‘ಕೊಹ್ಲಿ ಬಾತ್ರೂಮ್‌ನಲ್ಲಿ ಅಳುತ್ತಿರುವುದನ್ನು ನಾನು ನೋಡಿದೆ’; ಯುಜ್ವೇಂದ್ರ ಚಾಹಲ್
Yuzvendra Chahal Reveals Virat Kohli's Emotional Side: ಯುಜ್ವೇಂದ್ರ ಚಾಹಲ್ ರಾಜ್ ಶಮ್ನಿ ಪಾಡ್‌ಕ್ಯಾಸ್ಟ್‌ನಲ್ಲಿ ವಿರಾಟ್ ಕೊಹ್ಲಿ ಅವರ ಭಾವುಕತೆಯ ಬಗ್ಗೆ ಬಹಿರಂಗಪಡಿಸಿದ್ದಾರೆ. 2019ರ ವಿಶ್ವಕಪ್‌ನಲ್ಲಿ ಕೊಹ್ಲಿ ಅವರು ಬಾತ್‌ರೂಮ್‌ನಲ್ಲಿ ಅಳುತ್ತಿದ್ದದ್ದನ್ನು ನೋಡಿದ್ದಾಗಿ ಚಾಹಲ್ ಹೇಳಿದ್ದಾರೆ. ಮೈದಾನದಲ್ಲಿ ಆಕ್ರಮಣಕಾರಿಯಾಗಿ ಕಾಣುವ ಕೊಹ್ಲಿ ಅವರ ಭಾವುಕತೆ ಅನೇಕ ಬಾರಿ ಗೋಚರಿಸಿದೆ ಎಂದು ಚಾಹಲ್ ವಿವರಿಸಿದ್ದಾರೆ.
ಟೀಂ ಇಂಡಿಯಾದ ಇಬ್ಬರು ದಿಗ್ಗಜ ಕ್ರಿಕೆಟಿಗರಾದ ಯುಜ್ವೇಂದ್ರ ಚಾಹಲ್ ಮತ್ತು ವಿರಾಟ್ ಕೊಹ್ಲಿ ಎಂತಹ ಸ್ನೇಹಿತರು ಎಂಬುದನ್ನು ಹೊಸದಾಗಿ ಹೇಳಬೇಕಿಲ್ಲ. ಈ ಇಬ್ಬರು ಟೀಂ ಇಂಡಿಯಾದಲ್ಲಿ ಜೊತೆಯಾಗಿ ಆಡಿದ್ದು ಮಾತ್ರವಲ್ಲದೆ, ಐಪಿಎಲ್ನಲ್ಲೂ ಸಹ ಬಹಳ ವರ್ಷಗಳ ಕಾಲ ಒಟ್ಟಿಗೆ ಆಡಿದ್ದರು. ಆದರೆ ವರ್ಷಗಳ ಹಿಂದೆ ಯುಜ್ವೇಂದ್ರ ಚಾಹಲ್ರನ್ನು ಆರ್ಸಿಬಿ ಕೈಬಿಟ್ಟಿತು. ಆ ಬಳಿಕ ಚಾಹಲ್ಗೆ ಟೀಂ ಇಂಡಿಯಾದಲ್ಲೂ ಸ್ಥಾನ ಸಿಕ್ಕಿಲ್ಲ. ಆದಾಗ್ಯೂ ಇಬ್ಬರ ನಡುವಿನ ಬಾಂಧವ್ಯ ಹಾಗೆಯೇ ಇದೆ. ಇದೀಗ ರಾಜ್ ಶಮ್ನಿ ಪಾಡ್‌ಕ್ಯಾಸ್ಟ್‌ನಲ್ಲಿ ತಮ್ಮ ಮನದಾಳವನ್ನು ತೆರೆದಿಟ್ಟಿರುವ ಯುಜ್ವೇಂದ್ರ ಚಾಹಲ್, ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡಿರುವುದರ ಜೊತೆಗೆ ಕೊಹ್ಲಿಯ ಬಗ್ಗೆಯೂ ಭಾವನಾತ್ಮಕ ಕ್ಷಣವನ್ನು ವಿವರಿಸಿದ್ದಾರೆ.
ವಾಸ್ತವವಾಗಿ ಮೈದಾನದಲ್ಲಿ ವಿರಾಟ್ ಕೊಹ್ಲಿ ಎಷ್ಟು ಆಕ್ರಮಣಕಾರಿಯಾಗಿ ಕಾಣಿಸಿಕೊಳ್ಳುತ್ತಾರೋ ಅಷ್ಟೇ ಭಾವನಾತ್ಮಕ ಜೀವಿ ಕೂಡ. ಇದನ್ನು ನಾವು ಸಾಕಷ್ಟು ಭಾರಿ ನೋಡಿದ್ದೇವೆ. ಟೀಂ ಇಂಡಿಯಾ ಈ ಹಿಂದೆ ಟಿ20 ವಿಶ್ವಕಪ್ ಗೆದ್ದಾಗ, ಆ ಬಳಿಕ ಆರ್ಸಿಬಿ ಐಪಿಎಲ್ ಟ್ರೋಫಿ ಗೆದ್ದಾಗ ಮೈದಾನದಲ್ಲೇ ಭಾವುಕರಾಗಿ ಕಣ್ಣೀರಿಟ್ಟಿದ್ದರು. ಇದೀಗ ಅಂತಹದ್ದೇ ಸನ್ನಿವೇಶವನ್ನು ಯುಜ್ವೇಂದ್ರ ಚಾಹಲ್ ಬಹಿರಂಗಪಡಿಸಿದ್ದಾರೆ.
ರಾಜ್ ಶಮ್ನಿ ಪಾಡ್‌ಕ್ಯಾಸ್ಟ್‌ನಲ್ಲಿ ಚಾಹಲ್ ಬಳಿ ಕೊಹ್ಲಿ ಬಗ್ಗೆಯೂ ಪ್ರಶ್ನೆ ಕೇಳಲಾಯಿತು. ಈ ವೇಳೆ, 2025 ರ ಐಪಿಎಲ್ ಟ್ರೋಫಿಯನ್ನು ಗೆದ್ದ ನಂತರ ವಿರಾಟ್ ಕೊಹ್ಲಿ ಮೈದಾನದಲ್ಲಿ ಕಣ್ಣೀರಿಟ್ಟಿದ್ದರು. ನೀವು ವಿರಾಟ್ ಅಳುವುದನ್ನು ಈ ಮೊದಲು ಎಂದಾದರೂ ನೋಡಿದ್ದೀರಾ ಎಂದು ಚಾಹಲ್ ಬಳಿ ರಾಜ್ ಕೇಳಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ಚಾಹಲ್ 2019 ರ ವಿಶ್ವಕಪ್ ಅನ್ನು ಉಲ್ಲೇಖಿಸಿ, ‘2019 ರ ವಿಶ್ವಕಪ್‌ನಲ್ಲಿ, ಅವರು ಬಾತ್ರೂಮ್‌ನಲ್ಲಿ ಅಳುತ್ತಿರುವುದನ್ನು ನಾನು ನೋಡಿದೆ. ಇದಾದ ನಂತರ, ನಾನು ಕೊನೆಯದಾಗಿ ಬ್ಯಾಟಿಂಗ್ ಮಾಡಲು ಬಂದಾಗ, ನಾನು ಅವರ ಪಕ್ಕದಲ್ಲಿ ಹೋಗಿದ್ದೆ. ಆ ಸಮಯದಲ್ಲಿ ಅವರ ಕಣ್ಣುಗಳಲ್ಲಿ ನೀರು ಇತ್ತು ಎಂದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ