ಮಧುಗಿರಿ: ಕಲಬೆರಕೆ ಸೇಂದಿ ಸೇವಿಸಿ ಕರ್ನಾಟಕ, ಆಂಧ್ರ ಪ್ರದೇಶದ 15 ಮಂದಿ ಅಸ್ವಸ್ಥ

Edited By:

Updated on: Nov 03, 2025 | 10:18 AM

ಕರ್ನಾಟಕ ಹಾಗೂ ಆಂಧ್ರ ಪ್ರದೇಶದ ಗಡಿ ಭಾಗದಲ್ಲಿ, ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿ ಹೋಬಳಿಯಲ್ಲಿ ಕಲಬೆರಕೆ ಸೇಂದಿ ಸೇವಿಸಿದ 15 ಮಂದಿ ಅಸ್ವಸ್ಥರಾಗಿರುವ ಘಟನೆ ನಡೆದಿದೆ. ಸದ್ಯ, ಅಸ್ವಸ್ಥರಾದವರಿಗೆ ಹಿಂದೂಪುರ ಹಾಗೂ ಬೆಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಆಂಧ್ರ ಹಾಗೂ ಕರ್ನಾಟಕ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ತುಮಕೂರು, ನವೆಂಬರ್ 3: ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಆಂಧ್ರ ಗಡಿಭಾಗದಲ್ಲಿ ಕಲಬೆರಕೆ ಸೇಂದಿ ಸೇವಿಸಿದ 15 ಮಂದಿ ಅಸ್ವಸ್ಥರಾಗಿರುವ ಘಟನೆ ಬೆಳಕಿಗೆ ಬಂದಿದೆ. ತೆರಿಯೂರು ಗ್ರಾಮದ 10 ಮಂದಿ ಹಾಗೂ ಆಂಧ್ರಪ್ರದೇಶದ ಚೋಳೂರು ಗ್ರಾಮದ 5 ಮಂದಿ ಅಸ್ವಸ್ಥರಾಗಿದ್ದಾರೆ. ಇವರಲ್ಲಿ ಕೆಲವರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆಗಾಗಿ ಹಿಂದೂಪುರ ಹಾಗೂ ಬೆಂಗಳೂರಿನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಅಸ್ವಸ್ಥರಾದ ನಾಗರಾಜು ಮತ್ತು ನಿಂಗಕ್ಕ ಅವರನ್ನು ಹಿಂದೂಪುರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೆರಿಯೂರು ಗ್ರಾಮದ ಮಾರಪ್ಪ, ದಾಸಪ್ಪ, ಚಿಕ್ಕನರಸಿಂಹಯ್ಯ ಹಾಗೂ ಟಿ. ನಾಗರಾಜು ಅವರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಇನ್ನುಳಿದವರು ಪ್ರಾಥಮಿಕ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ತಿಳಿದುಬಂದಿದೆ. ಘಟನೆ ನಡೆದ ಸ್ಥಳವಾದ ಚರ್ಲಾಪಳ್ಳಿ ಮುದ್ದೇನಹಳ್ಳಿ ಗೇಟ್ ಬಳಿ ಕೊಡಿಗೇನಹಳ್ಳಿ ಪೊಲೀಸರು ಹಾಗೂ ಆಂಧ್ರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ನಡೆದ ಈ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ