ದಲಿತ ಮಹಿಳೆ ನೀರು ಕುಡಿದಿದ್ದಕ್ಕೆ ಗೋ ಮೂತ್ರ ಸಿಂಪಡಣೆ: ದಲಿತ ಯುವಕರಿಗೆ ಗ್ರಾಮದ ಎಲ್ಲಾ ಟ್ಯಾಂಕ್​ನ ನೀರು ಕುಡಿಸಿದ ತಹಶೀಲ್ದಾರ್

| Updated By: ವಿವೇಕ ಬಿರಾದಾರ

Updated on: Nov 20, 2022 | 7:45 PM

ಚಾಮರಾಜನಗರ ತಾಲೂಕಿನ ಹೆಗ್ಗೊಠಾರ ಗ್ರಾಮದಕ್ಕೆ ತಹಶೀಲ್ದಾರ್ ಬಸವರಾಜು ಭೇಟಿ ನೀಡಿ ದಲಿತ ಯುವಕರಿಗೆ ಟ್ಯಾಂಕ್​ನ​ ನೀರನ್ನು ಕುಡಿಸಿ ಅಸ್ಪೃಶ್ಯತೆಯನ್ನು ಹೋಗಲಾಡಿಸಿದ್ದಾರೆ.

ಚಾಮರಾಜನಗರ: ನಿನ್ನೆ (ನ.19) ಚಾಮರಾಜನಗರ ತಾಲೂಕಿನ ಹೆಗ್ಗೊಠಾರ ಗ್ರಾಮದಲ್ಲಿ ನಡೆದ ಮದುವೆಗೆ ದಲಿತ ಮಹಿಳೆಯೊಬ್ಬರು ಬಂದಿದ್ದರು. ಈ ವೇಳೆ ದಲಿತ ಮಹಿಳೆ ಗ್ರಾಮದ ಟ್ಯಾಂಕ್​​ವೊಂದರ ನಲ್ಲಿಯಲ್ಲಿ ನೀರು ಕುಡಿದಿದ್ದರು. ಆಗ ಓರ್ವ ಗ್ರಾಮಸ್ಥ ಇದು ಬ್ರಾಹ್ಮಣರ ಬೀದಿ‌ ಇಲ್ಲಿ ನೀರು ಕುಡಿಯಬಾರದು ಎಂದಿದ್ದನು. ಬಳಿಕ ಗೋಮೂತ್ರ ಸಿಂಪಡಿಸಿ ಟ್ಯಾಂಕ್​​ ಸ್ವಚ್ಛಗೊಳಿಸಲಾಗಿತ್ತು. ಈ ಬಗ್ಗೆ ತಹಶೀಲ್ದಾರ್ ಬಸವರಾಜುಗೆ ಗ್ರಾಮಸ್ಥರು ಮಾಹಿತಿ ನೀಡಿದ್ದರು. ಹೀಗಾಗಿ ಇಂದು (ನ.20) ಹೆಗ್ಗೊಠಾರ ಗ್ರಾಮಕ್ಕೆ ಸಮಾಜ ಕಲ್ಯಾಣ ಇಲಾಖಾ ಅಧಿಕಾರಿ, ತಹಶೀಲ್ದಾರ್ ಬಸವರಾಜು​ ಭೇಟಿ ನೀಡಿ ಗ್ರಾಮದ ಎಲ್ಲಾ ಟ್ಯಾಂಕ್​​ನ ನಲ್ಲಿಯಿಂದ ದಲಿತ ಯುವಕರಿಗೆ ನೀರು ಕುಡಿಸಿದ್ದಾರೆ.

ಬಳಿಕ ತಹಶೀಲ್ದಾರ್ ಬಸವರಾಜು ಎಲ್ಲಾ ಸಮುದಾಯದ ಮುಖಂಡರ ಸಭೆ ನಡೆಸಿದ್ದಾರೆ. ಟ್ಯಾಂಕ್​​ ಮೇಲೆ ಇದು ಸಾರ್ವಜನಿಕರ ಉಪಯೋಗಕ್ಕಾಗಿ. ಎಲ್ಲಾ ವರ್ಗದವರು ಕೂಡ ಕುಡಿಯಲು ನೀರನ್ನು ಬಳಸಬಹುದೆಂದು ಬರೆಸಿದ್ದಾರೆ. ಇಂತಹ ಘಟನೆ ಮರುಕಳಿಸದಂತೆ ಗ್ರಾಮಸ್ಥರಿಗೆ ತಹಶೀಲ್ದಾರ್ ಎಚ್ಚರಿಕೆ ನೀಡಿದ್ದಾರೆ.

Published on: Nov 20, 2022 07:43 PM