ಒಂದೇ ಓವರ್ನಲ್ಲಿ ಟೆಸ್ಟ್ ಪಂದ್ಯ ಗೆಲ್ಲಲು ಸಾಧ್ಯವಿಲ್ಲ: ಪಂತ್ಗೆ ಕ್ಲಾಸ್..!
India vs South Africa 2nd Test: ಗುವಾಹಟಿಯ ಬರ್ಸಪಾರ ಸ್ಟೇಡಿಯಂನಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಸೌತ್ ಆಫ್ರಿಕಾ ತಂಡವು 489 ರನ್ ಕಲೆಹಾಕಿದರೆ, ಟೀಮ್ ಇಂಡಿಯಾ ಕೇವಲ 201 ರನ್ಗಳಿಸಿ ಆಲೌಟ್ ಆಗಿದೆ. ಇದೀಗ 288 ರನ್ಗಳ ಮುನ್ನಡೆಯೊಂದಿಗೆ ಸೌತ್ ಆಫ್ರಿಕಾ ತಂಡ ದ್ವಿತೀಯ ಇನಿಂಗ್ಸ್ ಆರಂಭಿಸಿದೆ.
ಗುವಾಹಟಿಯಲ್ಲಿ ನಡೆಯುತ್ತಿರುವ ಸೌತ್ ಆಫ್ರಿಕಾ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದೆ. ಅದರಲ್ಲೂ ತಂಡದ ನಾಯಕ ರಿಷಭ್ ಪಂತ್ ಆಕ್ರಮಣಕಾರಿ ಹೊಡೆತಕ್ಕೆ ಮುಂದಾಗಿ ವಿಕೆಟ್ ಕೈಚೆಲ್ಲಿದ್ದರು. ಪಂತ್ ಅವರ ಈ ನಡೆಯನ್ನು ಸೌತ್ ಆಫ್ರಿಕಾದ ಮಾಜಿ ವೇಗಿ ಡೇಲ್ ಸ್ಟೈನ್ ಟೀಕಿಸಿದ್ದಾರೆ.
ರಿಷಭ್ ಪಂತ್ ಅವರದ್ದು ಬುದ್ದಿಯಿಲ್ಲದ ಆಟ. ಕೇವಲ ಒಂದೇ ಓವರ್ನಲ್ಲಿ ಟೆಸ್ಟ್ ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ಅವರು ಅರಿತುಕೊಳ್ಳಬೇಕು. ಟೆಸ್ಟ್ ಪಂದ್ಯವೆಂದರೆ ಕೇವಲ ಹೊಡಿಬಡಿ ಆಟವಲ್ಲ. ಪರಿಸ್ಥಿತಿಗೆ ತಕ್ಕಂತೆ ಕ್ರೀಸ್ ಕಚ್ಚಿ ನಿಂತು ಆಡಬೇಕಾಗುತ್ತದೆ ಎಂದು ಸ್ಟೈಕ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇನ್ನು ಈ ಪಂದ್ಯದ ವೇಳೆ ವೀಕ್ಷಕ ವಿವರಣೆಗಾರರಾಗಿ ಕಾಣಿಸಿಕೊಂಡ ಅನಿಲ್ ಕುಂಬ್ಳೆ ಕೂಡ ಇದೇ ಅಭಿಪ್ರಾಯವನ್ನು ಮುಂದಿಟ್ಟಿದ್ದಾರೆ. ಪಂತ್ ಕ್ರೀಸ್ನಲ್ಲಿ ಇದ್ದಷ್ಟು ಸಮಯ ಸೌತ್ ಆಫ್ರಿಕಾ ಬೌಲರ್ಗಳು ಒತ್ತಡದಲ್ಲಿ ಇರುತ್ತಿದ್ದರು. ಹೀಗಾಗಿ ಪರಿಸ್ಥಿತಿಗೆ ತಕ್ಕಂತೆ ಬ್ಯಾಟಿಂಗ್ ಮಾಡಬೇಕಾಗುತ್ತದೆ ಎಂದಿದ್ದಾರೆ.
ಒಟ್ಟಿನಲ್ಲಿ ಟೆಸ್ಟ್ ಕ್ರಿಕೆಟ್ನಲ್ಲಿ ಆಕ್ರಮಣಕಾರಿ ಆಟದಿಂದಲೇ ಯಶಸ್ಸು ಸಾಧಿಸಬಹುದು ಎಂದು ಹೊರಟಿದ್ದ ರಿಷಭ್ ಪಂತ್ ಅವರನ್ನು ಮಾರ್ಕೊ ಯಾನ್ಸೆನ್ ಕೇವಲ 7 ರನ್ಗೆ ಔಟ್ ಮಾಡಿದ್ದಾರೆ. ಪರಿಣಾಮ ಮೊದಲ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ ಕೇವಲ 201 ರನ್ಗಳಿಗೆ ಆಲೌಟ್ ಆಗಿ 288 ರನ್ಗಳ ಹಿನ್ನಡೆ ಅನುಭವಿಸಿದೆ.