ಜಾತ್ರೆ, ಪೆಟ್ರೋಲ್ ಬಂಕ್ ಸೇರಿ ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ವಿಜಯನಗರ ಜಿಲ್ಲೆಯ ಅರಸೀಕೆರೆ ಪೊಲೀಸರು ಕೋಟಾ ನೋಟು ಚಲಾವಣೆ ಗ್ಯಾಂಗ್ ಅನ್ನು ಬಂಧಿಸಿದ್ದು, ಈ ಜಾಲದಲ್ಲಿ ಇನ್ನಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಸಾರ್ವಜನಿಕರು ನೋಟು ಸ್ವೀಕರಿಸುವ ವೇಳೆ ಎಚ್ಚರಿಕೆ ವಹಿಸಬೇಕು ಹಾಗೂ ಸಂಶಯಾಸ್ಪದ ನೋಟುಗಳು ಕಂಡುಬಂದರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.
ವಿಜಯನಗರ, ಡಿಸೆಂಬರ್ 26: ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಅರಸೀಕೆರೆಯಲ್ಲಿ ಪೊಲೀಸರು ಮಹತ್ವದ ಕಾರ್ಯಾಚರಣೆ ನಡೆಸಿ, ಜಾತ್ರೆಗಳು, ಪೆಟ್ರೋಲ್ ಬಂಕ್‌ಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕೋಟಾ ನೋಟು ಚಲಾವಣೆ ಮಾಡುತ್ತಿದ್ದ ಗ್ಯಾಂಗ್ ಅನ್ನು ಬಂಧಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಐವರು ಆರೋಪಿಗಳನ್ನು ಹಾಗೂ ಒಬ್ಬ ಬಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ 500 ರೂಪಾಯಿ ಮುಖಬೆಲೆಯ ಒಟ್ಟು 40 ನಕಲಿ ನೋಟುಗಳು ಹಾಗೂ ಒಂದು ಆಟೋವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅರಸೀಕೆರೆಯ ದಂಡಿ ದುರ್ಗಮ್ಮನ ಜಾತ್ರೆಯಲ್ಲಿ ನೋಟಾ ನೋಟುಗಳನ್ನು ಚಲಾವಣೆ ಮಾಡುತ್ತಿದ್ದ ವೇಳೆ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ, ಆರೋಪಿಗಳು ಕಳೆದ ಹಲವು ದಿನಗಳಿಂದ ವಿವಿಧ ಜಾತ್ರೆಗಳು, ಪೆಟ್ರೋಲ್ ಬಂಕ್‌ಗಳು ಹಾಗೂ ಗ್ರಾಮೀಣ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ನಕಲಿ ನೋಟುಗಳನ್ನು ಚಲಾವಣೆ ಮಾಡುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ. ಜಾತ್ರೆಗಳಲ್ಲಿನ ಜನಸಂದಣಿ ಹಾಗೂ ಚಿಲ್ಲರೆ ವ್ಯವಹಾರಗಳನ್ನು ದುರುಪಯೋಗಪಡಿಸಿಕೊಂಡು ಈ ಕೃತ್ಯ ನಡೆಸಲಾಗುತ್ತಿತ್ತು ಎನ್ನಲಾಗಿದೆ.