ವಿಮಾನದಲ್ಲಿ ಟೀಮ್ ಇಂಡಿಯಾ ಆಟಗಾರರ ಸಂಭ್ರಮ ಹೇಗಿತ್ತು? ಇಲ್ಲಿದೆ ವಿಡಿಯೋ
T20 World Cup 2024: ಶನಿವಾರ ನಡೆದ ಟಿ20 ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವನ್ನು ಭಾರತ 7 ರನ್ಗಳಿಂದ ಸೋಲಿಸಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 176 ರನ್ಗಳಿಸಿದರೆ, ಸೌತ್ ಆಫ್ರಿಕಾ 169 ರನ್ಗಳಿಸಲಷ್ಟೇ ಶಕ್ತರಾದರು. ಈ ಮೂಲಕ ಟೀಮ್ ಇಂಡಿಯಾ ಏಳು ರನ್ಗಳ ಜಯ ಸಾಧಿಸಿ ಇದೀಗ ಟಿ20 ವಿಶ್ವಕಪ್ನೊಂದಿಗೆ ಭಾರತಕ್ಕೆ ಮರಳಿದೆ.
ಟಿ20 ವಿಶ್ವಕಪ್ನಲ್ಲಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತ ತಂಡ (Team India) ಕೊನೆಗೂ ತಾಯ್ನಾಡಿಗೆ ಮರಳಿದೆ. ಶನಿವಾರ ನಡೆದ ಫೈನಲ್ ಪಂದ್ಯದ ಮುಕ್ತಾಯದ ಬಳಿಕ ಬಾರ್ಬಡೋಸ್ನಲ್ಲಿ ಉಳಿದಿದ್ದ ಟೀಮ್ ಇಂಡಿಯಾ ಬುಧವಾರ ಭಾರತಕ್ಕೆ ಹಿಂತಿರುಗಿತ್ತು. ಅದರಂತೆ 16 ಗಂಟೆಗಳ ದೀರ್ಘ ಪ್ರಯಾಣದ ಬಳಿಕ ಭಾರತೀಯ ಆಟಗಾರರು ದೆಹಲಿಗೆ ಬಂದಿಳಿದಿದ್ದಾರೆ. ಈ ಪ್ರಯಾಣದ ನಡುವೆ ಟೀಮ್ ಇಂಡಿಯಾ ಆಟಗಾರರ ಸಂಭ್ರಮದ ವಿಡಿಯೋವನ್ನು ಬಿಸಿಸಿಐ ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ.
ಇದೊಂದು ಅದ್ಭುತ ಅನುಭವ, ಇದಕ್ಕಾಗಿ ಸಾಕಷ್ಟು ಶ್ರಮಪಟ್ಟಿದ್ದೇವೆ. ಇದೀಗ ಟ್ರೋಫಿ ಕೈ ಸೇರಿದೆ. ನಾನು ನಿಜಕ್ಕೂ ಅದೃಷ್ಟವಂತ ಎಂದು ಈ ವಿಡಿಯೋದಲ್ಲಿ ಮೊಹಮ್ಮದ್ ಸಿರಾಜ್ ಹೇಳಿಕೊಂಡಿದ್ದಾರೆ. ಇದೇ ವೇಳೆ ಮಾತನಾಡಿದ ಯುಜ್ವೇಂದ್ರ ಚಹಲ್, ಈ ಅನುಭವವನ್ನು ವರ್ಣಿಸಲು ಅಸಾಧ್ಯ. ನಾನು ತುಂಬಾ ಲಕ್ಕಿ ಎಂದು ಭಾವಿಸುವೆ ಎಂದರು.
ಇದೇ ವೇಳೆ ಟೀಮ್ ಇಂಡಿಯಾ ಆಟಗಾರರು ಟ್ರೋಫಿಯೊಂದಿಗೆ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಹಾಗೆಯೇ ಟೀಮ್ ಇಂಡಿಯಾ ಸಿಬ್ಬಂದಿಗಳು ಜೆರ್ಸಿ ಮೇಲೆ ಆಟಗಾರರ ಸಹಿ ಪಡೆಯುತ್ತಿರುವುದನ್ನು ಸಹ ಕಾಣಬಹುದು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಮೆಚ್ಚುಗೆ ಪಡೆದುಕೊಂಡಿದೆ.