
ಮೆಡೆಲಿನ್: ಕೊಲಂಬಿಯಾದ (Colombia Plane Crash) ಎರಡನೇ ಅತಿದೊಡ್ಡ ನಗರವಾದ ಮೆಡೆಲಿನ್‌ನಲ್ಲಿ (Medellin) 8 ಪ್ರಯಾಣಿಕರಿದ್ದ ಸಣ್ಣ ವಿಮಾನವೊಂದು ಸೋಮವಾರ ಪತನವಾಗಿದೆ. ಈ ದುರಂತದಲ್ಲಿ ವಿಮಾನದಲ್ಲಿದ್ದ 8 ಮಂದಿಯೂ ಸಾವನ್ನಪ್ಪಿದ್ದಾರೆ. ಕೊಲಂಬಿಯಾದ ವಾಯುಯಾನ ಅಧಿಕಾರಿಗಳ ಪ್ರಕಾರ, ಒಲಯಾ ಹೆರೆರಾ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ನಂತರ ವಿಮಾನವು ಪತನಗೊಂಡಿದೆ. ಅಪಘಾತಕ್ಕೆ ನಿಖರವಾದ ಕಾರಣವೇನೆಂಬುದು ಇನ್ನೂ ಪತ್ತೆಯಾಗಿಲ್ಲ.
ಕೊಲಂಬಿಯಾದ ಎರಡನೇ ಅತಿದೊಡ್ಡ ನಗರ ಮೆಡೆಲಿನ್‌ನ ವಸತಿ ಪ್ರದೇಶದಲ್ಲಿ ವಿಮಾನ ಪತನಗೊಂಡಿದ್ದು, ವಿಮಾನದಲ್ಲಿದ್ದವರೆಲ್ಲರೂ ಸಾವನ್ನಪ್ಪಿದ್ದಾರೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಈ ವಿಮಾನವು ಸೋಮವಾರ ಬೆಳಿಗ್ಗೆ ಒಲಯಾ ಹೆರೆರಾ ವಿಮಾನ ನಿಲ್ದಾಣದಿಂದ ಹೊರಟಿತ್ತು. ಟೇಕಾಫ್ ಆಗುತ್ತಿದ್ದಂತೆ ಪಕ್ಕದಲ್ಲಿದ್ದ ಮನೆಯೊಂದಕ್ಕೆ ಅಪ್ಪಳಿಸಿದೆ. ಇಂಜಿನ್ ವೈಫಲ್ಯದಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಆದರೆ, ತನಿಖೆಯ ಬಳಿಕ ನಿಜವಾದ ಕಾರಣವೇನೆಂಬುದು ಹೊರಬೀಳಲಿದೆ.
ಇದನ್ನೂ ಓದಿ: ಅರುಣಾಚಲ ಪ್ರದೇಶದಲ್ಲಿ ಪ್ರಧಾನಿ ಮೋದಿಯಿಂದ ಮೊಟ್ಟ ಮೊದಲ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣ ಲೋಕಾರ್ಪಣೆ
ವಿಮಾನ ಡಿಕ್ಕಿ ಹೊಡೆದಿದ್ದರಿಂದ ಮನೆಯಲ್ಲಿ ಯಾರಾದರೂ ಗಾಯಗೊಂಡಿದ್ದಾರೆಯೇ ಅಥವಾ ಸಾವನ್ನಪ್ಪಿದ್ದಾರೆಯೇ ಎಂಬ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿಲ್ಲ.
Se ha presentado el accidente de una avioneta en el sector de Belen Rosales. Todas las capacidades de la administración se han activado para socorrer a las Victimas. pic.twitter.com/Vj5qaJBc8T
— Daniel Quintero Calle (@QuinteroCalle) November 21, 2022
ವಿಮಾನದಲ್ಲಿದ್ದ 6 ಪ್ರಯಾಣಿಕರು ಮತ್ತು ಇಬ್ಬರು ಸಿಬ್ಬಂದಿ ಮೃತಪಟ್ಟಿದ್ದಾರೆ. ಮೆಡೆಲಿನ್ ಮೇಯರ್ ಡೇನಿಯಲ್ ಕ್ವಿಂಟೆರೊ ಈ ಬಗ್ಗೆ ಮಾಹಿತಿ ನೀಡಿದ್ದು, ವಿಮಾನವು ಟೇಕಾಫ್ ಸಮಯದಲ್ಲಿ ಇಂಜಿನ್ ವೈಫಲ್ಯ ಉಂಟಾದ ಹಿನ್ನೆಲೆಯಲ್ಲಿ ದುರದೃಷ್ಟವಶಾತ್ ಪೈಲಟ್‌ಗೆ ವಿಮಾನವನ್ನು ಮೇಲಕ್ಕೆ ಏರಿಸಲು ಸಾಧ್ಯವಾಗಲಿಲ್ಲ. ಇದರಿಂದ ವಿಮಾನ ನಿಲ್ದಾಣದ ಪಕ್ಕದಲ್ಲಿದ್ದ ಮನೆಗೆ ಡಿಕ್ಕಿ ಹೊಡೆದು ವಿಮಾನ ಪತನವಾಯಿತು. ಈ ಅಪಘಾತದಿಂದ 7 ಮನೆಗಳು ನಾಶವಾಗಿದ್ದು, 6 ಕಟ್ಟಡಗಳು ಹಾನಿಗೊಳಗಾಗಿವೆ ಎಂದು ಹೇಳಿದ್ದಾರೆ.
ಮೆಡೆಲಿನ್ ಕಿರಿದಾದ ಕಣಿವೆಯಲ್ಲಿದೆ. 2016ರಲ್ಲಿ ಬ್ರೆಜಿಲ್‌ನ ಚಾಪೆಕೋಯೆನ್ಸ್ ಫುಟ್‌ಬಾಲ್ ತಂಡವನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಪರ್ವತಗಳ ಮಧ್ಯೆ ಅಪಘಾತಕ್ಕೀಡಾಗಿತ್ತು. ಈ ವೇಳೆ ವಿಮಾನದಲ್ಲಿದ್ದ 77 ಜನರ ಪೈಕಿ 16 ಆಟಗಾರರು ಸೇರಿದಂತೆ 71 ಜನರು ಸಾವನ್ನಪ್ಪಿದ್ದರು.