ಆ್ಯಸಿಡ್ ದಾಳಿ: ಮಹಿಳೆಯರು ಕರ್ನಾಟಕದಲ್ಲಿ ಭಯಮುಕ್ತ ಜೀವನ ನಡೆಸುವಂತಾಗಲು ರಾಯಚೂರು ಯುವತಿಯರ ಬೈಕ್ ಱಲಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: May 04, 2022 | 1:02 AM

ಅವನು ಪಾತಾಳದಲ್ಲಿದ್ದರೂ ಪೊಲೀಸರು ಅವನನ್ನು ಹುಡುಕಿ ತೆಗೆಯಬೇಕು, ಅವನು ಸಿಕ್ಕ ಬಳಿಕ ನಡುರಸ್ತೆಯಲ್ಲಿ ನಿಲ್ಲಿಸಿ ಅವನ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿಯಿಡಬೇಕು. ಆದರೆ, ಅವನನ್ನು ಸಾಯಲು ಬಿಡಬಾರದು ಎಂದು ಅವರು ಹೇಳುತ್ತಾರೆ.

ರಾಯಚೂರು: ಸುಂಕದ ಕಟ್ಟೆಯ ಆ್ಯಸಿಡ್ ಪ್ರಕರಣ (acid attack) ಕರ್ನಾಟಕ ಸರ್ಕಾರ ಅದರಲ್ಲೂ ವಿಶೇಷವಾಗಿ ಗೃಹ ಇಲಾಖೆ (home department) ಮರೆತು ಹೋಗಿದೆಯಾ ಅಂತ ಜನ ಕೇಳಲಾರಂಭಿಸಿದ್ದಾರೆ. ಕೆಲವೇ ದಿನಗಳ ಬಳಿಕ ಮದುವೆಯಾಗಿ ಬೇರೆ ಯುವತಿಯರ ಹಾಗೆ ಸುಖೀ ದಾಂಪತ್ಯ ನಡೆಸಬೇಕು ಅಂತ ಕನಸು ಕಾಣುತ್ತಿದ್ದ 24-ವರ್ಷದ ಒಬ್ಬ ಸುಂದರ ಯುವತಿ ನರಾಧಮನೊಬ್ಬನ ಪೈಶಾಚಿಕತೆಯಿಂದಾಗಿ ಬೆಂಗಳೂರಿನ ಸೆಂಟ್ ಜಾನ್ಸ್ ಅಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಸಾವು ಬದುಕಿನೊಂದಿಗೆ ಹೋರಾಟ ನಡೆಸುತ್ತಿದ್ದಾಳೆ. ಆಕೆಯನ್ನು ನರಕಕೂಪಕ್ಕೆ ತಳ್ಳಿದ ದುಷ್ಟ ನಾಗೇಶ (Nagesh) ಇವತ್ತಿನವರೆಗೆ ಪೊಲೀಸರಿಗೆ ಸಿಕ್ಕಿಲ್ಲ, ಪ್ರಕರಣ ನಡೆದು ಒಂದು ವಾರವಾಗಿದೆ. ಪೋಲೀಸರ ನಿಷ್ಕ್ರಿಯತೆಯ ವಿರುದ್ಧ ರೊಚ್ಚಿಗೆದ್ದಿರುವ ರಾಜ್ಯದ ನಾನಾ ಭಾಗಗಳ ಯುವತಿಯರು ಪ್ರತಿಭಟನೆಗಳನ್ನು ಮಾಡಲಾರಂಭಿಸಿದ್ದಾರೆ.

ರಾಯಚೂರಿನ ಈ ಯುವತಿಯ ನೇತೃತ್ವದಲ್ಲಿ ಮಹಿಳೆಯರ ಭಯಮುಕ್ತ ಕರ್ನಾಟಕ ಅಭಿಯಾನವನ್ನು ಬೈಕ್ ಱಲಿ ಆಯೋಜಿಸುವ ಮೂಲಕ ಪ್ರಾರಂಭಿಸಲಾಗಿದೆ. ಚರ್ಮ ದಾನಮಾಡುವ ಮೂಲಕ ಆ್ಯಸಿಡ್ ದಾಳಿಗೊಳಗಾಗದವರಿಗೆ ಹೇಗೆ ನೆರವಾಗಬಹುದೆನ್ನುವ ಜಾಗೃತಿಯನ್ನೂ ಇವರ ತಂಡ ಮಾಡುತ್ತಿದೆ.

ರಾಯಚೂರು ಟಿವಿ9 ಕನ್ನಡ ವಾಹಿನಿಯ ವರದಿಗಾರನೊಂದಿಗೆ ಮಾತಾಡಿರುವ ಯುವತಿಯು ಮೊದಲೆಲ್ಲ ಬರೀ ಮುಂಬೈಗೆ ಮಾತ್ರ ಸಿಮಿತವಾಗಿದ್ದ ಆ್ಯಸಿಡ್ ದಾಳಿ ಪ್ರಕರಣ ಬೆಂಗಳೂರಲ್ಲೂ ಶುರುವಾಗಿರುವುದು ಭಯ, ಅತಂಕ ಮತ್ತು ಬೇಸರ ಹುಟ್ಟಿಸುತ್ತಿದೆ. ದಾಳಿಗೊಳಗಾದ ಮಹಿಳೆ ಎಷ್ಟು ಹಿಂಸೆ ಅನುಭವಿಸುತ್ತಾಳೆ ಅಂತ ಗೊತ್ತಿದೆ. ಅಕೆ ದೈಹಿಕವಾಗಿ ಚೇತರಿಸಿಕೊಂಡರೂ ಮಾನಸಿಕವಾಗಿ ಯಾವತ್ತೂ ಚೇತರಿಸಿಕೊಳ್ಳಲಾರಳು ಎಂದು ಯುವತಿ ಹೇಳುತ್ತಾರೆ.

ಒಬ್ಬ ಆ್ಯಸಿಡ್ ದಾಳಿಕೋರನನ್ನು ಹಿಡಿಯಲಾಗದ ಈ ಸರ್ಕಾರದಿಂದ ಮಹಿಳೆಯರು ಏನು ನಿರೀಕ್ಷಿಸಬಹುದು? ಅವನು ಪಾತಾಳದಲ್ಲಿದ್ದರೂ ಪೊಲೀಸರು ಅವನನ್ನು ಹುಡುಕಿ ತೆಗೆಯಬೇಕು, ಅವನು ಸಿಕ್ಕ ಬಳಿಕ ನಡುರಸ್ತೆಯಲ್ಲಿ ನಿಲ್ಲಿಸಿ ಅವನ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿಯಿಡಬೇಕು. ಆದರೆ, ಅವನನ್ನು ಸಾಯಲು ಬಿಡಬಾರದು ಎಂದು ಅವರು ಹೇಳುತ್ತಾರೆ.

ಸುಟ್ಟಗಾಯಗಳೊಂದಿಗೆ ನರಳುತ್ತಾ ಅವನು ಬದುಕಬೇಕು. ಆಗಲೇ ಇವನಂಥ ಮನಸ್ಥಿತಿಯ ಬೇರೆ ಜನ ಇಂಥ ಕೃತ್ಯಗಳ ಬಗ್ಗೆ ಯೋಚಿಸಲು ಸಹ ಭಯಪಡುತ್ತಾರೆ. ಅಂಥ ಭಯ ದುರುಳರಲ್ಲಿ ಹುಟ್ಟಿದಾಗಲೇ ಹೆಣ್ಣುಮಕ್ಕಳು ಭಯಮುಕ್ತರಾಗಿ ಓಡಾಡುವುದು ಸಾಧ್ಯವಾಗುತ್ತದೆ ಎಂದು ಯುವತಿ ಹೇಳುತ್ತಾರೆ.

ಇದನ್ನೂ ಓದಿ:   ಬೆಂಗಳೂರಿನಲ್ಲಿ ಆ್ಯಸಿಡ್ ದಾಳಿಗೆ ಒಳಗಾಗಿದ್ದ ಯುವತಿ ಆರೋಗ್ಯ ಸ್ಥಿರ; ಆರೋಪಿ ಹುಡುಕಾಟಕ್ಕೆ 7 ತಂಡ ರಚನೆ