ಕಾರ್ಲೋಸ್ ಅಲ್ಕರಾಝ್ ಮುಂದೆ ಮಂಡಿಯೂರಿದ ನೊವಾಕ್ ಜೊಕೊವಿಚ್

Updated on: Sep 06, 2025 | 8:18 AM

US Open 2025: ಈ ಬಾರಿಯ ವಿಂಬಲ್ಡನ್ ಟ್ರೋಫಿ ಗೆದ್ದಿದ್ದರೆ ಅತೀ ಹೆಚ್ಚು ಗ್ರ್ಯಾಂಡ್ ಸ್ಲಾಮ್ ಗೆದ್ದ ವಿಶ್ವ ದಾಖಲೆ ನೊವಾಕ್ ಜೊಕೊವಿಚ್ ಪಾಲಾಗುತ್ತಿತ್ತು. ಏಕೆಂದರೆ ಗ್ರ್ಯಾಂಡ್ ಸ್ಲಾಮ್​ ಇತಿಹಾಸದಲ್ಲೇ ಅತ್ಯಧಿಕ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ದಾಖಲೆಯನ್ನು ಜೊಕೊವಿಚ್ ಮಹಿಳಾ ತಾರೆ ಮಾರ್ಗರೇಟ್ ಕೋರ್ಟ್ ಜೊತೆ ಹಂಚಿಕೊಂಡಿದ್ದಾರೆ. ಇಬ್ಬರು ಒಟ್ಟು 24 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಈ ಬಾರಿಯ ಯುಎಸ್ ಓಪನ್ ಗೆದ್ದಿದ್ದರೆ 25 ಗ್ರ್ಯಾಂಡ್ ಸ್ಲಾಮ್​ನೊಂದಿಗೆ ಜೊಕೊವಿಚ್ ಅಗ್ರಸ್ಥಾನಕ್ಕೇರುತ್ತಿದ್ದರು. ಆದರೆ ಸೆಮಿಫೈನಲ್​ನಲ್ಲಿ ಮುಗ್ಗರಿಸುವ ಮೂಲಕ ನೊವಾಕ್ ಜೊಕೊವಿಚ್ ಯುಎಸ್​ ಓಪನ್​ನಿಂದ ಹೊರಬಿದ್ದಿದ್ದಾರೆ.

25ನೇ ಬಾರಿ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಗೆಲ್ಲುವ ಕನಸಿನೊಂದಿಗೆ ಯುಎಸ್​ ಓಪನ್ ಅಂಗಳಕ್ಕೆ ಬಂದಿದ್ದ ನೊವಾಕ್ ಜೊಕೊವಿಚ್ ಅವರ ಕನಸು ಮತ್ತೊಮ್ಮೆ ಕಮರಿದೆ. ಈ ಬಾರಿ ಅವರ ಕನಸಿಗೆ ಅಡ್ಡಿಯಾಗಿದ್ದು ಯುವ ತಾರೆ ಕಾರ್ಲೋಸ್ ಅಲ್ಕರಾಝ್. USTA ಬಿಲ್ಲಿ ಜೀನ್ ಕಿಂಗ್ ನ್ಯಾಷನಲ್ ಟೆನಿಸ್ ಸೆಂಟರ್​ನಲ್ಲಿ ನಡೆದ ಈ ಪಂದ್ಯದಲ್ಲಿ 38 ವರ್ಷದ ನೊವಾಕ್ ಜೊಕೊವಿಚ್ ಹಾಗೂ 22 ವರ್ಷದ ಕಾರ್ಲೋಸ್ ಅಲ್ಕರಾಝ್ ಮುಖಾಮುಖಿಯಾಗಿದ್ದರು.

ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಲಾಗಿದ್ದ ಈ ಪಂದ್ಯದ ಮೊದಲ ಸೆಟ್​ ಅನ್ನು ಕಾರ್ಲೊಸ್ ಅಲ್ಕರಾಝ್ 6-4 ಅಂಕಗಳ ಅಂತರದಿಂದ ಗೆದ್ದುಕೊಂಡರು. ಇನ್ನು ದ್ವಿತೀಯ ಸೆಟ್​​ನಲ್ಲಿ ಕಂಬ್ಯಾಕ್ ಮಾಡುವ ಯತ್ನ ಮಾಡಿದ ಜೊಕೊವಿಚ್ ತನ್ನೆಲ್ಲಾ ಅನುಭವಗಳನ್ನು ಧಾರೆಯೆದರು. ಇದಾಗ್ಯೂ ಯುವ ತರುಣನ ಪಾದರಸದಂತಹ ಚಲನೆಯ ಮುಂದೆ ನೊವಾಕ್ ಮಂಡಿಯೂರಬೇಕಾಯಿತು. ಪರಿಣಾಮ ದ್ವಿತೀಯ ಸೆಟ್​ ಅನ್ನು ಕೂಡ ಜೊಕೊವಿಚ್ 6-7 ಅಂಕಗಳ ಅಂತರದಿಂದ ಸೋತರು.

ಇನ್ನು ನಿರ್ಣಾಯಕವಾಗಿದ್ದ ಮೂರನೇ ಸೆಟ್​ನಲ್ಲಿ ಆಕ್ರಮಣಕಾರಿ ಆಟದೊಂದಿಗೆ ಗಮನ ಸೆಳೆದ ಕಾರ್ಲೋಸ್ ಅಲ್ಕರಾಝ್ ಬ್ಯಾಕ್ ಟು ಬ್ಯಾಕ್ ಅಂಕಗಳನ್ನು ಗಳಿಸುತ್ತಾ ಸಾಗಿದರು. ಪರಿಣಾಮ ಜೊಕೆವಿಚ್ 2 ಪಾಯಿಂಟ್ಸ್​ ಗಳಿಸುವಷ್ಟರಲ್ಲಿ ಅಲ್ಕರಾಝ್ 6 ಅಂಕಗಳನ್ನು ಪಡೆದು ಮೂರನೇ ಸೆಟ್ ಗೆದ್ದುಕೊಂಡರು.

ಈ ಮೂಲಕ 6–4, 7–6, 6–2 ನೇರ ಸೆಟ್​ಗಳಿಂದ ನೊವಾಕ್ ಜೊಕೊವಿಚ್​​ಗೆ ಸೋಲುಣಿಸಿ ಕಾರ್ಲೋಸ್ ಅಲ್ಕರಾಝ್ ಯುಎಸ್​ ಓಪನ್​ನ ಫೈನಲ್​ಗೆ ಎಂಟ್ರಿ ಕೊಟ್ಟಿದ್ದಾರೆ.

ಕಮರಿದ ಜೊಕೊವಿಚ್ ಕನಸು:

ಈ ಬಾರಿಯ ವಿಂಬಲ್ಡನ್ ಟ್ರೋಫಿ ಗೆದ್ದಿದ್ದರೆ ಅತೀ ಹೆಚ್ಚು ಗ್ರ್ಯಾಂಡ್ ಸ್ಲಾಮ್ ಗೆದ್ದ ವಿಶ್ವ ದಾಖಲೆ ನೊವಾಕ್ ಜೊಕೊವಿಚ್ ಪಾಲಾಗುತ್ತಿತ್ತು. ಏಕೆಂದರೆ ಗ್ರ್ಯಾಂಡ್ ಸ್ಲಾಮ್​ ಇತಿಹಾಸದಲ್ಲೇ ಅತ್ಯಧಿಕ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ದಾಖಲೆಯನ್ನು ಜೊಕೊವಿಚ್ ಮಹಿಳಾ ತಾರೆ ಮಾರ್ಗರೇಟ್ ಕೋರ್ಟ್ ಜೊತೆ ಹಂಚಿಕೊಂಡಿದ್ದಾರೆ. ಇಬ್ಬರು ಒಟ್ಟು 24 ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. ಈ ಬಾರಿಯ ಯುಎಸ್ ಓಪನ್ ಗೆದ್ದಿದ್ದರೆ 25 ಗ್ರ್ಯಾಂಡ್ ಸ್ಲಾಮ್​ನೊಂದಿಗೆ ಜೊಕೊವಿಚ್ ಅಗ್ರಸ್ಥಾನಕ್ಕೇರುತ್ತಿದ್ದರು. ಆದರೆ ಸೆಮಿಫೈನಲ್​ನಲ್ಲಿ ಮುಗ್ಗರಿಸುವ ಮೂಲಕ ನೊವಾಕ್ ಜೊಕೊವಿಚ್ ಯುಎಸ್​ ಓಪನ್​ನಿಂದ ಹೊರಬಿದ್ದಿದ್ದಾರೆ.