ಅಂಕೋಲಾ ಹೆದ್ದಾರಿಯಲ್ಲಿ ಗುಡ್ಡ ಕುಸಿತ: ಮಾಲೀಕನಿಗಾಗಿ ಕಾದು ಸುಸ್ತಾದ ಸಾಕು ನಾಯಿ, ವಿಡಿಯೋ ನೋಡಿ

| Updated By: ಗಣಪತಿ ಶರ್ಮ

Updated on: Jul 18, 2024 | 9:51 AM

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಗುಡ್ಡ ಕುಸಿದು ಬಿದ್ದ ಭೀಕರ ದೃಶ್ಯ ಜನರ ಮನಕಲಕುವಂತಿದೆ. ಈವರೆಗೆ ನಾಲ್ವರ ಶವ ಪತ್ತೆ ಆಗಿದ್ದು, ಉಳಿದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಈ ಮಧ್ಯೆ, ಮಣ್ಣಿನಡಿ ಸಿಲುಕಿದ್ದ ಮಾಲೀಕ ಮತ್ತೆ ಬರುವನೇ ಎಂದು ಸಾಕು ನಾಯಿಯೊಂದು ಕಾದು ಕುಳಿತ ದೃಶ್ಯ ಕಲ್ಲೆದೆಯನ್ನೂ ಕರಗಿಸುವಂತಿದೆ.

ಕಾರವಾರ, ಜುಲೈ 17: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ ಮೇಲೆ ಬೃಹತ್ ಗುಡ್ಡ ಕುಸಿದು ಬಿದ್ದು ಸುಮಾರು 7 ಮಂದಿ ಮೃತಪಟ್ಟಿದ್ದು, ಇನ್ನಷ್ಟು ಮಂದಿ ಅವಶೇಷಗಳಡಿ ಸಿಲುಕಿದ್ದಾರೆ. ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈ ಮಧ್ಯೆ, ಸಾಕು ನಾಯಿಯೊಂದು ಮಾಲೀಕರು ಈಗ ಬರಬಹುದು ಎಂದು ಕಾದು ಕುಳಿತಿರುವ ದೃಶ್ಯ ಸ್ಥಳದಲ್ಲಿದ್ದವರ ಮನಕಲಕುವಂತೆ ಮಾಡಿತು.

ನಿಜಕ್ಕೂ ಆ ದೃಶ್ಯ ನೋಡಿದರೆ ದೇವರಿಗೇ ಶಾಪ ಹಾಕಬೇಕು ಎಂದೆನಿಸಬಹುದು. ನಿತ್ಯವೂ ತನಗೆ ಆಹಾರ ನೀಡುತ್ತಿದ್ದ ಮಾಲೀಕ, ತನ್ನನ್ನು ಮನೆ ಸದಸ್ಯನಂತೆ ನೋಡಿಕೊಳ್ಳುತ್ತಿದ್ದಾತ ಇಂದು ಎಲ್ಲಿ ಹೋದರು ಎಂದು ಸಾಕು ನಾಯಿ ಪರದಾಡುತ್ತಿದ್ದ ದೃಶ್ಯ ಸ್ಥಳದಲ್ಲಿದ್ದವರ ಕಣ್ಣಂಚಲ್ಲಿ ನೀರು ತರಿಸುವಂತಿತ್ತು.

ನಾಲ್ವರ ಶವ ಪತ್ತೆ; ಉಳಿದವರಿಗಾಗಿ ಮುಂದುವರೆದ ಶೋಧ

ಗುಡ್ಡ ಕುಸಿತವಾದ ಸ್ಥಳದಲ್ಲಿ ಈವರೆಗೆ ನಾಲ್ವರ ಶವ ಪತ್ತೆ ಆಗಿದೆ. ಟೀ ಅಂಗಡಿ ಮಾಲೀಕ ಲಕ್ಷ್ಮಣ ನಾಯ್ಕ್​, ಪತ್ನಿ ಶಾಂತಿ, ಪುತ್ರ ರೋಷನ್, ಟ್ರಕ್​ ಚಾಲಕನ ಮೃತದೇಹ ಸಿಕ್ಕಿದೆ. ಉಳಿದವರಿಗಾಗಿ ಶೋಧ ಕಾರ್ಯ ಮುಂದುವರೆದಿದ್ದು, ಎನ್​​ಡಿಆರ್​ಎಫ್ ಸಿಬ್ಬಂದಿ, ಪೊಲೀಸರು ಹಾಗೂ ಶ್ವಾನದಳ ಸ್ಥಳದಲ್ಲಿದ್ದು ಕಾರ್ಯಾಚರಣೆ ನಡೆಸುತ್ತಿವೆ.

ಎರಡು ಮನೆಗಳು ನೆಲಸಮ; ವೃದ್ಧೆ ಸಾವು

ಗುಡ್ಡ ಕುಸಿತದ ಪರಿಣಾಮ 500 ಮೀಟರ್​ ದೂರದಲ್ಲಿರುವ ಮನೆಗಳಿಗೂ ಹಾನಿಯಾಗಿದೆ. ಎರಡು ಮನೆಗಳು ನೆಲದಲ್ಲಿ ಹುದುಗಿ ಹೋಗಿದ್ದು, ಓರ್ವ ವೃದ್ಧೆ ಮೃತಪಟ್ಟಿದ್ದಾರೆ. ಮನೆಯಲ್ಲಿದ್ದ 6 ಮಂದಿ ಬಚಾವ್​ ಆಗಿದ್ದಾರೆ.

ಸವಾಲಾದ ಮೃತದೇಹಗಳ ಪತ್ತೆ ಕಾರ್ಯ

ಗುಡ್ಡ ಕುಸಿತವಾದ ಸ್ಥಳದಲ್ಲಿ ಮಣ್ಣು ತೆರವು ಮಾಡುವ ಕಾರ್ಯವೇ ಜಿಲ್ಲಾಡಳಿತಕ್ಕೆ ಸವಾಲಾಗಿದೆ. ರಸ್ತೆ ಮೇಲೆ ಅರ್ಧದಷ್ಟು ಮಣ್ಣು ಬಿದ್ದಿದ್ದರೆ, ಇನ್ನು ಅರ್ಧದಷ್ಟು ಮಣ್ಣು, ಬಂಡೆ ನದಿಯಲ್ಲಿ ಬಿದ್ದಿದ್ದು, ಗಂಗಾವಳಿ ನದಿ ಅಬ್ಬರ ಜೋರಾಗಿದೆ. ನದಿಯಲ್ಲಿ ಬಿದ್ದಿರುವ ಮಣ್ಣಿನ ರಾಶಿಯಲ್ಲೇ ಉಳಿದವರು ಸಿಲುಕಿರುವ ಶಂಕೆ ಇದೆ. ಹೀಗಾಗಿ ಉಳಿದವರ ಮೃತದೇಹ ಮಣ್ಣಲ್ಲೇ ಇದ್ಯಾ, ನೀರಲ್ಲಿ ಕೊಚ್ಚಿ ಹೋಗಿದ್ಯಾ ಅಥವಾ ನದಿಯ ತಳ ಸೇರಿದೆಯಾ ಎಂಬ ಪ್ರಶ್ನೆ ಜಿಲ್ಲಾಡಳಿತಕ್ಕೆ ಕಾಡುತ್ತಿದೆ.

ಇದನ್ನೂ ಓದಿ: ಅಂಕೋಲ ಬಳಿ ಗುಡ್ಡ ಕುಸಿತಕ್ಕೆ ಬಲಿಯಾದವರ ಸಂಖ್ಯೆ ಒಂಭತ್ತಲ್ಲ, ಇಪ್ಪತ್ತಕ್ಕೂ ಹೆಚ್ಚು!

ಆತಂಕದಲ್ಲೇ ಮುಂದುವರೆದ ಗುಡ್ಡ ತೆರವು ಕಾರ್ಯ

ಗುಡ್ಡ ಕುಸಿತ ಆಗಿರುವ ಸ್ಥಳದಲ್ಲಿ ಮಳೆ ಬಿಟ್ಟು ಬಿಟ್ಟು ಸುರಿಯುತ್ತಿದೆ. ಮಂಗಳವಾರ ತೆರವು ಕಾರ್ಯಾಚರಣೆಗೆ ಮಳೆಯೇ ಅಡ್ಡಿ ಆಗಿತ್ತು. ಈಗ ಮಣ್ಣು ತೆರವು ಕಾರ್ಯ ಮತ್ತೆ ಶುರುವಾಗಿದೆ. ಆಘಾತಕಾರಿ ವಿಚಾರವೆಂದರೆ, ತೆರವು ಕಾರ್ಯಾಚರಣೆ ವೇಳೆ ಅಲ್ಲಲ್ಲಿ ಮತ್ತೆ ಗುಡ್ಡದ ಮಣ್ಣು ಸಡಿಲವಾಗುತ್ತಿದೆ. ಹೀಗಾಗಿ 3 ಜೆಸಿಬಿ, 2 ಹಿಟಾಚಿ ಮೂಲಕ ಮಣ್ಣು ತೆರವು ಮಾಡಲಾಗ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:54 pm, Wed, 17 July 24

Follow us on