ಇಸ್ಲಾಮಾಬಾದ್: ಪಾಕಿಸ್ತಾನದ (Pakistan) ನೈಋತ್ಯ ಭಾಗದ ನಗರವಾದ ಕ್ವೆಟ್ಟಾದಲ್ಲಿ ಆತ್ಮಾಹುತಿ ಬಾಂಬ್ ದಾಳಿ (Suicide Bomb Attack) ನಡೆದಿದೆ. ಪೊಲೀಸ್ ವಾಹನವನ್ನು ಗುರಿಯಾಗಿಸಿಕೊಂಡು ನಡೆದ ಈ ಬಾಂಬ್ ಸ್ಫೋಟದಲ್ಲಿ ಓರ್ವ ಪೊಲೀಸ್ ಅಧಿಕಾರಿ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪಾಕಿಸ್ತಾನದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಪಾಕಿಸ್ತಾನಿ ತಾಲಿಬಾನ್ ಎಂದೂ ಕರೆಯಲ್ಪಡುವ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಸಶಸ್ತ್ರ ಗುಂಪು ಈ ಆತ್ಮಾಹುತಿ ದಾಳಿಯ ಹೊಣೆ ಹೊತ್ತುಕೊಂಡಿದೆ. ಜೂನ್ನಲ್ಲಿ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದ್ದ ಕದನ ವಿರಾಮವನ್ನು ಕೊನೆಗೊಳಿಸುವುದಾಗಿ ಘೋಷಿಸಿದ 2 ದಿನಗಳ ನಂತರ ಈ ದಾಳಿ ನಡೆದಿದೆ.
ಇದನ್ನೂ ಓದಿ: Afghanistan Blast: ಕಾಬೂಲ್ನ ಶಿಕ್ಷಣ ಕೇಂದ್ರದಲ್ಲಿ ಆತ್ಮಹತ್ಯಾ ಬಾಂಬ್ ದಾಳಿ: 19 ಮಂದಿ ಸಾವು
ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ರಾಜಧಾನಿಯಲ್ಲಿ ಪೋಲಿಯೊ ಲಸಿಕೆ ಅಭಿಯಾನದ ಕಾರ್ಯಕರ್ತರನ್ನು ರಕ್ಷಿಸಲು ನಿಯೋಜಿಸಲಾದ ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ ಎಂದು ಕ್ವೆಟ್ಟಾದ ಪೊಲೀಸ್ ಡಿಐಜಿ ಗುಲಾಮ್ ಅಜ್ಫರ್ ಮಹೇಸರ್ ತಿಳಿಸಿದ್ದಾರೆ. ಬುಲೇಲಿ ಜಿಲ್ಲೆಯಲ್ಲಿ ನಡೆದ ಘಟನೆಯಲ್ಲಿ 28ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅವರಲ್ಲಿ 20 ಮಂದಿ ಪೊಲೀಸರೇ ಇದ್ದಾರೆ.
QUETTA, Pakistan – A suicide bomb blast in Pakistan’s southwestern city of Quetta targeted a police patrol, killing three people and wounding 28.#Pakistan #Quetta #Balochistan pic.twitter.com/TBLcyncTqJ
— Defence Intel (@Defencelntel) November 30, 2022
ಪಾಕಿಸ್ತಾನದ ಸೇನೆ ಮತ್ತು ಗುಪ್ತಚರ ಸಂಸ್ಥೆಗಳು ತಮ್ಮ ಸಂಘಟನೆಯ ಮೇಲೆ ದಾಳಿ ನಡೆಸುವುದನ್ನು ಮುಂದುವರಿಸಿರುವುದರಿಂದ ಕದನ ವಿರಾಮ ಒಪ್ಪಂದವನ್ನು ಕೊನೆಗೊಳಿಸದೆ ವಿಧಿಯಿಲ್ಲ ಎಂದು ಟಿಟಿಪಿ ಹೇಳಿದೆ. ‘ಇನ್ನು ಮುಂದೆ ದೇಶದ ಎಲ್ಲ ಭಾಗಗಳಲ್ಲಿ ನಾವು ದಾಳಿಗಳನ್ನು ನಡೆಸಲಿದ್ದೇವೆ,’ ಎಂದು ಟಿಟಿಪಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಇದನ್ನೂ ಓದಿ: ಪಾಕಿಸ್ತಾನ ಸರ್ಕಾರದೊಂದಿಗೆ ಮಾಡಿಕೊಂಡಿದ್ದ ಕದನವಿರಾಮ ಒಪ್ಪಂದ ಕೊನೆಗೊಳಿಸಿರುವುದಾಗಿ ಟಿಟಿಪಿ ಘೋಷಣೆ
ಬಲೂಚಿಸ್ತಾನ ಮುಖ್ಯಮಂತ್ರಿ ಅಬ್ದುಲ್ ಖುದ್ದೂಸ್ ಬಿಜೆಂಜೊ ಈ ದಾಳಿಯನ್ನು ಖಂಡಿಸಿದ್ದಾರೆ. ಇಂತಹ ಹೇಡಿತನದ ಕೃತ್ಯಗಳನ್ನು ಎದುರಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಮೃತಪಟ್ಟವರಲ್ಲಿ ಓರ್ವ ಪೊಲೀಸ್, ಓರ್ವ ಮಹಿಳೆ ಹಾಗೂ ಒಂದು ಮಗು ಸೇರಿದೆ.
ಟಿಟಿಪಿ ಸಂಘಟನೆ 2007ರಲ್ಲಿ ಅಸ್ತಿತ್ವಕ್ಕೆ ಬಂದ ಬಳಿಕ ಪಾಕಿಸ್ತಾನದ ನಾಗರಿಕರು, ಸರ್ಕಾರೀ ಅಧಿಕಾರಿಗಳು, ಪೊಲೀಸ್ ಮತ್ತು ಯೋಧರ ಮೇಲೆ ಹಲವಾರು ದಾಳಿಗಳನ್ನು ನಡೆಸಿದೆ. ಪಾಕಿಸ್ತಾನದ ವಾಯುವ್ಯ ಭಾಗದ ಅಧಿಕ ಪ್ರಾಂತ್ಯಗಳಲ್ಲಿ 2007 ರಿಂದ 2013 ರವರೆಗೆ ತಾಲಿಬಾನ್ ಅಧಿಕಾರ ನಡೆಸುತ್ತಿದ್ದ ಅವಧಿಯಲ್ಲಿ ಟಿಟಿಪಿ ನಡೆಸಿದ ದಾಳಿಗಳಿಗೆ ಸಾವಿರಾರು ಪಾಕಿಸ್ತಾನಿಗಳು ಬಲಿಯಾಗಿದ್ದಾರೆ. ಪಾಕಿಸ್ತಾನ ಸರ್ಕಾರದೊಂದಿಗೆ ಮಾಡಿಕೊಂಡಿದ್ದ ಶಾಂತಿ ಒಪ್ಪಂದವನ್ನು ಟಿಟಿಪಿ ಉಲ್ಲಂಘಿಸಿ ಕೆಲ ಪ್ರಾಂತ್ಯಗಳನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ.
ಪಾಕಿಸ್ತಾನ ವಾಯುವ್ಯ ಭಾಗದ ಉತ್ತರ ಮತ್ತು ದಕ್ಷಿಣ ವಜಿರಿಸ್ತಾನ, ಡೆರಾ ಇಸ್ಮಾಯಿಲ್ ಖಾನ್ ಮತ್ತು ಟ್ಯಾಂಕ್ ಜಿಲ್ಲೆಗಳಲ್ಲಿ ಆ ದೇಶದ ಸೇನೆ ಸೆಪ್ಟೆಂಬರ್ 22 ರಿಂದ ಟಿಟಿಪಿಯೊಂದಿಗೆ ಕಾದಾಟ ನಡೆಸುತ್ತಲೇ ಇದೆ. ಮಾತುಕತೆ ಜಾರಿಯಲ್ಲಿದ್ದರೂ ಎರಡೂ ಪಕ್ಷಗಳು ಕದನ ವಿರಾಮ ಒಪ್ಪಂದ ಕಾಯ್ದಕೊಂಡಿರುವ ಬಗ್ಗೆ ಹೇಳಿಕೊಂಡಿವೆ.
ಅಫ್ಘಾನಿಸ್ತಾನದ ತಾಲಿಬಾನ್ ಟಿಟಿಪಿ ನೆರವಿನೊಂದಿಗೆ ಅಲ್ಲಿನ ಸರ್ಕಾರವನ್ನು ಪತನಗೊಳಿಸಿ ಅಧಿಕಾರವನ್ನು ತನ್ನ ವಶಕ್ಕೆ ತೆಗೆದುಕೊಂಡ ಸುಮಾರು ಒಂದು ವರ್ಷದ ನಂತರ ಅಂದರೆ ಮೇ 2022 ರಲ್ಲಿ ಪಾಕಿಸ್ತಾನ ಸರ್ಕಾರ ಮತ್ತು ಟಿಟಿಪಿ ಮಧ್ಯೆ ಒಂದು ತಾತ್ಕಾಲಿಕ ಕದನ ವಿರಾಮ ಒಪ್ಪಂದ ಏರ್ಪಟ್ಟಿತ್ತು. ಅಫ್ಘಾನಿಸ್ತಾನದ ತಾಲಿಬಾನ್ ಮತ್ತು ಅದರ ಪ್ರಬಲ ಉಪಸಂಸ್ಥೆಯಾಗಿರುವ ಹಕ್ಕಾನಿ ನೆಟ್ ವರ್ಕ್ ಈ ಕದನ ವಿರಾಮ ಒಪ್ಪಂದಕ್ಕೆ ಮಧ್ಯಸ್ಥಿಕೆ ವಹಿಸಿದ್ದವು.
ಆತ್ಮಾಹುತಿ ದಾಳಿ ನಡೆದ ಕ್ವೆಟ್ಟಾ ಅಫ್ಘಾನಿಸ್ತಾನ ಮತ್ತು ಇರಾನ್ ಗಡಿಯಲ್ಲಿರುವ ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ರಾಜಧಾನಿಯಾಗಿದೆ. ಅಲ್ಲಿ ಇಸ್ಲಾಮಿಸ್ಟ್ ಮತ್ತು ಪ್ರತ್ಯೇಕತಾವಾದಿ ಬಂಡುಕೋರರು ಹೆಚ್ಚಾಗಿದ್ದಾರೆ.
Published On - 1:06 pm, Wed, 30 November 22