ಕೆನಡಾ: ರೇಲ್​ರೋಡ್​ ಕ್ರಾಸಿಂಗ್ ಮೇಲೆ ನಿಂತ ಕಾರಿಗೆ ಟ್ರೇನ್ ಢಿಕ್ಕಿ ಹೊಡೆದರೂ ಕಾರು ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗುತ್ತಾನೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 23, 2022 | 8:01 AM

ಅದೆಲ್ಲ ಸರಿ ಈ ಅಪಘಾತದ ಅತ್ಯಂತ ಸೋಜಿಗದ ಸಂಗತಿ ಏನು ಗೊತ್ತಾ? ಕಾರಿನ ಡ್ರೈವರ್ ಯಾವುದೇ ಗಂಭೀರ ಸ್ವರೂಪದ ಗಾಯವಿಲ್ಲದೆ ನಡೆದುಹೋದನಂತೆ! ಆದರೆ ಬೇಜವಾಬ್ದಾರಿ ವರ್ತನೆ ಮತ್ತು ಅಪಾಯಕಾರಿ ಕಾರು ಚಾಲನೆಯ ಅರೋಪಗಳನ್ನು ಅವನು ಎದುರಿಸುತ್ತಿದ್ದಾನೆ.

ಕೆನಡಾ: ರೇಲ್​ರೋಡ್​ ಕ್ರಾಸಿಂಗ್ ಮೇಲೆ ನಿಂತ ಕಾರಿಗೆ ಟ್ರೇನ್ ಢಿಕ್ಕಿ ಹೊಡೆದರೂ ಕಾರು ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗುತ್ತಾನೆ!
ನುಜ್ಜುಗುಜ್ಜಾಗಿರುವ ಕಾರು
Follow us on

Toronto (Canada): ಈ ವಿಡಿಯೋ ಇಂದು ಅಥವಾ ನಿನ್ನೆಯದಲ್ಲ ಮಾರಾಯ್ರೇ. ಸುಮಾರು ಒಂದು ತಿಂಗಳ ಹಿಂದೆ ನಡೆದಿರುವ ಭಯಾನಕ ಘಟನೆ ಇದು. ಮೇ ತಿಂಗಳ ಮಧ್ಯಭಾಗದಲ್ಲಿ ಕೆನಡಾದ ರಾಜಧಾನಿ ಟೊರೊಂಟೊನಲ್ಲಿ (Toronto) ಪ್ರಯಾಣಿಕರ ಟ್ರೇನೊಂದು (passenger train) ರೇಲ್ವೇ ಟ್ರ್ಯಾಕ್ ಮೇಲೆ ನಿಂತಿದ್ದ ಕಾರೊಂದಕ್ಕೆ ಢಿಕ್ಕಿ ಹೊಡೆದು ಕ್ರಮೇಣ ನಿಲುಗಡೆಗೆ ಬರುವ ವಿಡಿಯೋವನ್ನು ಒಂಟಾರಿಯೋ ಮೂಲದ ರಸ್ತೆಗಳು ಮತ್ತು ಸಾರ್ವಜನಿಕ ಸಾರಿಗೆ ನಿರ್ವಹಿಸುವ ಮೆಟ್ರೋಲಿಂಕ್ಸ್ (Metrolinx) ಹೆಸರಿನ ಸಂಸ್ಥೆಯು ಲೆವೆಲ್ ಕ್ರಾಸಿಂಗ್ಗಳ ಬಳಿ ಸುರಕ್ಷತೆ ಕುರಿತು ಜನರಲ್ಲಿ ಜಾಗೃತಿ ಹೆಚ್ಚಿಸಲು ಬಿಡುಗಡೆ ಮಾಡಿದೆ.

ಸ್ಟೋರಿಫುಲ್ ಹೆಸರಿನ ಸಂಸ್ಥೆಯೊಂದರ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಾಗಿರುವ ವಿಡಿಯೋದ ಆರಂಭಿಕ ಭಾಗದಲ್ಲಿ ಕಾರನ್ನು ಓಡಿಸಿಕೊಂಡು ರೇಲ್ ರೋಡ್ ಕ್ರಾಸಿಂಗ್ ಬಳಿ ಬರುವುದನ್ನು ನೋಡಬಹುದು. ಆಗಲೇ ಕ್ರಾಸಿಂಗ್ ಬಳಿ ಬ್ಯಾರಿಯರ್ ರಸ್ತೆಗೆ ಅಡ್ಡಲಾಗಿ ಇಳಿಯುತ್ತದೆ. ಅದರರ್ಥ ಎಲ್ಲರಿಗೂ ಗೊತ್ತು ಮಾರಾಯ್ರೇ. ಟ್ರ್ಯಾಕ್ ಮೇಲೆ ಟ್ರೇನೊಂದು ಬರುತ್ತಿದೆ, ಅದು ಹೋಗುವವರೆಗೆ ಬ್ಯಾರಿಯರ್ ಹೊರಭಾಗದಲ್ಲಿ ಕಾಯಿರಿ ಅನ್ನುವ ಸೂಚನೆ ಅದಾಗಿರುತ್ತದೆ.

ಆದರೆ ಈ ಎಸ್ ಯು ವಿ ಯಲ್ಲಿನ ಚಾಲಕನ ತಲೆಯಲ್ಲಿ ಅದೇನು ಯೋಚನೆ ಬರುತ್ತದೆಯೋ? ಅವನು ಬ್ಯಾರಿಯರ್ ಸುತ್ತು ಹಾಕಿಕೊಂಡು ಹಳಿಗಳ ಮೇಲೆ ಬಂದುಬಿಡುತ್ತಾನೆ. ಹಾಗೆ ಬಂದವನು ಕೂಡಲೇ ಹಳಿಗಳನ್ನು ದಾಟುವ ಪ್ರಯತ್ನ ಕೂಡ ಮಾಡುವುದಿಲ್ಲ. ಕೆಲವೇ ಕ್ಷಣಗಳಲ್ಲಿ ಅಲ್ಲಿಗೆ ಬರುವ ಪ್ಯಾಸೆಂಜರ್ ಟ್ರೇನೊಂದು ಕಾರಿಗೆ ಧಡಾರನೆ ಗುದ್ದಿ ಕ್ರಮೇಣ ನಿಂತುಬಿಡುತ್ತದೆ.

ವಿಡಿಯೋ ಕೊನೆಭಾಗದಲ್ಲಿ ನುಜ್ಜುಗುಜ್ಜಾಗಿರುವ ಕಾರನ್ನು ನೀವು ನೋಡಬಹುದು.

ಅದೆಲ್ಲ ಸರಿ ಈ ಅಪಘಾತದ ಅತ್ಯಂತ ಸೋಜಿಗದ ಸಂಗತಿ ಏನು ಗೊತ್ತಾ? ಕಾರಿನ ಡ್ರೈವರ್ ಯಾವುದೇ ಗಂಭೀರ ಸ್ವರೂಪದ ಗಾಯವಿಲ್ಲದೆ ನಡೆದುಹೋದನಂತೆ! ಆದರೆ ಬೇಜವಾಬ್ದಾರಿ ವರ್ತನೆ ಮತ್ತು ಅಪಾಯಕಾರಿ ಕಾರು ಚಾಲನೆಯ ಅರೋಪಗಳನ್ನು ಅವನು ಎದುರಿಸುತ್ತಿದ್ದಾನೆ.

ಮೆಟ್ರೋಲಿಂಕ್ಸ್ ಏಜೆನ್ಸಿ ನೀಡಿರುವ ಮಾಹಿತಿ ಪ್ರಕಾರ ಲೆವೆಲ್ ಕ್ರಾಸಿಂಗ್ ಗಳ ಬಳಿ ಪ್ರತಿವರ್ಷ ಕನಿಷ್ಟ 100 ಕೆನಡಿಯನ್ನರು ಗಂಭೀರವಾಗಿ ಗಾಯಗೊಳ್ಳುತ್ತಾರೆ ಇಲ್ಲವೇ ಸಾವನ್ನಪ್ಪುತ್ತಾರೆ.

‘ಲೆವೆಲ್ ಕ್ರಾಸಿಂಗ್ ಗಳ ಬಳಿ ಪ್ರತಿಯೊಬ್ಬರು ಬಹಳ ಎಚ್ಚರಿಕೆಯಿಂದಿರಬೇಕು ಮತ್ತು ಟ್ರೇನುಗಳು ಬಹಳ ವೇಗವಾಗಿ ಚಲಿಸುತ್ತವೆ ಎಂಬ ಅಂಶವನ್ನು ಮರೆಯಬಾರದು. ನೆನಪಿಡಲೇಬೇಕಾದ ಇನ್ನೊಂದು ಸಂಗತಿಯೆಂದರೆ ಟ್ರೇನುಗಳು ಯಾವುದೇ ಸಮಯ ಲೆವೆಲ್ ಕ್ರಾಸಿಂಗ್ ಬಳಿ ಬರಬಹುದು,’ ಎಂದು ಮೆಟ್ರೋಲಿಂಕ್ಸ್ ಏಜೆನ್ಸಿಯ ಮುಖ್ಯ ಸುರಕ್ಷತಾ ಅಧಿಕಾರಿ ಮಾರ್ಟಿನ್ ಗ್ಯಾಲಘರ್ ಹೇಳಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.