ಉಡುಪಿ ಶ್ರೀಕೃಷ್ಣಮಠದಲ್ಲಿ ವಸ್ತ್ರಸಂಹಿತೆ ಜಾರಿ: ಇಲ್ಲಿದೆ ಭಕ್ತರಿಗೆ ಕೆಲ ಸೂಚನೆ
ಉಡುಪಿ ಶ್ರೀಕೃಷ್ಣಮಠದಲ್ಲಿ ಹೊಸ ವಸ್ತ್ರಸಂಹಿತೆ ಜಾರಿಗೆ ಬಂದಿದ್ದು, ಭಕ್ತಾದಿಗಳು ಸಾಂಪ್ರದಾಯಿಕ ಉಡುಪಿನಲ್ಲಿ ಬರಬೇಕೆಂದು ಸೂಚಿಸಲಾಗಿದೆ. ಪುರುಷರಿಗೆ ಅಂಗಿ-ಬನಿಯನ್, ಬರ್ಮುಡಾ ನಿಷಿದ್ಧ. ಮಹಿಳೆಯರು ವೆಸ್ಟರ್ನ್ ಬಟ್ಟೆಗಳ ಬದಲು ಸೀರೆ, ಸಲ್ವಾರ್‌ನಂತಹ ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಬೇಕು. ಧಾರ್ಮಿಕ ಪಾವಿತ್ರ್ಯತೆ ಕಾಪಾಡಲು ಈ ನಿಯಮಗಳನ್ನು ಜಾರಿಗೆ ತಂದಿರೋದಾಗಿ ಆಡಳಿತ ಮಂಡಳಿ ತಿಳಿಸಿದೆ.
ಉಡುಪಿ, ಜನವರಿ 20: ಶ್ರೀಕೃಷ್ಣ ಮಠದಲ್ಲಿ ಶೀರೂರು ಪರ್ಯಾಯ ಆರಂಭವಾಗುತ್ತಿದ್ದಂತೆ ಮಠಕ್ಕೆ ಬರುವ ಭಕ್ತಾದಿಗಳಿಗೆ ವಸ್ತ್ರಸಂಹಿತೆ ಜಾರಿ ಮಾಡಲಾಗಿದೆ. ಪುರುಷರು ಅಂಗಿ ಬನಿಯನ್ ಧರಿಸಿ ಮಠ ಪ್ರವೇಶಿಸುವಂತಿಲ್ಲ ಮತ್ತು ಬರ್ಮುಡಾ ಸೇರಿ ಬಿಗಿ ಉಡುಪುಗಳಿಗೆ ಅವಕಾಶವಿರುವುದಿಲ್ಲ. ಮಹಿಳೆಯರು ವೆಸ್ಟರ್ನ್ ಬಟ್ಟೆಗಳ ಬದಲು ಸಾಂಪ್ರದಾಯಿಕ ಬಟ್ಟೆಯನ್ನು ಧರಿಸಿ ಬರುವಂತೆ ಮಠದ ಆಡಳಿತ ಮಂಡಳಿ ಮನವಿ ಮಾಡಿದೆ. ಪರ್ಯಾಯ ಶೀರೂರು ಸ್ವಾಮೀಜಿಗಳ ಸೂಚನೆಯಮತೆ ನಿನ್ನೆಯಿಂದಲೇ ದೇಗುಲದಲ್ಲಿ ನೂತನ ವಸ್ತ್ರಸಂಹಿತೆ ಜಾರಿ ಮಾಡಲಾಗಿದೆ.
ಈ ಹಿಂದೆ ಮಹಾಪೂಜೆ ನಂತರ ಪುರುಷರು ಅಂಗಿ ಮತ್ತು ಬನಿಯನ್ ಧರಿಸಿಯೇ ದೇವರ ದರ್ಶನ ಮಾಡಬಹುದಿತ್ತು. ಆದರೆ ಇನ್ನು ಮುಂದೆ ವಸ್ತ್ರ ಸಂಹಿತೆ ಪಾಲನೆ ಕಡ್ಡಾಯವಾಗಿರಲಿದೆ. ರಾತ್ರಿಯವರೆಗೂ ವಿವಿಧ ಬಗೆಯ ಪೂಜೆಗಳು ನಡೆಯುವ ಕಾರಣ ಪೂರ್ತಿ ದಿನಕ್ಕೂ ವಸ್ತ್ರ ಸಂಹಿತೆ ಜಾರಿ ಮಾಡಿರೋದಾಗಿ ತಿಳಿಸಲಾಗಿದೆ.
ಯಾವ್ಯಾವ ದೇಗುಲಗಳಲ್ಲಿ ವಸ್ತ್ರಸಂಹಿತೆ ಜಾರಿಯಲ್ಲಿದೆ?
ಕೊಲ್ಲೂರು, ಧರ್ಮಸ್ಥಳ, ಮುರುಡೇಶ್ವರ, ಕುಕ್ಕೆ ಸುಬ್ರಹ್ಮಣ್ಯ ಸೇರಿ ರಾಜ್ಯದ ಹಲವು ಪ್ರಮುಖ ದೇವಾಲಯಗಲಲ್ಲಿ ಈಗಾಗಲೇ ವಸ್ತ್ರಸಂಹಿತೆ ಜಾರಿಯಲ್ಲಿದೆ. ಇನ್ನು ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬರುವ ಎಲ್ಲ ದೇವಾಲಯಗಳಲ್ಲಿ ಸರ್ಕಾರವು ಅಧಿಕೃತವಾಗಿ ವಸ್ತ್ರಸಂಹಿತೆಯನ್ನು ಕಡ್ಡಾಯಗೊಳಿಸಿಲ್ಲವಾದರೂ ಸ್ಥಳೀಯ ದೇವಾಲಯದ ಆಡಳಿತ ಮಂಡಳಿಗಳು ಮತ್ತು ಭಕ್ತರ ಮಂಡಳಿಗಳು ಧಾರ್ಮಿಕ ಪಾವಿತ್ರ್ಯತೆಗಾಗಿ ಈ ನಿಯಮಗಳನ್ನು ಜಾರಿಗೊಳಿಸಿವೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.