ದೇವಸ್ಥಾನಕ್ಕೆ ಜೋಡಿ ತೆಂಗಿನಕಾಯಿಯನ್ನೇ ತೆಗೆದುಕೊಂಡು ಹೋಗಬೇಕು ಯಾಕೆ? ಇಲ್ಲಿದೆ ಅಧ್ಯಾತ್ಮಿಕ ಕಾರಣ
ದೇವಸ್ಥಾನಕ್ಕೆ ಭೇಟಿ ನೀಡಿದಾಗ ಬರಿಗೈಯಲ್ಲಿ ಹೋಗದೆ ಜೋಡಿ ತೆಂಗಿನಕಾಯಿಗಳನ್ನು ಅರ್ಪಿಸುವುದು ಶ್ರೇಷ್ಠ. ಒಂದು ಕಾಯಿಯನ್ನು ಒಡೆಯಲು ನೀಡಿದರೆ, ಇನ್ನೊಂದನ್ನು ದೇವರಿಗೆ ಮುಟ್ಟಿಸಿ ‘ತೀರ್ಥಕಾಯಿ’ಯಾಗಿ ಮನೆಗೆ ತರಬೇಕು. ಈ ತೀರ್ಥಕಾಯಿಯನ್ನು ಸಿಹಿ ಪದಾರ್ಥಗಳಲ್ಲಿ ಬಳಸಿ ಸೇವಿಸುವುದರಿಂದ ಆರೋಗ್ಯ, ಸಂಪತ್ತು ಮತ್ತು ಮಾನಸಿಕ ನೆಮ್ಮದಿ ದೊರೆಯುತ್ತದೆ. ಇದು ನಕಾರಾತ್ಮಕ ಶಕ್ತಿಯನ್ನು ದೂರ ಮಾಡುತ್ತದೆ.
ಮಾನಸಿಕ ವ್ಯಥೆ ಮತ್ತು ಜೀವನದ ಜಂಜಾಟಗಳು ಎದುರಾದಾಗ, ಭಗವಂತನಲ್ಲಿ ನಮ್ಮ ಕೋರಿಕೆಗಳನ್ನು ಹೇಳಿಕೊಳ್ಳುವುದು ವಾಡಿಕೆ. ದೇವಸ್ಥಾನಕ್ಕೆ ಹೋಗುವಾಗ ಬರಿಗೈಯಲ್ಲಿ ಹೋಗಬಾರದು ಎಂಬುದು ಪ್ರತೀತಿ. ದೇವಸ್ಥಾನದಲ್ಲಿ ಪೂಜಾ ಸಾಮಗ್ರಿಗಳನ್ನು ಖರೀದಿಸುವುದು ತಪ್ಪಲ್ಲ, ಆದರೆ ಯಾವುದೇ ದೇವಸ್ಥಾನಕ್ಕೆ ಒಂಟಿ ತೆಂಗಿನಕಾಯಿ ತೆಗೆದುಕೊಂಡು ಹೋಗಬಾರದು. ಅದರಲ್ಲೂ ಮನೆದೇವರು, ಇಷ್ಟದೇವರು, ಕುಲದೇವರಿಗೆ ಒಂಟಿ ತೆಂಗಿನಕಾಯಿ ಅರ್ಪಿಸಲೇಬಾರದು ಎಂಬ ನಂಬಿಕೆ ಇದೆ. ಇದರ ಅಧ್ಯಾತ್ಮಿಕ ಮಹತ್ವ ಏನು ಎಂಬುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ.
ಯಾವುದೇ ದೇವಸ್ಥಾನಕ್ಕೆ ಹೋದರೂ ಜೋಡಿ ತೆಂಗಿನಕಾಯಿಗಳನ್ನು ತೆಗೆದುಕೊಂಡು ಹೋಗುವುದು ಪೂರ್ಣ ಫಲವನ್ನು ನೀಡುತ್ತದೆ. ಎರಡು ತೆಂಗಿನಕಾಯಿಗಳಲ್ಲಿ ಒಂದನ್ನು ಒಡೆಯಲು ನೀಡಬೇಕು. ತೆಂಗಿನಕಾಯಿಯನ್ನು ಒಡೆಯುವುದು ನಮ್ಮ ಅಹಂ, ಕರ್ಮ, ಕೋಪ ಮತ್ತು ತಾಮಸ ಗುಣಗಳನ್ನು ಭಗವಂತನಿಗೆ ಅರ್ಪಿಸುವ ಸಂಕೇತವಾಗಿದೆ. ಇನ್ನೊಂದು ತೆಂಗಿನಕಾಯಿಯನ್ನು ಅರ್ಚಕರಿಗೆ ನೀಡಿ ದೇವರ ಪಾದಗಳಿಗೆ ಮುಟ್ಟಿಸಿ ನಮಗೆ ವಾಪಸ್ಸು ಕೊಡಲು ಕೇಳಬೇಕು. ಈ ಕಾಯಿಯನ್ನು ತೀರ್ಥಕಾಯಿ ಎಂದು ಕರೆಯಲಾಗುತ್ತದೆ ಎಂದು ಗುರೂಜಿ ಹೇಳಿದ್ದಾರೆ.

