ಕೆಅರ್​ಎಸ್ ಗೆ ಹೆಚ್ಚಿದ ಒಳಹರಿವು, ಮಳೆಗಾಲದ ಮೊದಲ ತಿಂಗಳಲ್ಲೇ ಜಲಾಶಯದಲ್ಲಿ 100 ಅಡಿ ನೀರು!

|

Updated on: Jul 04, 2024 | 5:50 PM

ಕೆಆರ್​ಎಸ್ ಬತ್ತಿಹೋಗಿದ್ದರಿಂದ ಕಳೆದ ವರ್ಷ ಕುಡಿಯುವ ನೀರಿಗೆ ದೊಡ್ಡ ಸಂಕಷ್ಟ ಎದುರಾಗಿತ್ತು. ಬೆಂಗಳೂರು ನಗರ, ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಸೃಷ್ಟಿಯಾಗಿ ಟ್ಯಾಂಕರ್ ನೀರಿನ ಬೆಲೆಯಲ್ಲಿ ಮೂರು ಪಟ್ಟು ಹೆಚ್ಚಳವಾಗಿತ್ತು. ಅದರೆ ಈ ಸಲ ಕುಡಿಯುವ ನೀರಿನ ಸಂಕಷ್ಟ ಎದುರಾಗಲಾರದು.

ಮಂಡ್ಯ: ಕನ್ನಡಿಗರಿಗೆ ಚೆನ್ನಾಗಿ ನೆನಪಿದೆ, ಕಳೆದ ವರ್ಷ ಕೃಷ್ಣರಾಜ ಸಾಗರ ಜಲಾಶಯದ ಬರಿದಾದ ಒಡಲನ್ನು ನಾವೆಲ್ಲ ನೋಡಿದ್ದೆವು. ಆದರೆ ಈ ಬಾರಿಯ ಮಳೆಗಾಲ ಶುರುವಾಗಿ ಒಂದು ತಿಂಗಳು ಸಹ ಕಳೆದಿಲ್ಲ ಆಗಲೇ ಜಲಾಶಯ ಸುಮಾರು 100 ಅಡಿ ತುಂಬುವಷ್ಟು ನೀರು ಹರಿದು ಬಂದಿದೆ. ನಮ್ಮ ಮಂಡ್ಯ ವರದಿಗಾರ ನೀಡುತ್ತಿರುವ ಮಾಹಿತಿಯ ಪ್ರಕಾರ ಕೊಡಗು ಜಿಲ್ಲೆಯ ಕ್ಯಾಚ್ಮೆಂಟ್ ಪ್ರದೇಶಗಳಲ್ಲಿ ಕಳೆದ 4-5 ದಿನಗಳಿಂದ ಒಂದೇ ಸಮ ಮಳೆ ಸುರಿಯುತ್ತಿರುವುದರಿಂದ ಕೆಅರ್​ಎಸ್ ಒಳಹರಿವಿನ ಪ್ರಮಾಣ ಭಾರೀ ಪ್ರಮಾಣದಲ್ಲಿ ಹೆಚ್ಚಿದೆ. ಸತತವಾಗಿ ಸುರಿಯುತ್ತಿರುವ ಮಳೆ ಮತ್ತು ತುಂಬುತ್ತಿರುವ ಜಲಾಶಯವನ್ನು ನೋಡಿ ರೈತಾಪಿ ಜನ ಭಾರೀ ಸಂತಸದಲ್ಲಿದ್ದಾರೆ. ಯಾಕಾಗಬೇಡ? ಕಳೆದ ವರ್ಷ ಕೊರತೆ ಮಳೆಯಿಂದ ಬೇಸಿಗೆ ಬೆಳೆಗಳೆಲ್ಲ ನಾಶವಾಗಿದ್ದವು ಮತ್ತು ರೈತರು ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವ ಸನ್ನಿವೇಶ ನಿರ್ಮಾಣವಾಗಿತ್ತು. ಕೆಅರ್​ಎಸ್ ಜಲಾಶಯದ ಗರಿಷ್ಠ ಪ್ರಮಾಣ 124.80 ಅಡಿ, ಈಗಾಗಲೇ ಅದರಲ್ಲಿ 100 ಅಡಿಗಳಷ್ಟು ನೀರು ಹರಿದು ಬಂದಿದೆ. ಹಾಗಾಗಿ ಈ ಸಲ ಯಾವುದೇ ಉದ್ದೇಶಕ್ಕೂ ನೀರಿನ ಕೊರತೆ ಎದುರಾಗಲಾರದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪ್ರತಿ ಮಳೆಗಾಲದಲ್ಲಿ ಇಲ್ಲಿನ ಜನರ ಬದುಕು ಮೂರಾ ಬಟ್ಟೆ: ಇದು ಕೊಡಗಿನ ಕುಗ್ರಾಮವೊಂದರ ಕಣ್ಣಿರಿನ ಕಥೆ

Published On - 11:43 am, Thu, 4 July 24

Follow us on