ಚಾಮರಾಜನಗರ: ಅಂಬೇಡ್ಕರ್ ಬ್ಯಾನರ್, ಬುದ್ಧನ ಪುತ್ಥಳಿ ಧ್ವಂಸ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಚಾಮರಾಜನಗರದಲ್ಲಿ ಅಂಬೇಡ್ಕರ್ ಬ್ಯಾನರ್ ಹಾಗೂ ಬುದ್ಧನ ಪುತ್ಥಳಿ ಧ್ವಂಸ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ನವೆಂಬರ್ 4ರಂದು ಮಂಜುನಾಥ್ ಎಂಬಾತನನ್ನು ಬಂಧಿಸಿದ ಪೊಲೀಸರ ವಿರುದ್ಧ ಅಮಾಯಕರನ್ನು ಬಂಧಿಸಿ, ತಪ್ಪೊಪ್ಪಿಕೊಳ್ಳಲು ಚಿತ್ರಹಿಂಸೆ ನೀಡಿರುವ ಗಂಭೀರ ಆರೋಪ ಕೇಳಿಬಂದಿದೆ. ಮಂಜುನಾಥ್ ಸ್ನೇಹಿತ ಶಿವಣ್ಣನನ್ನು ಥರ್ಡ್ ಡಿಗ್ರಿ ಟ್ರೀಟ್‌ಮೆಂಟ್‌ಗೆ ಒಳಪಡಿಸಿರುವುದು ಬಯಲಾಗಿದೆ.
ಚಾಮರಾಜನಗರ, ನವೆಂಬರ್ 9: ಚಾಮರಾಜನಗರದ ಜ್ಯೋತಿಗೌಡನಪುರದಲ್ಲಿ ಅಂಬೇಡ್ಕರ್ ಬ್ಯಾನರ್ ಹರಿದು ಬುದ್ಧನ ಪುತ್ಥಳಿ ಹಾನಿಗೊಳಿಸಿದ ಪ್ರಕರಣಕ್ಕೆ ಈಗ ಹೊಸ ತಿರುವು ಸಿಕ್ಕಿದೆ. ಪೊಲೀಸರು ನಿಜವಾದ ಆರೋಪಿಯನ್ನು ಬಿಟ್ಟು ನಿರಪರಾಧಿಯನ್ನು ಬಂಧಿಸಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಎಸ್‌ಪಿ ಡಾ. ಬಿ.ಟಿ. ಕವಿತಾ ನವೆಂಬರ್ 4ರಂದು ಮಂಜುನಾಥ್ ಅಲಿಯಾಸ್ ಪೆಂಡಾಲ್ ಮಂಜನ ಬಂಧನ ಬಗ್ಗೆ ತಿಳಿಸಿದ್ದರು. ರಾತ್ರಿಯಲ್ಲಿ ಕುಡಿದು ಬರುತ್ತಿದ್ದ ಮಂಜುನಾಥನೇ ಈ ಕೃತ್ಯವೆಸಗಿದ್ದಾನೆಂದು ಪೊಲೀಸರು ಆರೋಪಿಸಿದ್ದರು. ಆ ದಿನ ಅವನೊಡನಿದ್ದಸ್ನೇಹಿತ ಶಿವಣ್ಣನೂ ಈ ಕೃತ್ಯಕ್ಕೆ ಸಾಥ್ ಕೊಟ್ಟಿದ್ದಾನೆಂದು ಆರೋಪಿಸಲಾಗಿತ್ತು. ಮಂಜುನಾಥನೇ ಈ ಕೃತ್ಯ ಎಸಗಿದ್ದಾನೆಂದು ಬಲವಂತವಾಗಿ ಆತನ ಸ್ನೇಹಿತ ಶಿವಣ್ಣನಿಂದ ಹೇಳಿಸಲು ಪ್ರಯತ್ನಿಸಿದ್ದಾರೆ. ಆದರೆ ಆತನ ಸ್ನೇಹಿತ ಈ ಕೆಲಸಕ್ಕೆ ಒಪ್ಪದ ಕಾರಣ ತಪ್ಪೊಪ್ಪಿಸಲು ಥರ್ಡ್ ಡಿಗ್ರಿ ಹಿಂಸೆ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.
ಮಂಜುನಾಥ್ ಈ ಹಿಂದೆ ಗ್ರಾಮದ ಮಹಿಳೆಗೆ ಚಪ್ಪಲಿಯಿಂದ ಹೊಡೆದ ಪ್ರಕರಣದಲ್ಲೂ ವಿವಾದಕ್ಕೊಳಗಾಗಿದ್ದನು. ಆಗ ದಲಿತ ಮುಖಂಡರು ಸೇರಿ ಅವನಿಗೆ 60 ಸಾವಿರ ರೂಪಾಯಿ ದಂಡ ವಿಧಿಸಿದ್ದರು. ದಂಡದ ಹಣ ಕಟ್ಟಲು ತನ್ನ ಬೈಕ್ ಅಡವಿಟ್ಟಿದ್ದ ಮಂಜುನಾಥ್, ಇದೇ ಕೋಪಕ್ಕೆ ಅಂಬೇಡ್ಕರ್ ಬ್ಯಾನರ್ ಹರಿದು ಬುದ್ಧನ ಪುತ್ಥಳಿ ಹಾನಿಗೊಳಿಸಿದ್ದಾನೆಂದು ಪೊಲೀಸರು ಹೇಳಿಕೆ ನೀಡಿದ್ದರು. ಈ ಹಿನ್ನೆಲೆ ವಾಲ್ಮೀಕಿ ಸಮುದಾಯ, ಪೊಲೀಸರು ಅಮಾಯಕನನ್ನು ಕೇಸ್‌ನಲ್ಲಿ ಫಿಟ್ ಮಾಡಿದ್ದಾರೆಂದು ಪ್ರತಿಭಟಿಸಿದ್ದು, ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕೆಂದು ಆಗ್ರಹಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
