ಸಿದ್ದರಾಮಯ್ಯ ಹೈಕಮಾಂಡ್​​ಗೆ ಕೊಟ್ಟ ಪಟ್ಟಿಯಲ್ಲಿ ಹೆಚ್​ಸಿ ಮಹದೇವಪ್ಪ ಹೆಸರಿದ್ದರೂ ಸಚಿವ ಸ್ಥಾನ ತಪ್ಪಿದೆ: ಯತೀಂದ್ರ

Edited By:

Updated on: Aug 06, 2026 | 12:55 PM

ಮೈಸೂರು ಉಸ್ತುವಾರಿ ಸಚಿವರಾಗಿ ಅಧಿಕೃತವಾಗಿ ನೇಮಕಗೊಂಡ ಯತೀಂದ್ರ ಸಿದ್ದರಾಮಯ್ಯ, ಹೆಚ್​ಸಿ ಮಹದೇವಪ್ಪ ಅವರಿಗೆ ಸಚಿವ ಸ್ಥಾನ ತಪ್ಪಿದ ಕುರಿತು ಮಾತನಾಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಹದೇವಪ್ಪ ಹೆಸರನ್ನು ಶಿಫಾರಸು ಮಾಡಿದ್ದರೂ ಹೈಕಮಾಂಡ್ ಈ ಬಾರಿ ಪರಿಗಣಿಸಿಲ್ಲ ಎಂದರು. ಕುರುಬ ಸಮುದಾಯದ ಅಸಮಾಧಾನ ಮತ್ತು ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಬಿಟ್ಟಿದ್ದರಿಂದ ತನಗೆ ಸಚಿವ ಸ್ಥಾನ ಲಭಿಸಿದೆ ಎಂದು ಯತೀಂದ್ರ ತಿಳಿಸಿದ್ದಾರೆ.

ಮೈಸೂರು, ಆಗಸ್ಟ್ 6: ನೂತನವಾಗಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡ ಯತೀಂದ್ರ ಸಿದ್ದರಾಮಯ್ಯ, ತಮ್ಮ ಜಿಲ್ಲಾ ಉಸ್ತುವಾರಿ ಸ್ಥಾನ ಮತ್ತು ಸಚಿವ ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿದ್ದಾರೆ. ಬರ ಪೀಡಿತ ಪ್ರದೇಶಗಳ ಪರಿಶೀಲನೆಗಾಗಿ ಮುಖ್ಯಮಂತ್ರಿಗಳ ಸೂಚನೆಯಂತೆ ಮೈಸೂರಿಗೆ ಭೇಟಿ ನೀಡಿರುವ ಅವರು, ಮೊದಲು ಉರುಲಿಂಗ ಪೆದ್ದಿ ಮಠ ಹಾಗೂ ಸುತ್ತೂರು ಮಠಕ್ಕೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದರು. ಈ ಹಿಂದೆ ತಾತ್ಕಾಲಿಕವಾಗಿ ಮೈಸೂರು ಉಸ್ತುವಾರಿ ಜವಾಬ್ದಾರಿ ವಹಿಸಿಕೊಂಡಿದ್ದ ಯತೀಂದ್ರ, ಈಗ ಅಧಿಕೃತವಾಗಿ ಸ್ಥಾನ ಖಚಿತವಾಗಿರುವ ಕಾರಣ ಮಠಗಳಿಗೆ ಭೇಟಿ ನೀಡಿರುವುದಾಗಿ ತಿಳಿಸಿದರು.

ಮಾಜಿ ಸಚಿವ ಹೆಚ್​ಸಿ ಮಹದೇವಪ್ಪಗೆ ಈ ಬಾರಿ ಸಚಿವ ಸ್ಥಾನ ಕೈತಪ್ಪಿದ ಬಗ್ಗೆ ಮಾತನಾಡಿದ ಅವರು, ಮಹದೇವಪ್ಪ ಹೆಸರನ್ನು ಸಿದ್ದರಾಮಯ್ಯ ಸಚಿವರ ಪಟ್ಟಿಯಲ್ಲಿ ಶಿಫಾರಸು ಮಾಡಿದ್ದರು. ಆದರೆ, ಹೈಕಮಾಂಡ್ ಈ ಬಾರಿ ಹೊಸ ಮುಖವಾಗಿ ನರೇಂದ್ರ ಸ್ವಾಮಿ ಅವರನ್ನು ಆಯ್ಕೆ ಮಾಡಿದೆ ಎಂದು ಸ್ಪಷ್ಟಪಡಿಸಿದರು. ಹಿರಿಯರಾದ ಮಹದೇವಪ್ಪ ಮತ್ತು ತನ್ವೀರ್ ಸೇಠ್ ಅವರ ಮನವೊಲಿಸುವ ಕಾರ್ಯವನ್ನು ಪಕ್ಷದ ವರಿಷ್ಠರು ಮಾಡಿದ್ದಾರೆ ಎಂದರು. ಕುರುಬ ಸಮುದಾಯದ ಅಸಮಾಧಾನದಿಂದಾಗಿ ಮತ್ತು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನ ಬಿಟ್ಟಿದ್ದರಿಂದ ತನಗೆ ಸಚಿವ ಸ್ಥಾನ ಲಭಿಸಿದೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us