ಯುದ್ಧಭೂಮಿಯಾದ ಪಿಒಕೆ; ಪ್ರತಿಭಟನಾಕಾರರು- ಪಾಕ್ ಸೇನೆಯ ಘರ್ಷಣೆಯಲ್ಲಿ 12 ಜನ ಸಾವು
ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಮೂರನೇ ದಿನಕ್ಕೆ ಕಾಲಿಟ್ಟ ಹಿಂಸಾಚಾರ, ಸಂಘರ್ಷದ ಪರಿಣಾಮವಾಗಿ ಪ್ರತಿಭಟನಾಕಾರರನ್ನು ಚದುರಿಸಲು ಪಾಕಿಸ್ತಾನಿ ಭದ್ರತಾ ಪಡೆಗಳು ಗುಂಡು ಹಾರಿಸಿ ಅಶ್ರುವಾಯು ಪ್ರಯೋಗಿಸಿವೆ. 38 ಪ್ರಮುಖ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರ್ಕಾರ ವಿಫಲವಾದ ಕಾರಣ ಆರಂಭವಾದ ಆಂದೋಲನವು ಈಗ ಮಿಲಿಟರಿ ದೌರ್ಜನ್ಯದ ವಿರುದ್ಧ ದೊಡ್ಡ ಪ್ರಮಾಣದ ಪ್ರತಿಭಟನೆಯಾಗಿ ಮಾರ್ಪಟ್ಟಿದೆ.

ಇಸ್ಲಾಮಾಬಾದ್, ಅಕ್ಟೋಬರ್ 2: ಇತ್ತೀಚಿನ ವರ್ಷಗಳಲ್ಲಿ ಅತಿದೊಡ್ಡ ಅಶಾಂತಿಯನ್ನು ಎದುರಿಸುತ್ತಿರುವ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಪ್ರತಿಭಟನಾಕಾರರ ಮೇಲೆ ಪಾಕಿಸ್ತಾನಿ ಭದ್ರತಾ ಪಡೆಗಳು (Pakistan Army) ಗುಂಡು ಹಾರಿಸಿದ್ದರಿಂದ 12 ನಾಗರಿಕರು ಸಾವನ್ನಪ್ಪಿದ್ದಾರೆ. 38 ಪ್ರಮುಖ ಬೇಡಿಕೆಗಳನ್ನು ಈಡೇರಿಸುವಲ್ಲಿ ಪಾಕಿಸ್ತಾನ ಸರ್ಕಾರ ವಿಫಲವಾದ ಕಾರಣದಿಂದ ಪ್ರಾರಂಭವಾದ ಪ್ರತಿಭಟನೆಗಳು, ಮಿಲಿಟರಿಯ ಅತಿರೇಕದ ವಿರುದ್ಧ ವ್ಯಾಪಕ ಆಂದೋಲನವಾಗಿ ಮಾರ್ಪಟ್ಟಿವೆ. ಇದರಿಂದಾಗಿ ಪಿಒಕೆ ಸ್ತಬ್ಧವಾಗಿದೆ.
ಇಂದು ಮೂರನೇ ದಿನಕ್ಕೆ ಕಾಲಿಟ್ಟ ಹಿಂಸಾಚಾರದ ಪರಿಣಾಮವಾಗಿ ಪ್ರತಿಭಟನಾಕಾರರು ದಡಿಯಾಲ್‌ನಲ್ಲಿ ಸೇನೆಯೊಂದಿಗೆ ಘರ್ಷಣೆ ನಡೆಸಿದರು. ಇಲ್ಲಿನ ಅಶಾಂತಿಯನ್ನು ಹತ್ತಿಕ್ಕಲು ಸರ್ಕಾರ ಸಾವಿರಾರು ಹೆಚ್ಚುವರಿ ಸೈನಿಕರನ್ನು ಕರೆಸಿತು. ಮುಜಫರಾಬಾದ್‌ನಲ್ಲಿ 5, ಧೀರ್‌ಕೋಟ್‌ನಲ್ಲಿ 5 ಮತ್ತು ದಡಿಯಾಲ್‌ನಲ್ಲಿ ಇಬ್ಬರು ಪ್ರತಿಭಟನಾಕಾರರನ್ನು ಪಾಕ್ ಸೇನಾಪಡೆಗಳು ಗುಂಡಿಕ್ಕಿ ಕೊಂದಿವೆ. ಮೂವರು ಪೊಲೀಸ್ ಸಿಬ್ಬಂದಿ ಕೂಡ ಸಾವನ್ನಪ್ಪಿದ್ದಾರೆ. ಇದಲ್ಲದೆ, 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ, ಅವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ.
🚨 Reportedly 25 killed, including children, in PoJK as GenZ-led protests erupt.
Pak Army firing on its own people, brutally crushing those rising against Islamabad’s rule. 🫢🤔😵💫 pic.twitter.com/3RcE26FSIw
— Naren Mukherjee (@NMukherjee6) September 30, 2025
ಇದನ್ನೂ ಓದಿ: ಪಾಕ್ ಸೇನಾ ಮುಖ್ಯಸ್ಥ ಆಸಿಮ್ರನ್ನು ಸೇಲ್ಸ್ಮ್ಯಾನ್ ಎಂದು ಕರೆದು ಅಪಹಾಸ್ಯ ಮಾಡಿದ ಪಾಕಿಸ್ತಾನ ಜನ
ಪಾಕಿಸ್ತಾನದಲ್ಲಿ ವಾಸಿಸುವ ಕಾಶ್ಮೀರಿ ನಿರಾಶ್ರಿತರಿಗೆ ಮೀಸಲಾಗಿರುವ ಪಿಒಕೆಯಲ್ಲಿನ 12 ವಿಧಾನಸಭಾ ಸ್ಥಾನಗಳನ್ನು ರದ್ದುಗೊಳಿಸುವ ಬೇಡಿಕೆಯು ಆಂದೋಲನಕ್ಕೆ ಮೂಲ ಕಾರಣವಾಗಿದೆ. ತೆರಿಗೆ ಪರಿಹಾರ, ಹಿಟ್ಟು ಮತ್ತು ವಿದ್ಯುತ್ ಮೇಲಿನ ಸಬ್ಸಿಡಿಗಳು, ಅಭಿವೃದ್ಧಿ ಯೋಜನೆಗಳನ್ನು ಪೂರ್ಣಗೊಳಿಸುವುದು ಇತರ ಬೇಡಿಕೆಗಳಾಗಿವೆ.
ಸೆಪ್ಟೆಂಬರ್ 29ರಂದು ಈ ಭಾಗದಲ್ಲಿ ಪ್ರತಿಭಟನೆಗಳು ಪ್ರಾರಂಭವಾದಾಗಿನಿಂದ ಇಲ್ಲಿನ ಮಾರುಕಟ್ಟೆಗಳು, ಅಂಗಡಿಗಳು ಮತ್ತು ಸ್ಥಳೀಯ ವ್ಯವಹಾರಗಳನ್ನು ಮುಚ್ಚಲಾಗಿದೆ. ಮೊಬೈಲ್, ಇಂಟರ್ನೆಟ್ ಮತ್ತು ಲ್ಯಾಂಡ್ಲೈನ್ ದೂರವಾಣಿ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಎಲ್ಲೆಡೆಯೂ ಪ್ರತಿಭಟನಾಕಾರರು “ಆಡಳಿತಗಾರರೇ, ಎಚ್ಚರದಿಂದಿರಿ, ನಾವೇ ನಿಮ್ಮ ವಿನಾಶ” ಮತ್ತು “ಕಾಶ್ಮೀರ ನಮ್ಮದು, ಅದರ ಭವಿಷ್ಯವನ್ನು ನಾವು ನಿರ್ಧರಿಸುತ್ತೇವೆ” ಎಂಬ ಘೋಷಣೆಗಳೊಂದಿಗೆ ಮೆರವಣಿಗೆ ನಡೆಸುತ್ತಿದ್ದಾರೆ. ಕಳೆದ ಹಲವು ದಶಕಗಳಲ್ಲಿ ಪಿಒಕೆ ನಾಗರಿಕರು ನೇರವಾಗಿ ಪಾಕಿಸ್ತಾನ ಸರ್ಕಾರ ಮತ್ತು ಮಿಲಿಟರಿಯನ್ನು ಗುರಿಯಾಗಿಸಿಕೊಂಡಿರುವುದು ಬಹುಶಃ ಇದೇ ಮೊದಲು. ಹೀಗಾಗಿ, ಪಿಒಕೆ ಅಕ್ಷರಶಃ ಯುದ್ಧಭೂಮಿಯಂತಾಗಿದೆ.
ಇದನ್ನೂ ಓದಿ: ಪಾಕಿಸ್ತಾನದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದ ಭಯಾನಕ ವಿಡಿಯೋ
ಈ ನಡುವೆ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಸರ್ಕಾರವು ಪಿಒಕೆಯ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಶಾಂತಿಯುತ ಪರಿಹಾರವನ್ನು ಕಂಡುಹಿಡಿಯಲು ಸಮಿತಿಯನ್ನು ಸ್ಥಾಪಿಸಲು ಸಿದ್ಧವಾಗಿರುವುದಾಗಿ ಘೋಷಿಸಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




