ಸಂಸತ್ ಭವನ ಭದ್ರತಾ ಲೋಪ ಸಮಗ್ರ ತನಿಖೆ ಆಗ್ರಹಿಸಿದ್ದೇವೆ, ಸ್ಪೀಕರ್ ಭರವಸೆ ನೀಡಿದ್ದಾರೆ: ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ
ಸೋಜಿಗದ ಸಂಗತಿಯೆಂದರೆ ಸಂಸತ್ ಭವನ ಪ್ರವೇಶಿಸಿದ ಯುವಕರು ತಮ್ಮ ವಿಸಿಟರ್ ಪಾಸಿನ ಬಳಕೆ ಮಾಡಿದ್ದರೂ, ಸಂಸದ ಪ್ರತಾಪ್ ಸಿಂಹರಿಂದ ಇದುವರೆಗೆ ಸಾರ್ವಜನಿಕ ಹೇಳಿಕೆ ಬಂದಿಲ್ಲ. ಅವರು ಲೋಕ ಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿಯಾಗಿ ಸ್ಪಷ್ಟನೆ ನೀಡಿರೋದು ನಿಜ. ಆದರೆ, ಜನಸಾಮಾನ್ಯರಿಗೆ ಅವರು ಪಾಸು ಯಾಕೆ ನೀಡಿದ್ದು ಅಂತ ತಿಳಿಸಬೇಡವೇ? ಯುವಕರ ಮನಸ್ಥಿತಿಯ ಬಗ್ಗೆ ಸಂಸದರಿಗೆ ಗೊತ್ತಿರಲಿಕ್ಕಿಲ್ಲ, ಅದನ್ನಾದರೂ ಅವರು ಮಾಧ್ಯಮಗಳಿಗೆ ತಿಳಿಸಿದರೆ ಚೆನ್ನಾಗಿತ್ತು.
ದೆಹಲಿ: ಸಂಸತ್ ಭವನದಲ್ಲಿ ನಿನ್ನೆ ನಡೆದ ಭದ್ರತಾ ಲೋಪ ಭಾರೀ ಚರ್ಚೆಗೆ ಕಾರಣವಾಗಿದೆ ಮತ್ತು ಭವನ ಪ್ರವೇಶಿಸಿದ ಯುವಕರು ಬಿಜೆಪಿ ಸಂಸದ ಪ್ರತಾಪ್ ಸಿಂಹ (MP Pratap Simha) ಅವರ ಸಹಿಯ ವಿಸಿಟರ್ ಪಾಸು ಪಡೆದ ಕಾರಣ ಎಲ್ಲ ಕೋನಗಳಿಂದ ಸಮಗ್ರ ತನಿಖೆ (comprehensive investigation) ಆಗಬೇಕು ಅಂತ ಕಾಂಗ್ರೆಸ್ ನಾಯಕರು ಆಗ್ರಹಿಸುತ್ತಿದ್ದಾರೆ. ವಿಷಯಕ್ಕೆ ಸಂಬಂಧಿಸಿದಂತೆ ದೆಹಲಿಯ ತಮ್ಮ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಸಹ ತಮ್ಮ ಸರ್ಕಾರ ಘಟನೆಯ ಸಮಗ್ರ ತನಿಖೆ ನಡೆಸಲು ಮುಂದಾಗಿದೆ ಎಂದು ಹೇಳಿದರು. ಯುವಕರು ಸಂಸತ್ ಭವನ ಪ್ರವೇಶಿಸುವುದು ಸಾಧ್ಯವಾಗಿದ್ದು ಹೇಗೆ ಅವರ ಉದ್ದೇಶ ಏನಾಗಿತ್ತು ಮೊದಲಾದ ಎಲ್ಲ ಸಂಗತಿಗಳ ಸಮಗ್ರ ಚರ್ಚೆಯಾಗಬೇಕು ಅಂತ ತಾವೆಲ್ಲ ಒತ್ತಾಯಿಸಿದ್ದು, ತನಿಖೆ ನಡೆಸಿ ವರದಿಯನ್ನು ಸದನ ಮುಂದಿಡುವುದಾಗಿ ಲೋಕ ಸಭಾ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ ಎಂದು ಹೇಳಿದರು. ತಪ್ಪಿತಸ್ಥರು ಯಾರೇ ಆಗಿದ್ದರೂ ಶಿಕ್ಷೆಯಾಗಬೇಕು ಅನ್ನೋದು ತಮ್ಮ ಆಗ್ರಹವಾಗಿದೆ ಎಂದು ಸಚಿವೆ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ