ತಾಲಿಬಾನ್ ಸಂಸ್ಥಾಪಕ ಮುಲ್ಲಾ ಓಮರ್ ಬಳಸಿದ್ದ ಕಾರನ್ನು ಮಣ್ಣಿನಡಿಯಿಂದ ಹೊರತೆಗೆದ ಅಧಿಕಾರಿಗಳು

| Updated By: ರಶ್ಮಿ ಕಲ್ಲಕಟ್ಟ

Updated on: Jul 07, 2022 | 2:59 PM

ಮುಲ್ಲಾ ಓಮರ್ ಈ ಟೊಯೊಟಾ ಕಾರು ಬಳಸಿಯೇ ಕಂದಾಹಾರ್​​ನಿಂದ ಹೊರ ಹೋಗಿದ್ದು ಎಂದು ತಾಲಿಬಾನ್ ಅಧಿಕಾರಿಗಳು ಹೇಳಿದ್ದಾರೆ. 2013ರಲ್ಲಿ ಅಡಗುತಾಣದಲ್ಲೇ ಮುಲ್ಲಾ ಓಮರ್ ಸಾವಿಗೀಡಾಗಿದ್ದು, ಹಲವು ವರ್ಷಗಳ ವರೆಗೆ ಆತನ ಸಾವಿನ ಸುದ್ದಿ ಮುಚ್ಚಿಡಲಾಗಿತ್ತು.

ತಾಲಿಬಾನ್ ಸಂಸ್ಥಾಪಕ ಮುಲ್ಲಾ ಓಮರ್ ಬಳಸಿದ್ದ ಕಾರನ್ನು ಮಣ್ಣಿನಡಿಯಿಂದ ಹೊರತೆಗೆದ ಅಧಿಕಾರಿಗಳು
ಹೂತಿಟ್ಟಿದ್ದ ಕಾರನ್ನು ಹೊರತೆಗೆಯುತ್ತಿರುವುದು
Follow us on

ಕಂದಾಹಾರ್: 9/11ರ ದಾಳಿ ನಂತರ ಅಮೆರಿಕ ಪಡೆಗಳಿಂದ ತಪ್ಪಿಸಲು ತಾಲಿಬಾನ್(Taliban) ಸಂಸ್ಥಾಪಕ ಮುಲ್ಲಾ ಓಮರ್ (Mullah Omar)  ಬಳಸಿದ್ದ ಕಾರನ್ನು ಹೂತಿಟ್ಟಿದ್ದು, ಎರಡು ದಶಕಗಳ ನಂತರ ಅದನ್ನು ಹೊರತೆಗೆಯಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅಫ್ಘಾನಿಸ್ತಾನದ (Afghanistan)ಜಬೂಲ್ ಪ್ರಾಂತ್ಯದಲ್ಲಿರುವ ಗ್ರಾಮವೊಂದರಲ್ಲಿ ಬಿಳಿ ಬಣ್ಣದ ಟೊಯೊಟಾ ಕೊರೊಲ್ಲ ಕಾರನ್ನು ಹೂತಿಡಲಾಗಿತ್ತು. ಅದನ್ನು ಹೊರತೆಗೆಯುವಂತೆ ಈ ವಾರ ಆದೇಶಿಸಲಾಗಿತ್ತು ಎಂದು ತಾಲಿಬಾನ್​​ನ ಅಧಿಕಾರಿ ಅಬ್ದುಲ್ ಜಬ್ಬಾರ್ ಒಮರಿ ಹೇಳಿದ್ದಾರೆ. ಕಾರಿನ ಮುಂಭಾಗಕ್ಕೆ ಸ್ವಲ್ಪ ಹಾನಿಯಾಗಿದ್ದು, ಅದು ಉತ್ತಮ ರೀತಿಯಲ್ಲಿದೆ ಎಂದು ಜಬುಲ್ ಪ್ರಾಂತ್ಯದ ಮಾಹಿತಿ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ರಹಮತುಲ್ಲಾ ಹಮ್ಮದ್ ಹೇಳಿರುವುದಾಗಿ ಎಎಫ್​​ಪಿ ವರದಿ ಮಾಡಿದೆ. ವಾಹನ ಕಳೆದುಹೋಗುವುದನ್ನು ತಪ್ಪಿಸಲು 2001ರಲ್ಲಿ ಓಮರ್ ನೆನಪಿಗೆ ಮುಜಾಹಿದ್ದೀನ್ ಈ ವಾಹನವನ್ನು ಹೂತಿಟ್ಟಿದೆ ಎಂದು ಅವರು ಹೇಳಿದ್ದಾರೆ. ವಾಹನವನ್ನು ಹೊರತೆಗೆಯುತ್ತಿರುವ ಫೋಟೊವನ್ನು ತಾಲಿಬಾನ್ ಮಾಧ್ಯಮಗಳು ಪ್ರಕಟಿಸಿವೆ. ಈ ಕಾರನ್ನು ರಾಜಧಾನಿಯಲ್ಲಿರುವ ಮ್ಯೂಸಿಯಂನಲ್ಲಿ ದೊಡ್ಡ ಐತಿಹಾಸಿಕ ಸ್ಮಾರಕ ಎಂದು ಪ್ರದರ್ಶನಕ್ಕಿರಿಸಲಾಗುವುದು ಎಂದು ಹಮ್ಮದ್ ಹೇಳಿದ್ದಾರೆ.

ರಕ್ತಸಿಕ್ತ ಅಂತರ್ಯುದ್ಧದ ನಂತರ 1996 ರಲ್ಲಿ ಕಠಿಣ ಇಸ್ಲಾಮಿಸ್ಟ್ ಚಳುವಳಿಯನ್ನು ಅಧಿಕಾರಕ್ಕೆ ತಂದ ಮುಲ್ಲಾ ಓಮರ್,  ಕಂದಹಾರ್‌ನಲ್ಲಿ ತಾಲಿಬಾನ್ ಸ್ಥಾಪಿಸಿ, ದೇಶದ ಮೇಲೆ ಇಸ್ಲಾಮಿಕ್ ಕಾನೂನಿನ ಕಟ್ಟುನಿಟ್ಟಾದ ಕಾನೂನು ಹೇರಿದರು. ಸೆಪ್ಟೆಂಬರ್ 11ರಂದು ನಡೆದ ದಾಳಿ ನಡೆಸಿದ ಒಸಾಮಾ ಬಿನ್ ಲಾಡೆನ್ ಮತ್ತು ಅಲ್ ಖೈದಾ ಸೇರಿದಂತೆ ಜಿಹಾದಿ ಗುಂಪುಗಳ ತಾಣವಾಗಿದೆ ಅಪ್ಘಾನಿಸ್ತಾನ.


ತಾಲಿಬಾನ್ ಬಿನ್ ಲಾಡೆನ್​​ನ್ನು ಹಸ್ತಾಂತರಿಸಲು ನಿರಾಕರಿಸಿದಾಗ ಅಮೆರಿಕ ಅಪ್ಘಾನಿಸ್ತಾನದ ಮೇಲೆ ದಾಳಿ ನಡೆಸಿ ತಾಲಿಬಾನ್​​ನ್ನು ಅಧಿಕಾರದಿಂದ ಕಿತ್ತೊಗೆದು ಹೊಸ ಸರ್ಕಾರವನ್ನು ಸ್ಥಾಪಿಸಿತ್ತು. ಮುಲ್ಲಾ ಓಮರ್ ಈ ಟೊಯೊಟಾ ಕಾರು ಬಳಸಿಯೇ ಕಂದಾಹಾರ್​​ನಿಂದ ಹೊರ ಹೋಗಿದ್ದು ಎಂದು ತಾಲಿಬಾನ್ ಅಧಿಕಾರಿಗಳು ಹೇಳಿದ್ದಾರೆ. 2013ರಲ್ಲಿ ಅಡಗುತಾಣದಲ್ಲೇ ಮುಲ್ಲಾ ಓಮರ್ ಸಾವಿಗೀಡಾಗಿದ್ದು, ಹಲವು ವರ್ಷಗಳ ವರೆಗೆ ಆತನ ಸಾವಿನ ಸುದ್ದಿ ಮುಚ್ಚಿಡಲಾಗಿತ್ತು.

ಎರಡು ದಶಕಗಳ ರಕ್ತಸಿಕ್ತ ದಂಗೆಯನ್ನು ತಡೆಹಿಡಿಯಲು ಪ್ರಯತ್ನಿಸಿದ ನಂತರ, ಅಮೆರಿಕ ಕಳೆದ ವರ್ಷ ತನ್ನ ಕೊನೆಯ ಸೈನ್ಯವನ್ನು ಹಿಂತೆಗೆದುಕೊಂಡಿತು. ತಾಲಿಬಾನ್ ದೇಶಾದ್ಯಂತ ವ್ಯಾಪಿಸಿ, ಕಾಬೂಲ್ ಅನ್ನು ವಶಪಡಿಸಿಕೊಂಡು ಅಧಿಕಾರಕ್ಕೆ ಮರಳಿತು.

Published On - 2:57 pm, Thu, 7 July 22