ಬೆಂಗಳೂರು, ನವೆಂಬರ್ 24: ಬೊಮ್ಮನಹಳ್ಳಿ ಹೊಸೂರು ರಸ್ತೆಯ ಉಬರ್ ಹೆಡ್‌ಆಫೀಸ್ ಮುಂದೆ ಸಾವಿರಾರು ಕ್ಯಾಬ್ ಚಾಲಕರು ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಾರೆ. ಉಬರ್ ಅಧಿಕಾರಿಗಳು ಕರ್ನಾಟಕದ ಚಾಲಕರಿಗೆ ಡ್ಯೂಟಿ ನೀಡದೆ, ಬೇರೆ ರಾಜ್ಯದವರಿಗೆ ಅವಕಾಶ ನೀಡುತ್ತಿದ್ದಾರೆ. ಬಾಂಗ್ಲಾದೇಶ ಮೂಲದ ಡಿಎಲ್ ಇಲ್ಲದವರಿಗೂ ಕೆಲಸ ನೀಡುತ್ತಿದ್ದಾರೆ ಎಂದು ಚಾಲಕರು ಆರೋಪಿಸಿದ್ದಾರೆ.ಅಷ್ಟೇ ಅಲ್ಲದೇ ಸ್ವಂತ ಕಾರುಗಳಿಗೆ ಮಾತ್ರ ಬಾಡಿಗೆ ಬುಕ್ಕಿಂಗ್ ನೀಡಿ, ಅಟ್ಯಾಚ್ ಮಾಡಿದ ವಾಹನಗಳಿಗೆ ಡ್ಯೂಟಿ ನೀಡುತ್ತಿಲ್ಲವೆಂದು ಚಾಲಕರು ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ಚಾಲಕರು ಕಬ್ಬಿಣದ ರಾಡ್ನಿಂದ ಉಬರ್ ಕಂಪನಿ ಬಾಗಿಲು ತರೆಯಲು ಮುಂದಾಗಿದ್ದು, ಉಬರ್ ಕಂಪನಿ ಅಧಿಕಾರಿಗಳು ಮತ್ತು ಸಿಬ್ಬಂದಿ ಹಿಂದಿನ ಬಾಗಿಲಿನಿಂದ ಹೊರ ಹೋಗಿದ್ದಾರೆ.
ಇತ್ತ ಬಾಡಿಗೆಯು ಇಲ್ಲ, ಅತ್ತ ಮಾಡಿರುವ ಸಾಲ ತೀರಿಸಲು ಆಗದೆ ಪರದಾಡುವಂತಾಗಿದೆ. ಒನ್ ಸಿಟಿ ಒನ್ ಫೇರ್ ಜಾರಿಯಾಲ್ಲಿದ್ದರೂ ಉಬರ್ ಕಂಪನಿ ಮಾತ್ರ ಪ್ರಯಾಣಿಕರಿಂದ ಅನಧಿಕೃತವಾಗಿ ದುಪ್ಪಟ್ಟು ದರ ಪಡೆಯುತ್ತಿದೆ. ಪೀಕ್ ಅವರ್ ನಲ್ಲಿ ಒಂದು ದರ, ನಾರ್ಮಲ್ ಅವರ್ ನಲ್ಲಿ ಒಂದು ದರ, ಮಳೆ ಬಂದಾಗ ಒಂದು ದರ ಎಂದು ಮನ ಬಂದಂತೆ ಹಣ ಪಡೆಯುತ್ತಿದೆ ಎಂದು ಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ವೇಳೆ ಸ್ಥಳಕ್ಕೆ ಬಂದ ಪರಪ್ಪನ ಅಗ್ರಹಾರ ಸ್ಟೇಷನ್ ಪೋಲಿಸರು ಆಗಿರುವ ಅನ್ಯಾಯದ ವಿರುದ್ಧ ದೂರು ನೀಡುವಂತೆ ಚಾಲಕರಿಗೆ ಹೇಳಿದಾಗ, ಈ ಹಿಂದೆ ಸಾಕಷ್ಟು ಬಾರಿ ದೂರು ನೀಡಿದ್ದೇವೆ ಆದರೆ ಪೋಲಿಸರು ಇವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಚಾಲಕರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ಉಬರ್ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸುವಂತೆ ಚಾಲಕರು ಪೊಲೀಸರಿಗೆ ಒತ್ತಾಯಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:05 pm, Mon, 24 November 25