ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ನ ಹಮೀದ್ ಕರ್ಜೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಗುರುವಾರ ರಾತ್ರಿ ಪ್ರಬಲ ಬಾಂಬ್ ಸ್ಫೋಟಿಸಿದೆ. ಬಾಂಬ್ ಸ್ಫೋಟ ನಡೆದ ಸ್ಥಳದಲ್ಲಿ ಅಫ್ಘಾನ್ ನಾಗರಿಕರ ಜೊತೆಗೆ ಅಮೆರಿಕ ನಾಗರಿಕರು ಮತ್ತು ಭದ್ರತಾ ಸಿಬ್ಬಂದಿ ಇದ್ದರು ಎನ್ನಲಾಗಿದೆ. ಸಾವುನೋವು ಹಾಗೂ ಗಾಯಾಳುಗಳ ವಿವರ ಇನ್ನಷ್ಟೇ ತಿಳಿದುಬರಬೇಕಿದೆ.
ಕಾಬೂಲ್ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟಿಸಿರುವುದನ್ನು ಅಮೆರಿಕ ರಾಜಧಾನಿ ವಾಷಿಂಗ್ಟನ್ನಲ್ಲಿ ಪೆಂಟಗನ್ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಅಮೆರಿಕದ ಸುದ್ದಿ ಮಾಧ್ಯಮ ಸಿಎನ್ಎನ್ ಪೆಂಟಗನ್ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಪ್ರಕಟಿಸಿದೆ. ಬಾಂಬ್ ಸ್ಫೋಟದಿಂದ ಗಾಯಗೊಂಡವರನ್ನು ಆಸ್ಪತ್ರೆಗಳಿಗೆ ಕರೆದೊಯ್ಯುತ್ತಿರುವ ಚಿತ್ರಗಳನ್ನು ಟ್ವಿಟರ್ನಲ್ಲಿಯೂ ಹಲವರು ಹಂಚಿಕೊಂಡಿದ್ದಾರೆ.
ವಿಮಾನ ನಿಲ್ದಾಣದ ಪ್ರವೇಶ ದ್ವಾರದ ಬಳಿ ಸ್ಫೋಟ ಸಂಭವಿಸಿದೆ. ಮೇಲ್ನೋಟಕ್ಕೆ ಇದು ಆತ್ಮಾಹುತಿ ಬಾಂಬ್ ಎನಿಸುತ್ತದೆ. ಅಫ್ಘಾನ್ ನಾಗರಿಕರು ವಿಮಾನ ನಿಲ್ದಾಣ ಪ್ರವೇಶಿಸಲು ಮುಗಿಬಿದ್ದು, ನೂಕುನುಗ್ಗಲು ಉಂಟಾದ ವೇಳೆಯಲ್ಲಿಯೆ ಬಾಂಬ್ ಸ್ಫೋಟಿಸಿದೆ. ಬಾಂಬ್ ಸ್ಫೋಟಿಸಿದ ಸಂದರ್ಭದಲ್ಲಿ ವಿಮಾನ ನಿಲ್ದಾಣ ಪ್ರವೇಶ ದ್ವಾರದ ಬಳಿ ಅಫ್ಘಾನಿಗಳು ದೊಡ್ಡಸಂಖ್ಯೆಯಲ್ಲಿದ್ದರು ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.
ಪೆಂಟಗನ್ ವಕ್ತಾರ ಜಾನ್ ಕರ್ಬಿ ಸಹ ಸ್ಫೋಟವನ್ನು ದೃಢಪಡಿಸಿದ್ದಾರೆ. ಹೆಚ್ಚಿನ ಮಾಹಿತಿ ಲಭ್ಯವಾದ ತಕ್ಷಣ ಹಂಚಿಕೊಳ್ಳುತ್ತೇವೆ ಎಂದು ಅವರು ಟ್ವೀಟ್ ಮಾಡಿದ್ದಾರೆ. ಈ ಕುರಿತು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರಿಗೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಾಬೂಲ್ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟಿಸಲಿದೆ ಎಂದು ಅಮೆರಿಕ ಅಧಿಕಾರಿಗಳು ಈ ಮೊದಲು ಎಚ್ಚರಿಸಿದ್ದರು. ಆತ್ಮಾಹುತಿ ಬಾಂಬ್ ದಾಳಿಯೇ ನಡೆಯಬಹುದು ಎಂದು ಖಚಿತವಾಗಿ ನುಡಿದಿದ್ದರು. ‘ಬಾಂಬ್ ಸ್ಫೋಟಿಸಲಿದೆ, ಅದನ್ನು ತಡೆಯುವ ಸ್ಥಿತಿಯಲ್ಲಿ ನಾವಿಲ್ಲ ಎಂಬುದು ನಮಗೆ ಗೊತ್ತಿತ್ತು’ ಎಂದು ಅಮೆರಿಕ ದೂತಾವಾಸದ ಅಧಿಕಾರಿ ರೋಸ್ ವಿಲ್ಸನ್ ಹೇಳಿದ್ದಾರೆ.
#Kabul explosion pic.twitter.com/mKpJe9HboA
— Hamid Haidari (@Hamidhaideri) August 26, 2021
(Blast reported near Hamid Karzai international airport in Kabul)
ಇದನ್ನೂ ಓದಿ: Afghanistan Crisis: ಅಮೆರಿಕ ಭದ್ರತಾ ಪಡೆಗಳು ಅಫ್ಘಾನಿಸ್ತಾನದಿಂದ ಹಿಂದಿರುಗಿದ ನಂತರ ಅಲ್ಲೇ ಉಳಿದವರ ಕಥೆಯೇನು?
Published On - 7:27 pm, Thu, 26 August 21