ತಮಿಳುನಾಡು ಜನರಿಂದಲೂ ಅಪ್ಪು ಗುಣಗಾನ; ವಿವರಿಸಿದ ಸಂತೋಷ್ ಆನಂದ್ರಾಮ್
‘ಅಪ್ಪು ಸರ್ ನಮ್ಮ ಜೊತೆ ಇಲ್ಲ ಎಂಬ ಭಾವನೆ ಇತ್ತೀಚೆಗೆ ನನಗೆ ಹೋಗಿದೆ. ಯಾಕೆಂದರೆ, ಎಲ್ಲರಲ್ಲೂ ಅವರು ಜೀವಂತವಾಗಿ ಇರುವಾಗ ಇಲ್ಲ ಅಂತ ಹೇಗೆ ಹೇಳೋದು? ಚಿತ್ರರಂಗದಲ್ಲಿ ಯಾರೇ ಸಿನಿಮಾ ಮಾಡಿದರೂ ಅಪ್ಪು ಸರ್ ಹೆಸರು ಹೇಳುತ್ತಾರೆ. ಯುವ ಸಿನಿಮಾ ಆಗಲು ಅವರೇ ಪರೋಕ್ಷ ಕಾರಣ. ಅವರ ಇರುವಿಕೆಯನ್ನು ನಾನು ಫೀಲ್ ಮಾಡುತ್ತಿದ್ದೇನೆ’ ಎಂದು ಸಂತೋಷ್ ಆನಂದ್ ರಾಮ್ ಹೇಳಿದ್ದಾರೆ.
‘ಪವರ್ ಸ್ಟಾರ್’ ಪುನೀತ್ ರಾಜ್ಕುಮಾರ್ (Puneeth Rajkumar) ಅವರು ಭೌತಿಕವಾಗಿ ನಮ್ಮ ನಡುವೆ ಇಲ್ಲ. ಆದರೆ ಅವರು ಎಲ್ಲರ ಮನದಲ್ಲೂ ಶಾಶ್ವತ ಸ್ಥಾನ ಪಡೆದಿದ್ದಾರೆ. ಪುನೀತ್ ಜೊತೆ ನಿರ್ದೇಶಕ ಸಂತೋಷ್ ಆನಂದ್ರಾಮ್ ಅವರು ಹತ್ತಿರದ ಒಡನಾಟ ಹೊಂದಿದ್ದರು. ‘ರಾಜಕುಮಾರ’, ‘ಯುವರತ್ನ’ ಚಿತ್ರಗಳನ್ನು ಅವರು ಜೊತೆಯಾಗಿ ಮಾಡಿದ್ದರು. ಈಗ ‘ಯುವ’ (Yuva Movie) ಸಿನಿಮಾಗೆ ಸಂತೋಷ್ ಆನಂದ್ರಾಮ್ ನಿರ್ದೇಶನ ಮಾಡಿದ್ದಾರೆ. ಮಾರ್ಚ್ 28ರಂದು ಚಿತ್ರ ಬಿಡುಗಡೆ ಆಗಲಿದ್ದು, ಈ ಪ್ರಯುಕ್ತ ‘ಟಿವಿ9 ಕನ್ನಡ’ಕ್ಕೆ ಅವರು ವಿಶೇಷ ಸಂದರ್ಶನ ನೀಡಿದ್ದಾರೆ. ಈ ವೇಳೆ ಪುನೀತ್ ರಾಜ್ಕುಮಾರ್ ಅವರನ್ನು ಸಂತೋಷ್ ಆನಂದ್ರಾಮ್ ನೆನಪಿಸಿಕೊಂಡಿದ್ದಾರೆ. ‘ಅವರ ಜನ್ಮದಿನದಂದು ಲಕ್ಷಾಂತರ ಜನರು ಬಂದಿದ್ದರು. ಅದು ತಮಾಷೆ ಅಲ್ಲ. ನಾನು ‘ಯುವ’ ಚಿತ್ರದ ಮಿಕ್ಸಿಂಗ್ಗೆ ತಮಿಳುನಾಡಿಗೆ ಹೋದಾಗ ಅಲ್ಲಿ ಡ್ರೈವರ್ ಮಾತನಾಡುತ್ತಿದ್ದರು. ಎಂಜಿಆರ್ ಮುಂತಾದ ನಟರಿಗಿಂತಲೂ ಕರ್ನಾಟಕದಲ್ಲಿ ಪುನೀತ್ ಸರ್ ಮೇಲೆ ಅಂತ ಅವರು ಹೇಳಿದ್ರು. ಜೀವನ ದೀರ್ಘವಾಗಿ ಅಲ್ಲ, ದೊಡ್ಡದಾಗಿ ಇರಬೇಕು. ಎಷ್ಟು ವರ್ಷ ಇರುತ್ತೀವಿ ಎಂಬುದು ಮುಖ್ಯವಲ್ಲ. ಇದ್ದಾಗ ನಾವು ಏನು ಮಾಡಿದ್ದೇವೆ ಎಂಬುದು ಮುಖ್ಯ. ಸಾಧಕರು ಹೋದಮೇಲೆ ಜೀವಿಸುತ್ತಾರೆ. ಅದೇ ಪುನೀತ್ ರಾಜ್ಕುಮಾರ್. ನಮ್ಮೊಳಗೆಲ್ಲ ಅವರು ಜೀವಿಸುತ್ತಿದ್ದಾರೆ’ ಎಂದು ಸಂತೋಷ್ ಆನಂದ್ರಾಮ್ (Santhosh Ananddram) ಹೇಳಿದ್ದಾರೆ. ಪೂರ್ತಿ ಸಂದರ್ಶನದ ವಿಡಿಯೋ ಇಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.