ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡ ನಂತರ ಅವರು ಅಲ್ಲಿ ಪ್ರಜಾಪ್ರಭುತ್ವ ಸ್ಥಾಪಿಸಬಹುದು ಎಂದು ಯಾರೊಬ್ಬರೂ ನಿರೀಕ್ಷಿಸಿರಲಿಲ್ಲ. ಈಗ ಅಧಿಕೃತವಾಗಿ ತಾಲಿಬಾನ್ ನಾಯಕರೇ ಅಫ್ಘಾನಿಸ್ತಾನದಲ್ಲಿ ಪ್ರಜಾಪ್ರಭುತ್ವ ಜಾರಿಗೊಳಿಸುವುದಿಲ್ಲ ಎಂದು ಹೇಳಿದ್ದಾರೆ. ಅಫ್ಘಾನಿಸ್ತಾನದಲ್ಲಿ ಷರಿಯಾ ಕಾನೂನು ಜಾರಿಗೊಳಿಸಲಾಗುತ್ತೆ ಎಂದು ಘೋಷಿಸಿದ್ದಾರೆ. ಈ ಷರಿಯಾ ಕಾನೂನುಗಳೇ ಅಫ್ಘಾನ್ ಜನರಲ್ಲಿ ಭಯ ಹುಟ್ಟಿಸಿವೆ. ಇಷ್ಟಕ್ಕೂ ಷರಿಯಾ ಕಾನೂನು ಅಂದ್ರೆ ಏನು? ಷರಿಯಾ ಕಾನೂನುಗಳಲ್ಲಿರುವ ಅಂಶಗಳೇನು? ಇಲ್ಲಿದೆ ವಿವರ.
ಕಳೆದ ಭಾನುವಾರದಿಂದಲೇ ತಾಲಿಬಾನ್ ಉಗ್ರಗಾಮಿಗಳ ನಿಯಂತ್ರಣದಲ್ಲಿರುವ ಅಫ್ಘಾನಿಸ್ತಾನದಲ್ಲಿ 20 ವರ್ಷಗಳ ಪ್ರಜಾಪ್ರಭುತ್ವ ಆಳ್ವಿಕೆ ಅಂತ್ಯ ಕಂಡಿದೆ. ಮತ್ತೆ ಪ್ರಜಾಪ್ರಭುತ್ವ, ನಾಗರಿಕ ಸರ್ಕಾರ ಆಸ್ತಿತ್ವಕ್ಕೆ ಬರುವ ನಿರೀಕ್ಷೆ ಯಾರಲ್ಲೂ ಇಲ್ಲ. ಈಗ ಅಧಿಕೃತವಾಗಿ ತಾಲಿಬಾನ್ ನಾಯಕರೇ, ಪ್ರಜಾಪ್ರಭುತ್ವವನ್ನು ಜಾರಿ ಮಾಡಲ್ಲ ಎಂದು ಘೋಷಿಸಿದ್ದಾರೆ. ಷರಿಯಾ ಕಾನೂನುಗಳನ್ನು ಜಾರಿಗೊಳಿಸಿ, ಅದರ ಪ್ರಕಾರವೇ ಆಳ್ವಿಕೆ ನಡೆಸಲಾಗುತ್ತೆ ಎಂದು ತಾಲಿಬಾನ್ ನಾಯಕ ವಾಹೀದುಲ್ಲಾ ಹಶ್ಮಿ ಹೇಳಿದ್ದಾನೆ.
ಅಫ್ಘಾನಿಸ್ತಾನದಲ್ಲಿ ಕೌನ್ಸಿಲ್ ರಚಿಸಿ, ತಾಲಿಬಾನ್ ಸುಪ್ರೀಂ ಲೀಡರ್ ಹಬೀತುಲ್ಲಾ ಅಖುಂದಾಜಾ ನೇತೃತ್ವದಲ್ಲಿ ಆಳ್ವಿಕೆ ನಡೆಸಲಾಗುತ್ತೆ ಎಂದು ವಾಹೀದುಲ್ಲಾ ಹಶ್ಮಿ ಹೇಳಿದ್ದಾನೆ. ಈ ಬಾರಿಯೂ ಈ ಹಿಂದೆ 1996ರಲ್ಲಿ ಇದ್ದಂತೆ, ದೇಶದ ಆಳ್ವಿಕೆಗೆ ಕೌನ್ಸಿಲ್ ರಚಿಸಲಾಗುತ್ತೆ. 1996ರಲ್ಲಿ ಮುಲ್ಲಾ ಓಮರ್ ಆಗ ಕೌನ್ಸಿಲ್ನ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದ. ಈಗ ತಾಲಿಬಾನ್ ಸುಪ್ರೀಂ ಲೀಡರ್ ಹಬೀತುಲ್ಲಾ ಅಖುಂದಾಜಾ ಕೌನ್ಸಿಲ್ ಮೇಲುಸ್ತುವಾರಿ ನೋಡಿಕೊಳ್ಳುತ್ತಾರೆ. ಹಬೀತುಲ್ಲಾ ಅಖುಂದಾಜಾನ ನಂತರದ 2ನೇ ಹಂತದ ನಾಯಕರು ರಾಷ್ಟ್ರಾಧ್ಯಕ್ಷ ಸ್ಥಾನದಲ್ಲಿರುತ್ತಾರೆ ಎಂದು ವಾಹೀದುಲ್ಲಾ ಹಶ್ಮಿ ಹೇಳಿದ್ದಾನೆ. ಹಬೀತುಲ್ಲಾ ಅಖುಂದಾಜಾ ನಂತರ ಮೂವರು ಎರಡನೇ ಹಂತದ ನಾಯಕರಿದ್ದಾರೆ. ಅವರೇ, ಮೌಲ್ವಿ ಯಾಕೂಬ್, ಸಿರಾಜುದ್ದೀನ್ ಹಕ್ಕಾನಿ ಹಾಗೂ ಮುಲ್ಲಾ ಅಬ್ದುಲ್ ಘನಿ ಬಾರದರ್. ಇವರ ಪೈಕಿ ತಾಲಿಬಾನ್ ರಾಜಕೀಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಿರೋದು, ತಾಲಿಬಾನ್ ಸಂಘಟನೆಯ ಮುಖವಾಗಿರೋದು ಮುಲ್ಲಾ ಅಬ್ದುಲ್ ಘನಿ ಬಾರದರ್. ಹೀಗಾಗಿ ಅಫ್ಘಾನಿಸ್ತಾನದ ಮುಂದಿನ ರಾಷ್ಟ್ರಾಧ್ಯಕ್ಷ ಆಗಿ ಮುಲ್ಲಾ ಅಬ್ದುಲ್ ಘನಿ ಬಾರದರ್ ನೇಮಕವಾಗುವ ಸಾಧ್ಯತೆ ಹೆಚ್ಚಿದೆ.
ಷರಿಯಾ ಕಾನೂನು ಪ್ರಕಾರ ಆಳ್ವಿಕೆ ಎಂದ ತಾಲಿಬಾನ್
ಷರಿಯತ್ ಕಾನೂನು ಎಂಬುದು ಕುರಾನ್, ಫತ್ವಾಗಳಿಂದ ಕೂಡಿದ್ದು, ಇಸ್ಲಾಮಿಕ್ ವಿದ್ವಾಂಸರ ತೀರ್ಪುಗಳನ್ನು ಆಧರಿಸಿರುತ್ತದೆ. ಪ್ರಾರ್ಥನೆ, ಉಪವಾಸ, ಬಡವರಿಗೆ ದಾನ ಸೇರಿದಂತೆ ಜೀವನದ ನಿಯಮಗಳನ್ನು ಷರಿಯತ್ ಕಾನೂನು ಹೇಳುತ್ತದೆ. ದೇವರ ಇಚ್ಛೆಯಂತೆ ಮುಸ್ಲಿಮರು ಹೇಗೆ ಜೀವನ ನಡೆಸಬೇಕು ಎಂದು ವಿವರಿಸುತ್ತದೆ. ಅಪರಾಧವನ್ನು ಹದ್ ಮತ್ತು ತಜೀರ್ ಎಂದು ಎರಡು ವರ್ಗಗಳಾಗಿ ವಿಂಗಡಸಲಾಗಿದೆ. ಹದ್ ಎಂಬುದು ಅಪರಾಧಗಳು ನಿಗದಿತ ದಂಡಗಳೊಂದಿಗೆ ಗಂಭೀರ ಅಪರಾಧಗಳಾಗಿವೆ. ತಜೀರ್ ಅಪರಾಧಗಳಿಗೆ ಕಠಿಣ ಶಿಕ್ಷೆ ವಿಧಿಸಲಾಗುತ್ತೆ. ಶಿಕ್ಷೆಯನ್ನು ನ್ಯಾಯಾಧೀಶರ ವಿವೇಚನೆಗೆ ಬಿಡಲಾಗುತ್ತೆ. ಕಳ್ಳತನ ಹದ್ ಅಪರಾಧಗಳ ವ್ಯಾಪ್ತಿಯಲ್ಲಿದ್ದು, ಅಪರಾಧಿಯ ಕೈಯನ್ನು ಕತ್ತರಿಸುವ ಮೂಲಕ ಶಿಕ್ಷೆಗೆ ಒಳಪಡಿಸಬಹುದು. ಕಲ್ಲೆಸೆಯುವ ಮೂಲಕ ಮರಣದಂಡನೆಯನ್ನು ವಿಧಿಸಬಹುದು.
ಷರಿಯತ್ ಕಾನೂನು ಪ್ರಕಾರ ಮುಸ್ಲಿಂ ಮಹಿಳೆಯರು, ಮುಸ್ಲಿಂಮೇತರ ಪುರುಷನನ್ನು ಮದುವೆಯಾಗಲು ಅವಕಾಶವಿಲ್ಲ. ಮುಸ್ಲಿಂ ಮಹಿಳೆಯರು ಪತಿಗೆ ಅವಿಧೇಯರಾಗಲು ಅವಕಾಶವಿಲ್ಲ. ಮಹಿಳೆ ಗಂಡನಿಲ್ಲದೆ, ರಕ್ತಸಂಬಂಧಿ ಇಲ್ಲದೇ ಎಂದಿಗೂ ಮನೆಯಿಂದ ಹೊರಹೋಗುವಂತಿಲ್ಲ. ಪುರುಷ ಮತ್ತು ಮಹಿಳೆಯು ಸ್ವಂತ ಸಂಗಾತಿಗಳನ್ನು ಹೊರತುಪಡಿಸಿ, ಬೇರೆ ಯಾವುದೇ ಪುರುಷ, ಮಹಿಳೆಯೊಂದಿಗೆ ಸಂಪರ್ಕ ಹೊಂದಲು ಅವಕಾಶ ಇಲ್ಲ. ಮಹಿಳೆಯರು ಪುರುಷನೊಂದಿಗೆ ದೀರ್ಘ ಕಣ್ಣಿನ ಸಂಪರ್ಕ ಹೊಂದುವಂತಿಲ್ಲ. ಇದು ಅನೈತಿಕ ಭಾವನೆಗಳಿಗೆ ಮೊದಲ ಹೆಜ್ಜೆಯಾಗಬಹುದು. ಮೈಗೆ ಅಂಟಿಕೊಳ್ಳಬಹುದಾದ ಅಥವಾ ಅಂಗಾಂಗಗಳು ಕಾಣುವ ರೀತಿಯಲ್ಲಿ ಬಟ್ಟೆಗಳನ್ನು ಧರಿಸುವಂತಿಲ್ಲ. ಸುಗಂಧ ದ್ರವ್ಯಗಳು, ಮೇಕಪ್ ಆಭರಣಗಳು, ಆಲಂಕಾರಿಕ ಬಟ್ಟೆ ಧರಿಸುವಂತಿಲ್ಲ. ಪುರುಷರ ಗಮನವನ್ನು ತಮ್ಮ ಕಡೆಗೆ ತಿರುಗಿಸುವಂತಹ ಯಾವುದೇ ಬಟ್ಟೆ ಧರಿಸುವುದನ್ನು ಇಸ್ಲಾಂ ನಿಷೇಧಿಸುತ್ತದೆ. ಮುಸ್ಲಿಂ ಮಹಿಳೆ ಪ್ರದರ್ಶನದ ಸಂಕೇತವಲ್ಲ. ಬದಲಾಗಿ ಆಕೆ ಗೌರವದ ಸಂಕೇತ. ನಖಾಬ್ ಅಥವಾ ಪರ್ದಾ ಇಲ್ಲದೇ ಮಹಿಳೆಯರು ಹೊರಗಡೆ ಹೋಗುವಂತಿಲ್ಲ.
ತಾಲಿಬಾನಿಗಳು ತಮ್ಮದೇ ಆದ ನಿಯಮಗಳನ್ನು ಈ ಹಿಂದೆ ಅಫ್ಘಾನ್ನಲ್ಲಿ ಜಾರಿಗೆ ತಂದಿದ್ದರು. ಮಹಿಳೆಯರು ಹೈಹೀಲ್ಡ್ ಚಪ್ಪಲಿ ಧರಿಸುವಂತಿಲ್ಲ. ಸಾರ್ವಜನಿಕ ಸ್ಥಳದಲ್ಲಿ ಗಟ್ಟಿ ಧ್ವನಿಯಲ್ಲಿ ಮಾತನಾಡಬಾರದು. ಮಹಿಳೆಯರ ಪೋಟೋ ತೆಗೆಯುವುದು, ಪ್ರಿಂಟ್ ಮಾಡುವುದಕ್ಕೆ ನಿರ್ಬಂಧ ಇರುತ್ತೆ. ಮಹಿಳೆಯರ ಧ್ವನಿ ಪರ ಪುರುಷನಿಗೆ ಕೇಳಬಾರದು. ಈ ನಿಯಮ ಉಲಂಘಿಸಿದರೇ, ಅಂಥವರನ್ನು ಶಿಕ್ಷಿಸುವ ಅಧಿಕಾರ ಅಲ್ಲಿನ ಧಾರ್ಮಿಕ ಮುಖಂಡರಿಗೆ ಇರುತ್ತೆ. ಅಫ್ಘಾನಿಸ್ತಾನದಲ್ಲಿ ಈಗಾಗಲೇ ಬುರ್ಖಾಗಳಿಗೆ ಬೇಡಿಕೆ ಗಗನಕ್ಕೇರಿದೆ. ಮಹಿಳೆಯರು ಹಿಜಬ್ ಧರಿಸಲು ತಾಲಿಬಾನ್ ಸೂಚಿಸಿದೆ.
ಅಫ್ಘಾನಿಸ್ತಾನದಲ್ಲಿ ಮಹಿಳೆಯರು ಶಿಕ್ಷಣ ಪಡೆಯಬಹುದು, ಉದ್ಯೋಗ ಮಾಡಬಹುದು. ಸಮಾಜದಲ್ಲಿ ಮಹಿಳೆಯರು ಪ್ರಮುಖ ಪಾತ್ರ ವಹಿಸುತ್ತಾರೆ. ಆದರೆ, ಎಲ್ಲವೂ ಇಸ್ಲಾಮಿಕ್ ಕಾನೂನು ವ್ಯಾಪ್ತಿಯಲ್ಲಿ ಮಾತ್ರ ಎಂದು ತಾಲಿಬಾನ್ ವಕ್ತಾರ ಹಬೀವುಲ್ಲಾ ಮುಜಾಯಿದ್ ಈಗಾಗಲೇ ಹೇಳಿದ್ದಾನೆ. ಇದರಿಂದಾಗಿ ಈ ಬಾರಿಯ ತಾಲಿಬಾನ್ ಆಳ್ವಿಕೆ ಹೇಗಿರುತ್ತೆ ಎನ್ನುವುದು ಸ್ಪಷ್ಟವಾಗಿ ಯಾರಿಗೂ ಗೊತ್ತಿಲ್ಲ. ಒಬ್ಬೊಬ್ಬ ತಾಲಿಬಾನ್ ನಾಯಕ ಒಂದೊಂದು ರೀತಿ ಹೇಳುತ್ತಿದ್ದಾನೆ. ಅಫ್ಘಾನಿಸ್ತಾನದಲ್ಲಿ ಈ ಬಾರಿ ತಾಲಿಬಾನಿಗಳು ಯಾವ ನಿಯಮ ಜಾರಿಗೊಳಿಸುತ್ತಾರೆ, ಅವರ ಆಳ್ವಿಕೆ ಹೇಗಿರುತ್ತೆ ಎನ್ನುವುದು ಮುಂದಿನ ದಿನಗಳಲ್ಲಿ ಸ್ಪಷ್ಟವಾಗಲಿದೆ.
(Afghanistan Leader Announces Administration According to Sharia here is details about Islamic law)
ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಕಟ್ಟರ್ ಷರಿಯಾ ಕಾನೂನು ಜಾರಿ ಸಾಧ್ಯತೆ, ಮನೆಯಿಂದ ಹೊರ ಬರಲು ಹೆದರುತ್ತಿರುವ ಮಹಿಳೆಯರು
ಇದನ್ನೂ ಓದಿ: ತಾಲಿಬಾನಿಗಳ ವಿರುದ್ಧ ಶಸ್ತ್ರ ಹಿಡಿದಿದ್ದ ಅಫ್ಘಾನಿಸ್ತಾನದ ಮಹಿಳಾ ಗವರ್ನರ್ ಬಂಧನ