WPL 2026: ಬೆತ್ ಮೂನಿ, ಸೋಫಿ ಡಿವೈನ್ ವಿಕೆಟ್ ಉರುಳಿಸಿದ ಸಯಾಲಿ ಸತ್ಘರೆ

Updated on: Jan 19, 2026 | 9:54 PM

RCB vs Gujarat Giants: ಮಹಿಳಾ ಪ್ರೀಮಿಯರ್ ಲೀಗ್‌ನ 12ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಗುಜರಾತ್ ಜೈಂಟ್ಸ್ ವಿರುದ್ಧ 176 ರನ್‌ಗಳ ಗುರಿ ನೀಡಿದೆ. ಗುರಿ ಬೆನ್ನಟ್ಟಿದ ಗುಜರಾತ್, ಕೇವಲ ಎರಡನೇ ಓವರ್‌ನಲ್ಲಿ ಓಪನರ್‌ಗಳಾದ ಬೆತ್ ಮೂನಿ ಮತ್ತು ಸೋಫಿ ಡಿವೈನ್ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಭಾರತೀಯ ಬೌಲರ್ ಸಯಾಲಿ ಸತ್ಘರೆ ಈ ಎರಡೂ ಪ್ರಮುಖ ವಿಕೆಟ್‌ಗಳನ್ನು ಪಡೆದು ಆರ್‌ಸಿಬಿಗೆ ಭರ್ಜರಿ ಆರಂಭ ನೀಡಿದ್ದಾರೆ.

ಮಹಿಳಾ ಪ್ರೀಮಿಯರ್​ ಲೀಗ್​ನ 12ನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಜೈಂಟ್ಸ್ ತಂಡಗಳ ನಡುವೆ ವಡೋದರಾದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಆರ್​ಸಿಬಿ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 176 ರನ್ ಕಲೆಹಾಕಿದೆ. ಈ ಗುರಿ ಬೆನ್ನಟ್ಟಿದ ಗುಜರಾತ್ ತಂಡ ಎರಡನೇ ಓವರ್​ನಲ್ಲೇ ಎರಡು ಪ್ರಮುಖ ವಿಕೆಟ್​ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಎಂದಿನಂತೆ ಆರ್​ಸಿಬಿ ಪರ ಲಾರೆನ್ ಬೆಲ್ ಮೊದಲ ಓವರ್​ ಬೌಲ್ ಮಾಡಿದರು. ಈ ಓವರ್​ನಲ್ಲಿ ಗುಜರಾತ್ ಕೇವಲ 3 ರನ್ ಕಲೆಹಾಕಿತ್ತು. ಹೀಗಾಗಿ ಎರಡನೇ ಓವರ್​ನಲ್ಲಿ ರನ್ ಕಲೆಹಾಕಲೇಬೇಕಾದ ಒತ್ತಡದಲ್ಲಿದ್ದ ಗುಜರಾತ್ ಓಪನರ್ ಬೆತ್ ಮೂನಿ ಬಿಗ್ ಶಾಟ್ ಆಡುವ ಯತ್ನದಲ್ಲಿ ಓವರ್​ನ ಮೊದಲ ಎಸೆತದಲ್ಲೇ ಕ್ಲಿನ್ ಬೌಲ್ಡ್ ಆದರು. ನಂತರ ಸ್ಟ್ರೈಕ್​ಗೆ ಬಂದ ಮತ್ತೊಬ್ಬ ಓಪನರ್ ಸೋಫಿ ಡಿವೈನ್ ಕೂಡ ಬಿಗ್ ಶಾಟ್ ಆಡುವ ಯತ್ನದಲ್ಲಿ ಕ್ಯಾಚಿತ್ತು ವಿಕೆಟ್ ಒಪ್ಪಿಸಿದರು. ಮೂನಿ 3 ರನ್​ಗಳಿಗೆ ವಿಕೆಟ್ ಒಪ್ಪಿಸಿದರೆ, ಡಿವೈನ್​ಗೆ ಖಾತೆ ಕೂಡ ತೆರೆಯಲು ಸಾಧ್ಯವಾಗಲಿಲ್ಲ. ಅಂದಹಾಗೆ ಈ ಎರಡೂ ವಿಕೆಟ್​ಗಳು ಭಾರತೀಯ ಬೌಲರ್ ಸಯಾಲಿ ಸತ್ಘರೆಗೆ ಬಿದ್ದವು.