ ಬಾರಿ ಭರ್ಜರಿ ಬ್ಯಾಟಿಂಗ್ ಮೂಲಕ ಗಮನ ಸೆಳೆದರು.
45 ಎಸೆತಗಳನ್ನು ಎದುರಿಸಿದ ಡೇವಿಡ್ ವಾರ್ನರ್ 6 ಭರ್ಜರಿ ಸಿಕ್ಸ್ ಹಾಗೂ 8 ಫೋರ್ಗಳೊಂದಿಗೆ ಅಜೇಯ 70 ರನ್ ಬಾರಿಸಿದರು. ಈ ಭರ್ಜರಿ ಅರ್ಧಶತಕದ ನೆರವಿನೊಂದಿಗೆ ಲಂಡನ್ ಸ್ಪಿರಿಟ್ ತಂಡವು 100 ಎಸೆತಗಳಲ್ಲಿ 5 ವಿಕೆಟ್ ಕಳೆದುಕೊಂಡು 163 ರನ್ ಕಲೆಹಾಕಿತು.
ಈ ಕಠಿಣ ಗುರಿಯನ್ನು ಬೆನ್ನತ್ತಿದ ವೆಲ್ಷ್ ಫೈರ್ ತಂಡಕ್ಕೆ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಜಾನಿ ಬೈರ್ಸ್ಟೋವ್ ವಿಸ್ಫೋಟಕ ಆರಂಭ ಒದಗಿಸಿದರು. ಮೊದಲ ಓವರ್ನಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ನೀಡಿದ್ದ ಜಾನಿ ಲಂಡನ್ ಸ್ಪಿರಿಟ್ ಬೌಲರ್ಗಳ ಬೆಂಡೆತ್ತಿದರು.
ಪರಿಣಾಮ ಜಾನಿ ಬೈರ್ಸ್ಟೋವ್ ಬ್ಯಾಟ್ನಿಂದ 50 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 6 ಫೋರ್ಗಳೊಂದಿಗೆ 86 ರನ್ಗಳು ಮೂಡಿಬಂತು. ಆದರೆ ಮತ್ತೊಂದು ತುದಿಯಲ್ಲಿ ಉತ್ತಮ ಸಾಥ್ ಸಿಗದ ಕಾರಣ ವೆಲ್ಷ್ ಫೈರ್ ತಂಡವು 100 ಎಸೆತಗಳಲ್ಲಿ 6 ವಿಕೆಟ್ ಕಳೆದುಕೊಂಡು 155 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಕೇನ್ ವಿಲಿಯಮ್ಸನ್ ನಾಯಕತ್ವದ ಲಂಡನ್ ಸ್ಪಿರಿಟ್ ತಂಡವು 8 ರನ್ಗಳ ರೋಚಕ ಜಯ ಸಾಧಿಸಿತು.
