ಗುಂಪುಗಾರಿಕೆಯಿಂದ ಯುದ್ಧಭೀತಿ: ನ್ಯಾಟೊ ವಿರುದ್ಧ ಹರಿಹಾಯ್ದ ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್
ಉಕ್ರೇನ್ ಮೇಲಿನ ರಷ್ಯಾ ದಾಳಿಗೆ ನ್ಯಾಟೊ ಪ್ರಚೋಚನೆಯೇ ಕಾರಣ ಎಂದು ಚೀನಾ ಮೊದಲಿನಿಂದಲೂ ಪ್ರತಿಪಾದಿಸುತ್ತಿದೆ.
ಬೀಚಿಂಗ್: ಗುಂಪುಗಾರಿಕೆ, ಒಕ್ಕೂಟಗಳ ಸಂಘರ್ಷ ಮತ್ತು ಸೇನಾ ಮೈತ್ರಿಗಳಿಂದ ಸಂಘರ್ಷ ಮತ್ತು ಯುದ್ಧದ ಅಪಾಯ ಹೆಚ್ಚಾಗುತ್ತದೆ ಎಂದು ಚೀನಾ ಅಧ್ಯಕ್ಷ ಷಿ ಜಿನ್ಪಿಂಗ್ (Xi Jinping) ಹೇಳಿದರು. ವಿಶ್ವ ಸಮುದಾಯವು ಇಂಥ ಗುಂಪುಗಾರಿಕೆಗಳನ್ನು ವಿರೋಧಿಸಬೇಕು ಎಂದು ಕರೆ ನೀಡಿದರು. ಈ ಮಾತುಗಳನ್ನು ಷಿ ಜಿನ್ಪಿಂಗ್ ಅವರು ಅಮೆರಿಕ ನೇತೃತ್ವದ ನ್ಯಾಟೊ (North Atlantic Treaty Organisation – NATO) ಒಕ್ಕೂಟವನ್ನೇ ಗಮನದಲ್ಲಿ ಇರಿಸಿಕೊಂಡು ಹೇಳಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ. ಉಕ್ರೇನ್ ಮೇಲಿನ ರಷ್ಯಾ ದಾಳಿಗೆ ನ್ಯಾಟೊ ಪ್ರಚೋಚನೆಯೇ ಕಾರಣ ಎಂದು ಚೀನಾ ಮೊದಲಿನಿಂದಲೂ ಪ್ರತಿಪಾದಿಸುತ್ತಿದೆ.
ಜಗತ್ತಿನಲ್ಲಿ ಈ ಹಿಂದೆ ಸಂಭವಿಸಿರುವ ಹಲವು ದುರಂತಗಳು ವಿವಿಧ ದೇಶಗಳ ಯುದ್ಧೋತ್ಸಾಹಿ ಮೈತ್ರಿಗಳಿಂದ ಶಾಂತಿ ಮತ್ತು ಭದ್ರತೆಗೆ ಏನೆಲ್ಲಾ ಸಮಸ್ಯೆ ತಂದೊಡ್ಡಿದೆ ಎನ್ನುವ ಪಾಠವನ್ನು ನಮಗೆ ಕಲಿಸಿದೆ. ಇಂಥ ಮೈತ್ರಿಗಳು ನಮ್ಮನ್ನು ಯುದ್ಧದತ್ತ ಕೊಂಡೊಯ್ಯುತ್ತವೆ ಎಂದು ಅವರು ತಿಳಿಸಿದರು.
ಬ್ರಿಕ್ಸ್ ವ್ಯಾಪಾರ ಸಮಾವೇಶದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ತಮ್ಮ ಭಾಷಣದ ಬಹುತೇಕ ಅವಧಿಯನ್ನು ನ್ಯಾಟೊ ಮೈತ್ರಿಕೂಟದ ಟೀಕೆ ಮತ್ತು ರಷ್ಯಾಕ್ಕೆ ಬೆಂಬಲ ಸೂಚಿಸುವ ಉದ್ದೇಶಕ್ಕೆ ಮೀಸಲಿಟ್ಟಿದ್ದರು. ಆದರೆ ಅಮೆರಿಕ ಅಥವಾ ರಷ್ಯಾದ ಹೆಸರನ್ನು ನೇರವಾಗಿ ಎಲ್ಲಿಯೂ ಪ್ರಸ್ತಾಪಿಸಲಿಲ್ಲ. ಉಕ್ರೇನ್ ಮೇಲಿನ ರಷ್ಯಾ ದಾಳಿಯನ್ನು ಚೀನಾ ಈವರೆಗೆ ಬಹಿರಂಗವಾಗಿ ಖಂಡಿಸಿಲ್ಲ. ಉಕ್ರೇನ್ ಮೇಲಿನ ಆಕ್ರಮಣ ಎಂದೂ ಚೀನಾ ಈವರೆಗೆ ಒಪ್ಪಿಕೊಂಡಿಲ್ಲ.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ