VIDEO: ಸಿಡಿದ ಸಿಡಿಲಮರಿ ಎಬಿಡಿ: ಇಂಡಿಯಾ ಚಾಂಪಿಯನ್ಸ್ಗೆ ಸೋಲು
World Championship of Legends 2025: 209 ರನ್ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಇಂಡಿಯಾ ಚಾಂಪಿಯನ್ಸ್ ತಂಡವು ಮೊದಲ 10 ಓವರ್ಗಳಲ್ಲಿ ಕಲೆಹಾಕಿದ್ದು ಕೇವಲ 66 ರನ್ಗಳು. ಈ ವೇಳೆಗೆ ರಾಬಿನ್ ಉತ್ತಪ್ಪ (2), ಶಿಖರ್ ಧವನ್ (1), ಸುರೇಶ್ ರೈನಾ (16), ಅಂಬಾಟಿ ರಾಯುಡು (0), ಯೂಸುಫ್ ಪಠಾಣ್ (5) ಹಾಗೂ ಇರ್ಫಾನ್ ಪಠಾಣ್ (10) ವಿಕೆಟ್ ಕಳೆದುಕೊಂಡಿದ್ದರು.
ನಾರ್ಥಂಪ್ಟನ್ನ ಕೌಂಟಿ ಗ್ರೌಂಡ್ನಲ್ಲಿ ನಡೆದ ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ ಟೂರ್ನಿಯ 6ನೇ ಪಂದ್ಯದಲ್ಲಿ ಸೌತ್ ಆಫ್ರಿಕಾ ಚಾಂಪಿಯನ್ಸ್ ತಂಡ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಡಿಯಾ ಚಾಂಪಿಯನ್ಸ್ ತಂಡದ ನಾಯಕ ಯುವರಾಜ್ ಸಿಂಗ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ ಚಾಂಪಿಯನ್ಸ್ ತಂಡಕ್ಕೆ ಹಾಶಿಮ್ ಆಮ್ಲಾ (22) ಹಾಗೂ ರುಡಾಲ್ಫ್ (24) ಉತ್ತಮ ಆರಂಭ ಒದಗಿಸಿದ್ದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸರೆಲ್ ಎರ್ವಿ 15 ರನ್ಗಳಿಸಿ ಔಟಾದರು.
ಆ ಬಳಿಕ ಆಗಮಿಸಿದ ನಾಯಕ ಎಬಿ ಡಿವಿಲಿಯರ್ಸ್ ಸಿಡಿಲಬರಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಇಂಡಿಯಾ ಚಾಂಪಿಯನ್ಸ್ ಬೌಲರ್ಗಳನ್ನು ಮನಸೋ ಇಚ್ಛೆ ದಂಡಿಸಿದ ಎಬಿಡಿ ಮೈದಾನದ ಮೂಲೆ ಮೂಲೆಗೂ ಸಿಕ್ಸ್-ಫೋರ್ಗಳ ಸುರಿಮಳೆಗೈದರು. ಈ ಮೂಲಕ ಕೇವಲ 30 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ 63 ರನ್ ಚಚ್ಚಿದರು.
ಎಬಿಡಿಯ ಈ ಸ್ಪೋಟಕ ಅರ್ಧಶತಕದ ನೆರವಿನೊಂದಿಗೆ ಸೌತ್ ಆಫ್ರಿಕಾ ಚಾಂಪಿಯನ್ಸ್ ತಂಡವು 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 208 ರನ್ ಕಲೆಹಾಕಿತು.
209 ರನ್ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಇಂಡಿಯಾ ಚಾಂಪಿಯನ್ಸ್ ತಂಡವು ಮೊದಲ 10 ಓವರ್ಗಳಲ್ಲಿ ಕಲೆಹಾಕಿದ್ದು ಕೇವಲ 66 ರನ್ಗಳು. ಈ ವೇಳೆಗೆ ರಾಬಿನ್ ಉತ್ತಪ್ಪ (2), ಶಿಖರ್ ಧವನ್ (1), ಸುರೇಶ್ ರೈನಾ (16), ಅಂಬಾಟಿ ರಾಯುಡು (0), ಯೂಸುಫ್ ಪಠಾಣ್ (5) ಹಾಗೂ ಇರ್ಫಾನ್ ಪಠಾಣ್ (10) ವಿಕೆಟ್ ಕಳೆದುಕೊಂಡಿದ್ದರು.
ಇನ್ನು 18.2 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 111 ರನ್ಗಳಿಸಿದ್ದ ವೇಳೆ ಫ್ಲಡ್ ಲೈಟ್ ಸಮಸ್ಯೆ ಎದುರಾಯಿತು. ಹೀಗಾಗಿ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಅಲ್ಲದೆ ಡಕ್ವರ್ತ್ ಲೂಯಿಸ್ ನಿಯಮದ ಪ್ರಕಾರ ಸೌತ್ ಆಫ್ರಿಕಾ ಚಾಂಪಿಯನ್ಸ್ ತಂಡವನ್ನು ವಿಜಯಿ ಎಂದು ಘೋಷಿಸಲಾಗಿದೆ. ಈ ಮೂಲಕ ಇಂಡಿಯಾ ಚಾಂಪಿಯನ್ಸ್ ವಿರುದ್ಧ ಸೌತ್ ಆಫ್ರಿಕಾ ಚಾಂಪಿಯನ್ಸ್ ತಂಡವು 88 ರನ್ಗಳ ಗೆಲುವು ದಾಖಲಿಸಿದೆ.

