ಕನ್ಹಯ್ಯ ಕುಮಾರ್ ಕಾಂಗ್ರೆಸ್ ಪಕ್ಷದ ಆಶಾಕಿರಣವಾಗಿದ್ದಾರೆ ಅಂತ ರಾಜಕೀಯ ವಿಶ್ಲೇಷಕರು ಹೇಳುತ್ತಿರುವುದರಲ್ಲಿ ಹುರುಳಿದೆಯೇ?

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 30, 2021 | 7:11 PM

ಕನ್ಹಯ್ಯ ಉತ್ತಮ ವಾಗ್ಮಿ ಮತ್ತು ಸಾಕಷ್ಟು ಜನಪ್ರಿಯರಾದರೂ ಅವರಿಗೆ ಪ್ಯಾನ್ ಇಂಡಿಯ ಇಮೇಜ್ ಇಲ್ಲ. ಬಿಜೆಪಿ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಬಲವಾಗಿ ಟೀಕಿಸುವುದರಿಂದ ಕಾಂಗ್ರೆಸ್ ಅವರನ್ನು ಪಕ್ಷದ ಬಾತ್ಮೀದಾರನಾಗಿ ಉಪಯೋಗಿಸಿಕೊಳ್ಳಬಹುದು.

ರಾಷ್ಟ್ರ ರಾಜಕಾರಣದಲ್ಲಿ ಹೊಸ ಬದಲಾವಣೆಗಳನ್ನು ನಾವು ಕಾಣುತ್ತಿದ್ದೇವೆ. ಹಿಂದೊಮ್ಮೆ ತನಗೆ ವಿರೋಧಿಗಳೇ ಇಲ್ಲ ಅಂತ ಬೀಗಿ ದಶಕಗಳ ಕಾಲ ಅಧಿಕಾರ ನಡೆಸಿದ ಕಾಂಗ್ರೆಸ್ ಈಗ ಸಂಸತ್ತಿನಲ್ಲಿ ವಿರೋಧ ಪಕ್ಷ ಅನಿಸಿಕೊಳ್ಳಲು ಲಾಯಕ್ಕಿಲ್ಲದ ಸ್ಥಿತಿ ತಲುಪಿದೆ. ಬಹಳಷ್ಟು ರಾಜ್ಯಗಳಲ್ಲೂ ಅದು ಅಧಿಕಾರ ಕಳೆದುಕೊಂಡಿದೆ. ಸೋನಿಯಾ ಗಾಂಧಿ ಎಐಸಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ನಂತರ ರಾಹುಲ್ ಗಾಂಧಿ ಪಟ್ಟವನ್ನಲಂಕರಿಸಿದರು. ರಾಜಕೀಯ ತಜ್ಞರ ಪ್ರಕಾರ ಅಲ್ಲಿಂದಲೇ ಕಾಂಗ್ರೆಸ್ ದುರ್ಬಲಗೊಳ್ಳಲಾರಂಭಿಸಿತು ಮತ್ತು ಹಿರಿಯ ನಾಯಕರ ವಿರೋಧದ ಹಿನ್ನೆಲೆಯಲ್ಲಿ ಅವರನ್ನು ಕೆಳಗಿಳಿಸಲಾಯಿತು. 2024 ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಪಕ್ಷವನ್ನು ಬಲಪಡಿಸಲು ಹಂಗಾಮಿ ಅಧ್ಯಕ್ಷೆ ಸೋನಿಯಾ ಪ್ರಯತ್ನಿಸುತ್ತಿರುವರಾದರೂ ಅವರ ಆರೋಗ್ಯ ಮೊದಲಿನಂತಿಲ್ಲ.

ಈ ಹಿನ್ನೆಲೆಯಲ್ಲಿ, ಸಾಮಾಜಿಕ ಹೋರಾಟಗಾರ, ಕಮ್ಯುನಿಸ್ಟ್ ತತ್ವ-ಸಿದ್ಧಾಂತಗಳಲ್ಲಿ ನಂಬಿಕೆಯಿಟ್ಟಿರುವ, ಜೆಎನ್​ಯುನಲ್ಲಿ ವಿದ್ಯಾರ್ಥಿ ನಾಯಕರಾಗಿದ್ದ ಮತ್ತು ಅಡಳಿತರೂಢ ಬಿಜೆಪಿಯನ್ನು ನಿರ್ಭೀತಿಯಿಂದ ಟೀಕಿಸುವ ಬಿಹಾರದ ಯುವ ನಾಯಕ ಕನ್ಹಯ್ಯ ಕುಮಾರ್ ಕಾಂಗ್ರೆಸ್ ಸೇರಿದ್ದಾರೆ. ಎಡಪಂಥೀಯ ಧೋರಣೆಯ ಕನ್ಹಯ್ಯ ಅವರಿಗೆ ಮಣೆ ಹಾಕಿರುವುದಕ್ಕೆ ಹಿರಿಯ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಅವರು ಪಕ್ಷದ ಸಿದ್ಧಾಂತಗಳಿಗೆ ಹೇಗೆ ಒಗ್ಗುತ್ತಾರೆ ಅಂತ ಅವರು ಪ್ರಶ್ನಿಸುತ್ತಿದ್ದಾರೆ.

ನಿಮಗೆ ನೆನೆಪಿರಬಹುದು. ಗುಜರಾತ್​ನಲ್ಲಿ ಪಾಟೀದಾರ ಮೀಸಲಾತಿ ಹೋರಾಟದ ನೇತೃತ್ವದ ವಹಿಸಿದ್ದ ಹಾರ್ದಿಕ್ ಪಟೇಲ್ ಕಾಂಗ್ರೆಸ್ ಪಕ್ಷ ಸೇರಿದಾಗ ಅದು ದೊಡ್ಡ ಸುದ್ದಿಯಾಗಿತ್ತು. ಗುಜರಾತಿನಲ್ಲಿ ಜನಪ್ರಿಯ ನಾಯಕರೆನಿಸಿಕೊಂಡಿದ್ದ ಹಾರ್ದಿಕ್ ಅವರಿಂದ ಪಕ್ಷಕ್ಕೆ ಹೇಳಿಕೊಳ್ಳುವಂಥ ಪ್ರಯೋಜನವೇನೂ ಆಗಿಲ್ಲ. ಅವರನ್ನು ಗುಜರಾತ್ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಾಡಲಾಗಿದೆ.

ಕನ್ಹಯ್ಯ ಉತ್ತಮ ವಾಗ್ಮಿ ಮತ್ತು ಸಾಕಷ್ಟು ಜನಪ್ರಿಯರಾದರೂ ಅವರಿಗೆ ಪ್ಯಾನ್ ಇಂಡಿಯ ಇಮೇಜ್ ಇಲ್ಲ. ಬಿಜೆಪಿ ಮತ್ತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಬಲವಾಗಿ ಟೀಕಿಸುವುದರಿಂದ ಕಾಂಗ್ರೆಸ್ ಅವರನ್ನು ಪಕ್ಷದ ಬಾತ್ಮೀದಾರನಾಗಿ ಉಪಯೋಗಿಸಿಕೊಳ್ಳಬಹುದು. ಅವರ ಕ್ರಾಂತಿಕಾರಿ ಭಾಷಣಗಳಿಗೆ ವೋಟು ಗಿಟ್ಟಿಸಬಲ್ಲ ಶಕ್ತಿಯಿದೆ ಎನ್ನುವುದು ಇನ್ನೂ ಸಾಬೀತಾಗಬೇಕಿರುವ ಅಂಶ. ಯಾಕೆಂದರೆ ಅವರು, 2019 ರ ಲೋಕ ಸಭೆ ಚುನಾವಣೆಯಲ್ಲಿ ತಮ್ಮ ತವರೂರಿನಲ್ಲೇ ಸೋಲು ಅನುಭವಿಸಿದ್ದರು.

ಅದರೆ, ಕೆಲ ರಾಜಕೀಯ ವಿಶ್ಲೇಷಕರು ಕನ್ಹಯ್ಯ ಕಾಂಗ್ರೆಸ್ ನ ಆಶಾಕಿರಣವಾಗಿದ್ದಾರೆ ಎಂದು ಹೇಳುತ್ತಿದ್ದಾರೆ. ಹಾಗೆ ನೋಡಿದರೆ, ಕನ್ಹಯ್ಯಗೆ ಕಾಂಗ್ರೆಸ್ ಸೇರುವ ಮೊದಲು ಗಟ್ಟಿಯಾದ ರಾಜಕೀಯ ನೆಲೆಯಿರಲಿಲ್ಲ. ಕಾಂಗ್ರೆಸ್ಗೂ ಯುವ ಫೈರ್ ಬ್ರ್ಯಾಂಡ್ ನಾಯಕರ ಕೊರತೆಯಿತ್ತು. ಹೀಗಾಗಿ, ಅವರ ಸೇರ್ಪಡೆ ಯಾರಿಗೆ ಲಾಭವಾಗಿದೆ ಅಥವಾ ಆಗಲಿದೆ ಅಂತ ಮುಂದೆ ಗೊತ್ತಾಗಲಿದೆ.

ಇದನ್ನೂ ಓದಿ:  ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್, ದಲಿತ ನಾಯಕ ಜಿಗ್ನೇಶ್ ಮೆವಾನಿ ಕಾಂಗ್ರೆಸ್ ಸೇರ್ಪಡೆ