ಗಾಜಾ ಮೇಲೆ ಇಸ್ರೇಲ್​ನಿಂದ ವೈಮಾನಿಕ ದಾಳಿ, 57 ಮಂದಿ ಸಾವು, ಶಾಂತಿ ಸೂತ್ರಕ್ಕೆ ಇನ್ನೂ ಒಪ್ಪದ ಹಮಾಸ್

ಕಳೆದೆರಡು ವರ್ಷಗಳಿಂದ ನಡೆಯುತ್ತಿರುವ ಇಸ್ರೇಲ್‌-ಹಮಾಸ್‌ ನಡುವಿನ ಯುದ್ಧ ಅಂತ್ಯವಾಗುವ ಸಮಯ ಸನ್ನಿಹಿತವಾಗಿರುವ ಸೂಚನೆಗಳು ಬರುತ್ತಿವೆ. ಆದರೆ ಟ್ರಂಪ್ ಪ್ರಸ್ತಾವನೆಯನ್ನು ಇನ್ನೂ ಹಮಾಸ್ ಒಪ್ಪಿಕೊಂಡಿಲ್ಲ. ಇದರ ಪರಿಣಾಮ ಗಾಜಾ ಮೇಲೆ ಇಸ್ರೇಲ್ ನಿತ್ಯ ವಾಯು ದಾಳಿ ನಡೆಸುತ್ತಲೇ ಇದೆ. ನಿನ್ನೆ ನಡೆದ ವೈಮಾನಿಕ ದಾಳಿಯಲ್ಲಿ 57 ಮಂದಿ ಪ್ಯಾಲೆಸ್ತೀನಿಯನ್ನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಸಂಘರ್ಷಕ್ಕೆ ಮಂಗಳ ಹಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ 20 ಅಂಶಗಳ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ. ಇದಕ್ಕೆ ನೆತನ್ಯಾಹು ಒಪ್ಪಿದ್ದು ಮಾತ್ರವಲ್ಲದೆ, ಭಾರತದಿಂದಲೂ ಬೆಂಬಲ ವ್ಯಕ್ತವಾಗಿದೆ. ಆದರೆ ಇದುವರೆಗೂ ಹಮಾಸ್ ಯಾವ ನಿರ್ಧಾರಕ್ಕೂ ಬಂದಿಲ್ಲ.

ಗಾಜಾ ಮೇಲೆ ಇಸ್ರೇಲ್​ನಿಂದ ವೈಮಾನಿಕ ದಾಳಿ, 57 ಮಂದಿ ಸಾವು, ಶಾಂತಿ ಸೂತ್ರಕ್ಕೆ ಇನ್ನೂ ಒಪ್ಪದ ಹಮಾಸ್
ಗಾಜಾ

Updated on: Oct 03, 2025 | 7:57 AM

ಗಾಜಾ, ಅಕ್ಟೋಬರ್ 03: ಸುಮಾರು ಎರಡು ವರ್ಷಗಳ ಯುದ್ಧವನ್ನು ಕೊನೆಗೊಳಿಸುವ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್(Donald Trump) ಅವರ ಪ್ರಸ್ತಾಪದ ಬಗ್ಗೆ ಹಮಾಸ್ ಆಲೋಚಿಸುತ್ತಿರುವಾಗಲೇ ಇಸ್ರೇಲ್ ಗಾಜಾ ಮೇಲೆ ವೈಮಾನಿಕ ದಾಳಿ ನಡೆಸಿದೆ. ಗಾಜಾ ಪಟ್ಟಿಯಲ್ಲಿ ಇಸ್ರೇಲಿ ವೈಮಾನಿಕ ದಾಳಿ ಮತ್ತು ಗುಂಡಿನ ದಾಳಿಯಲ್ಲಿ ಕನಿಷ್ಠ 57 ಪ್ಯಾಲೆಸ್ಟೀನಿಯನ್ನರು ಸಾವನ್ನಪ್ಪಿದ್ದಾರೆ. ಯುದ್ಧ ಕೊನೆಗೊಳ್ಳಬೇಕೆಂದು ಪ್ಯಾಲೆಸ್ತೀನಿಯನ್ನರು ಹಾತೊರೆಯುತ್ತಿದ್ದಾರೆ ಆದರೆ ಅನೇಕರು ಈ ಯೋಜನೆ ಇಸ್ರೇಲ್‌ಗೆ ಅನುಕೂಲಕರವಾಗಿದೆ ಎಂದು ಹೇಳುತ್ತಿದ್ದಾರೆ.

ಟ್ರಂಪ್ ಸಮಗ್ರ ಯೋಜನೆ ಬಗ್ಗೆ ಮಾತನಾಡಿದ ಹಮಾಸ್ ಅಧಿಕಾರಿಯೊಬ್ಬರು ಅದರಲ್ಲಿ ಕೆಲವು ಅಂಶಗಳು ಸ್ವೀಕಾರಾರ್ಹವಲ್ಲ ಎಂದು ಹೇಳಿದ್ದಾರೆ. ದಕ್ಷಿಣ ಗಾಜಾದಲ್ಲಿ ಇಸ್ರೇಲಿ ಗುಂಡಿನ ದಾಳಿಯಲ್ಲಿ ಕನಿಷ್ಠ 29 ಜನರು ಸಾವನ್ನಪ್ಪಿದ್ದಾರೆ.ಅವರಲ್ಲಿ 14 ಜನರು ಇಸ್ರೇಲಿ ಮಿಲಿಟರಿ ಕಾರಿಡಾರ್‌ನಲ್ಲಿ ಸಾವನ್ನಪ್ಪಿದ್ದಾರೆ.

ಇಸ್ರೇಲಿ ದಾಳಿಯಲ್ಲಿ 16 ಮಂದಿ ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ನಗರವಾದ ದೇರ್ ಅಲ್-ಬಲಾಹ್‌ನಲ್ಲಿರುವ ಅಲ್-ಅಕ್ಸಾ ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ. ದೇರ್ ಅಲ್-ಬಲಾದಲ್ಲಿ ಬಸ್‌ಗಾಗಿ ಕಾಯುತ್ತಿದ್ದಾಗ ನಡೆದ ದಾಳಿಯಲ್ಲಿ ಒಬ್ಬರು ಸಾವನ್ನಪ್ಪಿದ್ದರು, ನಾಲ್ವರು ಗಾಯಗೊಂಡಿದ್ದರು.

ಮತ್ತಷ್ಟು ಓದಿ: ಕೊನೆಯ ಅವಕಾಶ ಹೋಗಿಬಿಡಿ, ಗಾಜಾದಲ್ಲಿ ಉಳಿದುಕೊಂಡವರನ್ನು ಉಗ್ರರೆಂದು ಪರಿಗಣಿಸಲಾಗುವುದು: ಇಸ್ರೇಲ್​ ಬೆದರಿಕೆ

ಗಾಜಾಪಟ್ಟಿಯನ್ನು ಉಗ್ರಮುಕ್ತ ಮಾಡುವುದರಿಂದ ಹಿಡಿದು ಒತ್ತೆಯಾಳುಗಳ ಬಿಡುಗಡೆಯ ವರೆಗೆ ಟ್ರಂಪ್‌ ಸಿದ್ಧಪಡಿಸಿರುವ ಪ್ರಸ್ತಾವನೆಯನ್ನು ಶ್ವೇತಭವನ ಬಿಡುಗಡೆ ಮಾಡಿದ್ದು, ಅದರಂತೆ ಯುದ್ಧಸ್ಥಗಿತಕ್ಕೆ ಮುಂದಾಗಲು ಇಸ್ರೇಲ್‌ ಒಪ್ಪಿಕೊಂಡಿದೆ. ಆದರೆ ಹಮಾಸ್‌ ಉಗ್ರರು ಇದನ್ನು ಸ್ವಾಗತಿಸುತ್ತಾರೆಯೇ ಅಥವಾ ದಾಳಿಯನ್ನು ಇನ್ನಷ್ಟು ತೀವ್ರವಾಗಿಸುತ್ತಾರೆಯೇ ಎಂಬ ಬಗ್ಗೆ ಇನ್ನೂ ಸ್ಪಷ್ಟವಿಲ್ಲ.

ಕೊನೆಯ ಅವಕಾಶ ಹೋಗಿಬಿಡಿ, ಗಾಜಾದಲ್ಲಿ ಉಳಿದುಕೊಂಡವರನ್ನು ಉಗ್ರರೆಂದು ಪರಿಗಣಿಸಲಾಗುವುದು: ಇಸ್ರೇಲ್​ ಬೆದರಿಕೆ ಹಾಕಿತ್ತು. ಇದು ಕೊನೆಯ ಅವಕಾಶ ಹೋಗಿಬಿಡಿ, ಗಾಜಾ(Gaza)ದಲ್ಲಿ ಉಳಿದುಕೊಂಡವರನ್ನು ಉಗ್ರರೆಂದು ಪರಿಗಣಿಸಲಾಗುವುದು ಎಂದು ಇಸ್ರೇಲ್​ ರಕ್ಷಣಾ ಸಚಿವ ಕಾಟ್ಜ್​ ಪ್ಯಾಲೆಸ್ತೀನಿಯನ್ನರಿಗೆ ಗಾಜಾ ತೊರೆಯುವಂತೆ ಎಚ್ಚರಿಕೆ ನೀಡಿದ್ದಾರೆ. ಕೊನೆಯ ಅವಕಾಶ ಕೊಟ್ಟಿದ್ದೇವೆ, ಅಲ್ಲೇ ಉಳಿದುಕೊಂಡವರನ್ನು ಉಗ್ರರು, ಉಗ್ರರ ಬೆಂಬಲಿಗರೆಂದು ಪರಿಗಣಿಸಲಾಗುತ್ತದೆ ಹಾಗೂ ನೀವು ಇಸ್ರೇಲ್​ನಿಂದ ದಾಳಿಗಳನ್ನು ಎದುರಿಸಬೇಕಾಗುತ್ತದೆ ಎಂದಿದ್ದಾರೆ.

ಬುಧವಾರ ಇಸ್ರೇಲ್ ಗಾಜಾ ಮೇಲೆ ನಡೆಸಿದ ದಾಳಿಯಲ್ಲಿ 16 ಮಂದಿ ಪ್ಯಾಲೆಸ್ತೀನಿಯನ್ನರು ಸಾವನ್ನಪ್ಪಿದ್ದಾರೆ. ಅಕ್ಟೋಬರ್ 7, 2023 ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿಯ ನಂತರ ಪ್ರಾರಂಭವಾದ ಯುದ್ಧವನ್ನು ಕೊನೆಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊಸ 20 ಅಂಶಗಳ ಪ್ರಸ್ತಾವನೆಯನ್ನು ಮಂಡಿಸಿರುವ ಸಮಯದಲ್ಲಿ ಈ ಘಟನೆ ನಡೆದಿದೆ.

ಕಳೆದ ತಿಂಗಳು ಗಾಜಾವನ್ನು ವಶಪಡಿಸಿಕೊಳ್ಳಲು ಇಸ್ರೇಲ್ ಪ್ರಮುಖ ದಾಳಿಯನ್ನು ಪ್ರಾರಂಭಿಸಿದ ನಂತರ ಸುಮಾರು 400,000 ಪ್ಯಾಲೆಸ್ತೀನಿಯನ್ನರು ಗಾಜಾ ನಗರವನ್ನು ತೊರೆದಿದ್ದಾರೆ. ಆದರೆ ಸಾವಿರಾರು ಜನರು ಇನ್ನೂ ಉಳಿದಿದ್ದಾರೆ, ಹಲವರು ತುಂಬಾ ದುರ್ಬಲರಾಗಿದ್ದಾರೆ.

ಗಾಜಾದಲ್ಲಿ ಉಳಿದಿರುವವರನ್ನು ಭಯೋತ್ಪಾದಕರು ಮತ್ತು ಭಯೋತ್ಪಾದನೆಯ ಬೆಂಬಲಿಗರು ಎಂದು ಪರಿಗಣಿಸಲಾಗುತ್ತದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ