ಹೆಬ್ಬೆರಳಿನ ಮೂಲಕ ತರ್ಪಣ ಬಿಡುವುದು ಯಾಕೆ? ಇಲ್ಲಿದೆ ಅಧ್ಯಾತ್ಮಿಕ ಮಹತ್ವದ ವಿವರಣೆ

Updated on: Nov 06, 2025 | 7:01 AM

ಹೆಬ್ಬೆರಳಿನ ಮೂಲಕ ತರ್ಪಣ ಬಿಡುವುದು ಹಿಂದೂ ಆಚರಣೆಗಳಲ್ಲಿ ಬಹಳ ಮಹತ್ವ ಹೊಂದಿದೆ. ಇದು ಕೇವಲ ಒಂದು ಕ್ರಿಯೆಯಲ್ಲ, ಬದಲಿಗೆ ಪೂರ್ವಿಕರಿಗೆ ಸಲ್ಲಿಸುವ ಗೌರವ ಮತ್ತು ದೇಹದ ಪ್ರತಿನಿಧಿಯಾಗಿದೆ. ಹೆಬ್ಬೆರಳು ಶುಕ್ರ ಗ್ರಹವನ್ನು ಹಾಗೂ ಇಡೀ ದೇಹವನ್ನು ಪ್ರತಿನಿಧಿಸುತ್ತದೆ. ಇದರ ಮೂಲಕ ಎಳ್ಳು ನೀರು ಬಿಡುವುದರಿಂದ ಪಿಂಡ ಪ್ರದಾನವು ಪರಿಶುದ್ಧವಾಗುತ್ತದೆ ಎಂದು ನಂಬಲಾಗಿದೆ.

ನಮ್ಮ ದೈನಂದಿನ ಜೀವನದಲ್ಲಿ ಮತ್ತು ಧಾರ್ಮಿಕ ವಿಧಿ ವಿಧಾನಗಳಲ್ಲಿ ಪ್ರತಿಯೊಂದು ಕ್ರಿಯೆಗೂ ಒಂದು ನಿರ್ದಿಷ್ಟ ಪದ್ಧತಿ ಇದೆ. ಪೂಜೆ, ಅಭಿಷೇಕ, ಅಲಂಕಾರಗಳಲ್ಲಿ ಮನಸ್ಸು ಮತ್ತು ಕೈಗಳು ಸಕ್ರಿಯವಾಗಿರುತ್ತವೆ. ಆದರೆ, ಶ್ರಾದ್ಧ ಕಾರ್ಯಗಳು ಮತ್ತು ಅ ಪರ ಕಾರ್ಯಗಳ ಸಂದರ್ಭದಲ್ಲಿ ಹೆಬ್ಬೆರಳಿನಿಂದ ಎಳ್ಳು ನೀರನ್ನು ಬಿಡುವುದು ಏಕೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇದರ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ‘ಟಿವಿ9’ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ವಿವರಿಸಿದ್ದಾರೆ.

ಭಾರತೀಯ ಸಂಸ್ಕೃತಿಯಲ್ಲಿ, ನಮ್ಮ ಬೆರಳುಗಳಿಗೆ ಮಹತ್ವವನ್ನು ನೀಡಲಾಗಿದೆ. ಪ್ರತಿಯೊಂದು ಬೆರಳೂ ಒಂದು ಗ್ರಹವನ್ನು ಪ್ರತಿನಿಧಿಸುತ್ತದೆ. ಹೆಬ್ಬೆರಳು ಶುಕ್ರನನ್ನು ಪ್ರತಿನಿಧಿಸಿದರೆ, ತೋರುಬೆರಳು ಗುರುವಿನ ಪ್ರತೀಕವಾಗಿದೆ. ಮಧ್ಯದ ಬೆರಳು ಶನಿಯ ಪ್ರತೀಕವಾದರೆ, ಉಂಗುರದ ಬೆರಳು ರವಿ (ಸೂರ್ಯ)ಯ ಪ್ರತಿನಿಧಿಯಾಗಿದೆ. ಕಡೆಯ (ಕಿರು) ಬೆರಳು ಬುಧನನ್ನು ಪ್ರತಿನಿಧಿಸುತ್ತದೆ. ಹೆಬ್ಬೆರಳು ಇಡೀ ದೇಹವನ್ನು ಮತ್ತು ಜಾತಕದಲ್ಲಿ ಲಗ್ನವನ್ನು (ಆತ್ಮಕಾರಕ) ಪ್ರತಿನಿಧಿಸುತ್ತದೆ. ನಮ್ಮ ಪೂರ್ವಿಕರ ಆಸ್ತಿಯನ್ನು ನೋಂದಾಯಿಸುವಾಗ ಹೆಬ್ಬೆಟ್ಟು ಬಳಸುವಂತೆ, ಪೂರ್ವಿಕರ ತರ್ಪಣದಲ್ಲಿ ಹೆಬ್ಬೆರಳಿನ ಪಾತ್ರ ಮುಖ್ಯ. ಹೆಬ್ಬೆರಳಿನಿಂದ ಎಳ್ಳು ನೀರು ಬಿಡುವುದರಿಂದ ತರ್ಪಣ ಶುದ್ಧವಾಗುತ್ತದೆ ಎಂದು ನಂಬಲಾಗಿದೆ ಎಂದು ಗುರೂಜಿ ವಿವರಿಸಿದ್ದಾರೆ.