ನಾಲ್ಕು ಗಂಟೆಗೂ ಹೆಚ್ಚು ಕಾಲ ನಿಂತಲ್ಲೇ ನಿಂತ ವಂದೇ ಭಾರತ್ ಸೇರಿ ನಾಲ್ಕು ರೈಲುಗಳು! ಪ್ರಯಾಣಿಕರ ಪರದಾಟ
ದಾವಣಗೆರೆ ಜಿಲ್ಲೆಯ ಮಾಯಕೊಂಡ ನಿಲ್ದಾಣದಲ್ಲಿ ಹೊಸ ರೈಲ್ವೆ ಕಾಮಗಾರಿಯಿಂದಾಗಿ ವಂದೇ ಭಾರತ್ ಸೇರಿದಂತೆ ಒಟ್ಟು ನಾಲ್ಕು ರೈಲುಗಳು ನಾಲ್ಕು ಗಂಟೆಗೂ ಹೆಚ್ಚು ಕಾಲ ನಿಂತಲ್ಲೇ ನಿಂತು ಪ್ರಯಾಣಿಕರು ಪರದಾಡುವಂತಾಯಿತು. ಬೆಂಗಳೂರು-ಬೆಳಗಾವಿ ಮಾರ್ಗದ ಪ್ರಯಾಣಿಕರು ತೀವ್ರ ಪರದಾಡಿದ್ದು, ರೈಲ್ವೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿರಿಯ ನಾಗರಿಕರಿಗೆ ಆಹಾರ ಮತ್ತು ಮಾಹಿತಿ ಸಿಗದೆ ತೊಂದರೆಯಾಗಿದೆ.
ದಾವಣಗೆರೆ, ಅಕ್ಟೋಬರ್ 7: ದಾವಣಗೆರೆ ಜಿಲ್ಲೆಯ ಮಾಯಕೊಂಡ ನಿಲ್ದಾಣದಲ್ಲಿ ಹೊಸ ರೈಲ್ವೆ ಮಾರ್ಗದ ಕಾಮಗಾರಿಯಿಂದಾಗಿ ವಂದೇ ಭಾರತ್ ಸೇರಿದಂತೆ ಒಟ್ಟು ನಾಲ್ಕು ರೈಲುಗಳು ನಾಲ್ಕು ಗಂಟೆಗೂ ಹೆಚ್ಚು ಕಾಲ ನಿಂತಲ್ಲೇ ನಿಲ್ಲುವಂತಾಯಿತು. ಬೆಂಗಳೂರಿನಿಂದ ಬೆಳಗಾವಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಇದರಿಂದ ತೀವ್ರ ಪರದಾಟ ಪಡುವಂತಾಯಿತು. ವಂದೇ ಭಾರತ್ ರೈಲು ಮಾಯಕೊಂಡದಲ್ಲಿ ನಿಂತಿದ್ದರೆ, ಕೊಡಗನೂರು, ಸಾಸಲು ಮತ್ತು ಶಿವನಿ ಬಳಿ ಇನ್ನುಳಿದ ಮೂರು ರೈಲುಗಳು ಸ್ಥಗಿತಗೊಂಡಿದ್ದವು. ನಾಲ್ಕು ಗಂಟೆಗಳ ಕಾಲ ನಿಂತ ನಂತರ ರೈಲು ಸಂಚಾರ ಪುನರಾರಂಭಗೊಂಡಿತು. ಈ ಘಟನೆಯಿಂದ ರೈಲ್ವೆ ಅಧಿಕಾರಿಗಳ ವಿರುದ್ಧ ಪ್ರಯಾಣಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಯುವಿಕೆಯ ಸಮಯದಲ್ಲಿ ಪ್ರಯಾಣಿಕರು ಆಹಾರ ಸಿಗದೇ ಇರುವುದು ಸೇರಿದಂತೆ ಇತರ ಸಮಸ್ಯೆಗಳಿಗೆ ಪರಿಹಾರ ಸಿಗದೆ ತೊಂದರೆ ಅನುಭವಿಸಿದರು. ರೈಲ್ವೆ ಟಿಸಿ ಗಳು, ಪೈಲಟ್ ಅಥವಾ ನಿಯಂತ್ರಕರಿಂದ ಯಾವುದೇ ಮಾಹಿತಿ ಲಭ್ಯವಿರಲಿಲ್ಲ. ಪ್ರಯಾಣಿಕರೊಬ್ಬರ ಹೇಳಿಕೆಯಂತೆ, ‘ಅರ್ಧ ಗಂಟೆ, ಅರ್ಧ ಗಂಟೆ’ ಎಂದು ಹೇಳಿ ಸುಮಾರು ನಾಲ್ಕೂವರೆ ಗಂಟೆಗಳ ಕಾಲ ಪ್ರಯಾಣ ಆರಂಭವಾಗಿರಲಿಲ್ಲ.
ರೈಲುಗಳಲ್ಲಿ 60 ರಿಂದ 80 ವರ್ಷ ವಯಸ್ಸಿನ ಹಿರಿಯ ನಾಗರಿಕರು ಮತ್ತು ಮಧುಮೇಹ, ಶುಗರ್‌ನಂತಹ ಆರೋಗ್ಯ ಸಮಸ್ಯೆಗಳಿರುವವರು ಇದ್ದರು. ಅವರಿಗೆ ಆಹಾರದ ವ್ಯವಸ್ಥೆಯಾಗಲಿ ಅಥವಾ ಪರ್ಯಾಯ ಸಾರಿಗೆ ವ್ಯವಸ್ಥೆಯಾಗಲಿ ಇರಲಿಲ್ಲ. ರೈಲ್ವೆ ಅಧಿಕಾರಿಗಳು ಕೇವಲ ‘ಕಾಯಿರಿ, ಕಾಯಿರಿ’ ಎಂದು ಹೇಳುತ್ತಾ ಜವಾಬ್ದಾರಿಯಿಂದ ನುಣುಚಿಕೊಂಡಿದ್ದಾರೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.
ನಿಗದಿತ ಸಮಯಕ್ಕೆ ಕಾಮಗಾರಿ ಪೂರ್ಣವಾಗದ್ದೇ ರೈಲುಗಳ ನಿಲುಗಡೆಗೆ ಕಾರಣ
ಈ ಭಾಗದಲ್ಲಿ ದಾವಣಗೆರೆ-ಚಿತ್ರದುರ್ಗ ಮೂಲಕ ಬೆಂಗಳೂರು ಸಂಪರ್ಕಿಸುವ ನೂತನ ರೈಲು ಮಾರ್ಗದ ಕಾಮಗಾರಿ ನಡೆಯುತ್ತಿತ್ತು. ಕಾಮಗಾರಿಯನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸುವಂತೆ ಸೂಚಿಸಲಾಗಿತ್ತು. ಆದರೆ ಕಾಮಗಾರಿ ವಿಳಂಬವಾದ ಹಿನ್ನೆಲೆಯಲ್ಲಿ ರೈಲುಗಳ ಸಂಚಾರಕ್ಕೆ ತೊಂದರೆಯಾಗಿದೆ ಎಂದು ನೈಋತ್ಯ ರೈಲ್ವೆ ವಲಯದ ಮೈಸೂರು ವಿಭಾಗದ ವಾಣಿಜ್ಯ ವಿಭಾಗದ ವ್ಯವಸ್ಥಾಪಕ ಗಿರೀಶ್ ಧರ್ಮರಾಜ್ ಕಲಗೊಂಡ ತಿಳಿಸಿದ್ದಾರೆ.
ಇದು ಅನಿರೀಕ್ಷಿತವಾಗಿ ನಡೆದ ಘಟನೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ನಿಗದಿತ ಸಮಯಕ್ಕೆ ಕಾಮಗಾರಿ ಪೂರ್ಣಗೊಳ್ಳದಿರುವ ಬಗ್ಗೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
3 ಗಂಟೆಗೂ ಹೆಚ್ಚು ವಿಳಂಬವಾದರೆ ಉಚಿತ ಊಟ
ರೈಲ್ವೆ ಇಲಾಖೆಯ ನಿಯಮದ ಪ್ರಕಾರ ಯಾವುದೇ ರೈಲು ಮೂರು ಗಂಟೆಗೂ ಹೆಚ್ಚು ಕಾಲ ವಿಳಂಬವಾದರೆ ಪ್ರಯಾಣಿಕರಿಗೆ ಉಚಿತ ಊಟದ ವ್ಯವಸ್ಥೆ ಮಾಡಲಾಗುತ್ತದೆ. ಅದರಂತೆ ಮಂಗಳವಾರ ಪ್ರಯಾಣಿಕರಿಗೆ ಉಚಿತ ಊಟದ ವ್ಯವಸ್ಥೆ ಮಾಡಲಾಗಿತ್ತು ಎಂದು ಗಿರೀಶ್ ಧರ್ಮರಾಜ್ ಕಲಗೊಂಡ ತಿಳಿಸಿದ್ದಾರೆ. ರೈಲುಗಳು ಇನ್ನಷ್ಟು ವಿಳಂಬವಾಗಿದ್ದರೆ ದಾವಣಗೆರೆ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿ ಪ್ರಯಾಣಿಕರಿಗೆ ಬಸ್ ವ್ಯವಸ್ಥೆ ಮಾಡುವ ಯೋಜನೆಯೂ ಇತ್ತು. ಆದರೆ ಅಷ್ಟರಲ್ಲೇ ರೈಲು ಮಾರ್ಗ ತೆರವುಗೊಂಡು ಸಂಚಾರ ಪುನರಾರಂಭವಾಯಿತು ಎಂದು ತಿಳಿಸಿದ್ದಾರೆ.
ಪ್ರಯಾಣಿಕರಿಗೆ ತೊಂದರೆಯಾಗಿದ್ದಕ್ಕೆ ಬೇಸರ
ರೈಲುಗಳ ದೀರ್ಘಕಾಲದ ನಿಲುಗಡೆಯಿಂದ ಪ್ರಯಾಣಿಕರಿಗೆ ತೊಂದರೆಯಾಗಿರುವ ಬಗ್ಗೆ ರೈಲ್ವೆ ಇಲಾಖೆಯೂ ಬೇಸರ ವ್ಯಕ್ತಪಡಿಸಿದೆ. ಮುಂದೆ ಇಂತಹ ಸಮಸ್ಯೆ ಮರುಕಳಿಸದಂತೆ ನಿಗದಿತ ಸಮಯಕ್ಕೆ ಕಾಮಗಾರಿ ಪೂರ್ಣಗೊಳಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಗಿರೀಶ್ ಧರ್ಮರಾಜ್ ಕಲಗೊಂಡ ಸ್ಪಷ್ಟಪಡಿಸಿದ್ದಾರೆ.
ಮುಂದಿನ ದಿನಗಳಲ್ಲಿ ರೈಲು ಸಂಚಾರದಲ್ಲಿ ಇಂತಹ ವಿಳಂಬ ಆಗದಂತೆ ನೋಡಿಕೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.
ಇಂದು-ನಾಳೆ ರೈಲು ಸಂಚಾರಕ್ಕೆ ಸಮಸ್ಯೆಯಾಗಲಿದೆಯೇ?
ಸದ್ಯ, ಕಾಮಗಾರಿ ಮುಕ್ತಾಯಗೊಂಡಿರುವುದಾಗಿ ರೈಲ್ವೆ ವಲಯದ ಮೈಸೂರು ವಿಭಾಗದ ವಾಣಿಜ್ಯ ವಿಭಾಗದ ವ್ಯವಸ್ಥಾಪಕರು ತಿಳಿಸಿದ್ದಾರೆ. ಹಾಗಾಗಿ ಇಂದು ಅಥವಾ ನಾಳೆ ಮತ್ತೆ ರೈಲು ಸಂಚಾರ ವಿಳಂಬವಾಗುವ ಸಾಧ್ಯತೆಗಳಿಲ್ಲ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
