ತಾಲಿಬಾನ್, ಪಾಕಿಸ್ತಾನದ ನಡುವೆ ಭಿನ್ನಾಭಿಪ್ರಾಯ! ತಾಲಿಬಾನ್‌ ಕಮ್ಯಾಂಡರ್​ ಆಡಿಯೋ ವೈರಲ್

| Updated By: Digi Tech Desk

Updated on: Sep 13, 2021 | 9:55 AM

ಅಫ್ಘಾನಿಸ್ತಾನದ ಅಂತರಿಕ ವ್ಯವಹಾರಗಳಲ್ಲಿ ಪಾಕಿಸ್ತಾನ ಹಾಗೂ ಅದರ ಗುಪ್ತಚರ ಸಂಸ್ಥೆ ಐಎಸ್‌ಐ ಮೂಗು ತೂರಿಸುತ್ತಿರುವುದು ಈಗ ಗುಟ್ಟಾಗಿಯೇನೂ ಉಳಿದಿಲ್ಲ. ಅಫ್ಘನ್ ಅಂತರಿಕ ವ್ಯವಹಾರಗಳಲ್ಲಿ ಪಾಕ್ ಕೈ ಚಳಕ ಅಫ್ಘನ್ ಜನರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ತಾಲಿಬಾನ್, ಪಾಕಿಸ್ತಾನದ ನಡುವೆ ಭಿನ್ನಾಭಿಪ್ರಾಯ! ತಾಲಿಬಾನ್‌ ಕಮ್ಯಾಂಡರ್​ ಆಡಿಯೋ ವೈರಲ್
ತಾಲಿಬಾನಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದ ಅಫ್ಘಾನ್​ ಜನರು
Follow us on

ಅಫ್ಘಾನಿಸ್ತಾನದಲ್ಲಿ (Afghanistan) ಈಗ ಪಾಕಿಸ್ತಾನದ ನಿಯಂತ್ರಣದಲ್ಲಿರುವ ತಾಲಿಬಾನಿಗಳ (Taliban) ಸರ್ಕಾರ ಆಸ್ತಿತ್ವಕ್ಕೆ ಬಂದಿದೆ. ಆದರೆ ಒಳಗೊಳಗೆ ತಾಲಿಬಾನ್ ಸಂಘಟನೆ ಹಾಗೂ ಪಾಕಿಸ್ತಾನದ ನಡುವೆ ಭಿನ್ನಾಭಿಪ್ರಾಯಗಳೂ ಇವೆ. ಪಾಕಿಸ್ತಾನದ ಐಎಸ್ಐ ಮುಖ್ಯಸ್ಥ ಫೈಜ್ ಹಮೀದ್‌ (Faiz Hameed) ಕಾಬೂಲ್‌ಗೆ ಭೇಟಿ ನೀಡಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಪ್ರತಿಷ್ಠೆಯನ್ನು ಮಣ್ಣುಪಾಲು ಮಾಡಿತು ಎಂದು ತಾಲಿಬಾನ್ ನಾಯಕನೊಬ್ಬ ಹೇಳಿರುವುದರ ಆಡಿಯೋ ಈಗ ಫೇಸ್​ಬುಕ್​ನಲ್ಲಿ ವೈರಲ್ ಆಗಿದೆ. ಮತ್ತೊಂದೆಡೆ ಪಾಕಿಸ್ತಾನವು ಅಫ್ಘಾನಿಸ್ತಾನದ ರಹಸ್ಯ ದಾಖಲೆಗಳನ್ನು ವಿಮಾನದಲ್ಲಿ ಪಾಕಿಸ್ತಾನಕ್ಕೆ ಹೊತೊಯ್ದಿದೆ.

ಪಾಕ್‌ ಐಎಸ್‌ಐನಿಂದ ನಮ್ಮ ಪ್ರತಿಷ್ಠೆ ಹಾಳು ಎಂದ ತಾಲಿಬಾನ್‌
ಅಫ್ಘಾನಿಸ್ತಾನದ ಅಂತರಿಕ ವ್ಯವಹಾರಗಳಲ್ಲಿ ಪಾಕಿಸ್ತಾನ ಹಾಗೂ ಅದರ ಗುಪ್ತಚರ ಸಂಸ್ಥೆ ಐಎಸ್‌ಐ ಮೂಗು ತೂರಿಸುತ್ತಿರುವುದು ಈಗ ಗುಟ್ಟಾಗಿಯೇನೂ ಉಳಿದಿಲ್ಲ. ಅಫ್ಘನ್ ಅಂತರಿಕ ವ್ಯವಹಾರಗಳಲ್ಲಿ ಪಾಕ್ ಕೈ ಚಳಕ ಅಫ್ಘನ್ ಜನರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಅಫ್ಘನ್ ಜನರು ಬೀದಿಗಿಳಿದು ಪಾಕ್ ಹಾಗೂ ಐಎಸ್‌ಐ, ತಾಲಿಬಾನ್ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದ್ದಾರೆ. ಅಫ್ಘಾನಿಸ್ತಾನದ ಹೊಸ ಸರ್ಕಾರದಲ್ಲಿ ಹಕ್ಕಾನಿ ನೆಟ್ ವರ್ಕ್ ನಾಯಕರಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಗುವಂತೆ ಪಾಕಿಸ್ತಾನದ ಐಎಸ್ಐ ನೋಡಿಕೊಂಡಿದೆ. ಕತಾರ್‌ನ ದೋಹಾದಲ್ಲಿದ್ದ ನಾಯಕರ ಪೈಕಿ ಇಬ್ಬರಿಗೆ ಮಾತ್ರ ಹೊಸ ಸರ್ಕಾರದಲ್ಲಿ ಪ್ರಾಮುಖ್ಯತೆ ಸಿಕ್ಕಿದೆ. ಹಕ್ಕಾನಿ ನೆಟ್ ವರ್ಕ್ ನಾಯಕರ ಮೂಲಕ ಅಫ್ಘಾನಿಸ್ತಾನದ ಹೊಸ ಸರ್ಕಾರವನ್ನು ನಿಯಂತ್ರಿಸುವುದು ಪಾಕಿಸ್ತಾನದ ಪ್ಲ್ಯಾನ್ ಆಗಿದೆ. ಈಗ ಅಫ್ಘನ್​ನಲ್ಲಿರುವುದು ಮೇಡ್ ಇನ್ ಪಾಕಿಸ್ತಾನದ ಸರ್ಕಾರ. ಅಫ್ಘನ್ ತಾಲಿಬಾನ್ ಸರ್ಕಾರದ ಕೀಲೀ ಕೂಡ ಪಾಕಿಸ್ತಾನದ ಬಳಿಯೇ ಇದೆ. ಪಾಕಿಸ್ತಾನದ ತಾಳಕ್ಕೆ ತಕ್ಕಂತೆ ಕುಣಿಯುವ ತಾಲಿಬಾನಿಗಳ ಸರ್ಕಾರ ಆಸ್ತಿತ್ವಕ್ಕೆ ಬಂದಿದೆ.

ಆದರೆ, ತಾಲಿಬಾನಿಗಳಿಗೂ ಒಳಗೊಳಗೆ ಪಾಕಿಸ್ತಾನದ ಐಎಸ್ಐ ವಿರುದ್ಧ ಅಸಮಾಧಾನ ಇದೆ. ತಾಲಿಬಾನ್ ಕಮ್ಯಾಂಡರ್ ಒಬ್ಬ, ಮತ್ತೊಬ್ಬ ಕಮ್ಯಾಂಡರ್ ಜೊತೆಗೆ ಫೋನ್​ನಲ್ಲಿ ಮಾತನಾಡಿರುವ ಆಡಿಯೋದಿಂದ ಬಹಿರಂಗವಾಗಿದೆ. ತಾಲಿಬಾನ್‌ನ ಇಬ್ಬರ ಕಮ್ಯಾಂಡರ್​ಗಳ ಆಡಿಯೋ ಫೇಸ್​ಬುಕ್​ನಲ್ಲಿ ಲೀಕ್ ಆಗಿದೆ. ಆಡಿಯೋದಲ್ಲಿ ತಾಲಿಬಾನ್‌ನ ಓರ್ವ ಕಮ್ಯಾಂಡರ್‌, ಮತ್ತೊಬ್ಬ ಕಮ್ಯಾಂಡರ್‌ಗೆ ಪಾಕಿಸ್ತಾನದ ಐಎಸ್ಐ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಪ್ರತಿಷ್ಠೆಯನ್ನು ಹಾಳು ಮಾಡಿತು ಎಂದು ಹೇಳಿದ್ದಾನೆ. ಐಎಸ್ಐ ಮುಖ್ಯಸ್ಥ ಫೈಜ್ ಹಮೀದ್ ಕಾಬೂಲ್‌ಗೆ ಭೇಟಿ ನೀಡಿ ಸರ್ಕಾರ ರಚನೆಯಲ್ಲಿ ಹಸ್ತಕ್ಷೇಪ ನಡೆಸಿದ್ದರಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಾಲಿಬಾನ್‌ ವರ್ಚಸ್ಸು, ಪ್ರತಿಷ್ಠೆಯನ್ನು ಮಣ್ಣುಪಾಲು ಆಯಿತು ಎಂದು ತಾಲಿಬಾನ್ ಕಮ್ಯಾಂಡರ್ ಮತ್ತೊಬ್ಬ ಕಮ್ಯಾಂಡರ್​ಗೆ ಹೇಳಿದ್ದಾನೆ. ಐಎಸ್ಐ ಮುಖ್ಯಸ್ಥ ಫೈಜ್ ಹಮೀದ್‌, ತಾಲಿಬಾನ್‌ಗೆ ದೊಡ್ಡ ಸಮಸ್ಯೆ ಸೃಷ್ಟಿಸಿದ್ದಾನೆ ಎಂದು ತಾಲಿಬಾನ್ ಕಮ್ಯಾಂಡರ್‌ ಹೇಳಿದ್ದಾನೆ.

ತಾಲಿಬಾನ್ ಸಂಘಟನೆಯು ಪ್ರಾರಂಭದಲ್ಲಿ ಅಫ್ಘಾನಿಸ್ತಾನದ ಎಲ್ಲ ವರ್ಗ, ಜನಾಂಗಗಳನ್ನು ಸೇರ್ಪಡೆ ಮಾಡಿಕೊಂಡು ಎಲ್ಲರನ್ನೂ ಒಳಗೊಳ್ಳುವ ಸರ್ಕಾರ ರಚಿಸುವುದಾಗಿ ಹೇಳಿತ್ತು. ಅಫ್ಘನ್​ನ ತಜಕಿ, ಉಜಬೇಕ್‌, ಹಾಗೂ ಅಲ್ಪಸಂಖ್ಯಾತ ಸಮುದಾಯದ ಹಜಾರಾ ಸಮುದಾಯಯ ನಾಯಕರನ್ನು ಸರ್ಕಾರಕ್ಕೆ ಸೇರ್ಪಡೆ ಮಾಡಿಕೊಳ್ಳುವುದಾಗಿ ಹೇಳಿತ್ತು. ಜೊತೆಗೆ ಅಫ್ಘಾನಿಸ್ತಾನದ ರಾಜಕೀಯ ಪಕ್ಷದ ನಾಯಕರನ್ನು ಸೇರ್ಪಡೆ ಮಾಡಿಕೊಂಡು ಅಂತಾರಾಷ್ಟ್ರೀಯ ಸಮುದಾಯದ ಮನ್ನಣೆ ಪಡೆಯುವ ಬಗ್ಗೆ ಯೋಚನೆ ಮಾಡಿತ್ತು. ಜೊತೆಗೆ ಉದಾರವಾದಿಗಳನ್ನು ಸೇರ್ಪಡೆ ಮಾಡಿಕೊಂಡು ಉದಾರವಾದಿ ಆಳ್ವಿಕೆ ನೀಡುವ ಯೋಚನೆ ಇತ್ತು. ಆದರೆ, ಕಳೆದ ಶನಿವಾರ ಐಎಸ್ಐ ಮುಖ್ಯಸ್ಥ ಫೈಜ್ ಹಮೀದ್‌ ಕಾಬೂಲ್‌ಗೆ ಭೇಟಿ ನೀಡಿದ ಬಳಿಕ ತಾಲಿಬಾನಿಗಳ ಹೊಸ ಸರ್ಕಾರದ ಸ್ವರೂಪವೇ ಬದಲಾಗಿ ಹೋಯಿತು. ಐಎಸ್ಐ ಮುಖ್ಯಸ್ಥ ಫೈಜ್ ಹಮೀದ್‌, ಬರೀ ಹಕ್ಕಾನಿ ನೆಟ್ ವರ್ಕ್ ಹಾಗೂ ಕ್ವೆಟ್ಟಾ ಶುರಾದ ನಾಯಕರನ್ನು ಮಾತ್ರ ಕ್ಯಾಬಿನೆಟ್‌ಗೆ ಸೇರ್ಪಡೆ ಮಾಡಿಕೊಳ್ಳುವಂತೆ ಮಾಡಿತು.

ಐಎಸ್ಐ ಮುಖ್ಯಸ್ಥ ಫೈಜ್ ಹಮೀದ್ ಕಾಬೂಲ್‌ನ ಪ್ರೆಸಿಡೆನ್ಸಿಯಲ್ ಪ್ಯಾಲೇಸ್‌ಗೆ ಭೇಟಿ ನೀಡಿದಾಗ, ತಾಲಿಬಾನ್ ಉಗ್ರರು ಹಾಗೂ ಐಎಸ್ಐ ಮುಖ್ಯಸ್ಥನ ಬಾಡಿಗಾರ್ಡ್​ಗಳ ನಡುವೆ ಫೈರಿಂಗ್ ಕೂಡ ನಡೆದಿದೆ ಎಂದು ಇಬ್ಬರು ತಾಲಿಬಾನ್ ಕಮ್ಯಾಂಡರ್​ಗಳು ಮಾತನಾಡಿರುವುದು ಆಡಿಯೋದಲ್ಲಿದೆ. ಇದರಿಂದಾಗಿ ತಾಲಿಬಾನ್ ನಾಯಕರು ಹಾಗೂ ಐಎಸ್ಐ ಮುಖ್ಯಸ್ಥನ ನಡುವೆ ಕಿತ್ತಾಟವೂ ನಡೆದಿರುವುದು ಈಗ ತಾಲಿಬಾನ್ ಕಮ್ಯಾಂಡರ್‌ಗಳ ಪೋನ್ ಸಂಭಾಷಣೆಯಿಂದಲೇ ಸ್ಪಷ್ಟವಾಗಿದೆ.

ದೋಹಾದ ತಾಲಿಬಾನ್ ನಾಯಕರು ಉದಾರವಾದಿ ನಾಯಕರನ್ನು ಕ್ಯಾಬಿನೆಟ್‌ಗೆ ಸೇರ್ಪಡೆ ಮಾಡಿಕೊಳ್ಳಬೇಕು. ಕಟ್ಟಾ ಉಗ್ರರನ್ನು ರಾಜ್ಯಗಳ ಗರ್ವನರ್ಗಳಾಗಿ ನೇಮಿಸಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ತಾಲಿಬಾನ್ ಸರ್ಕಾರಕ್ಕೆ ಮಾನ್ಯತೆ ಪಡೆಯಬೇಕೆಂದು ಪ್ಲ್ಯಾನ್ ಮಾಡಿದ್ದರು. ಮಾಜಿ ಅಧ್ಯಕ್ಷ ಹಮೀದ್ ಕರ್ಜೈ, ಶಾಂತಿ ಸಂಧಾನಗಳ ಸಮಿತಿಯ ಮುಖ್ಯಸ್ಥ ಡಾಕ್ಟರ್ ಅಬ್ದುಲ್ಲಾರನ್ನು ಸರ್ಕಾರಕ್ಕೆ ಸೇರ್ಪಡೆ ಮಾಡಿಕೊಳ್ಳುವ ಯೋಚನೆ ಇತ್ತು. ಆದರೆ, ಐಎಸ್ಐ ಮುಖ್ಯಸ್ಥ ಹಕ್ಕಾನಿ ನೆಟ್ ವರ್ಕ್‌ ಸಿರಾಜುದ್ದೀನ್ ಹಕ್ಕಾನಿ ಹಾಗೂ ಯಾಕೂಬ್ ಓಮರ್ ನೆರವಿನಿಂದ ಅಫ್ಘನ್ ಸರ್ಕಾರದ ಗೇಮ್ ಅನ್ನೇ ಬದಲಾಯಿಸಿದ.

ಅಫ್ಘನ್​ನಿಂದ ರಹಸ್ಯ ದಾಖಲೆ ಹೊತ್ತೊಯ್ದ ಪಾಕಿಸ್ತಾನ
ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತವನ್ನು ನಿಯಂತ್ರಿಸಲು ಪಾಕಿಸ್ತಾನವು ಅಫ್ಘಾನಿಸ್ತಾನಕ್ಕೆ ಹಣಕಾಸಿನ ನೆರವು ಘೋಷಿಸಿದೆ. ಚೀನಾ ಕೂಡ 300 ಮಿಲಿಯನ್ ಡಾಲರ್ ಆರ್ಥಿಕ ನೆರವನ್ನು ಘೋಷಿಸಿದೆ. ಆದರೆ, ಈಗ ಪಾಕಿಸ್ತಾನವು ಅಫ್ಘಾನಿಸ್ತಾನದಿಂದ ಬಹಳಷ್ಟು ಮಹತ್ವದ ರಹಸ್ಯ ದಾಖಲೆಗಳನ್ನು ಮೂರು ವಿಮಾನಗಳಲ್ಲಿ ಕಾಬೂಲ್ ನಿಂದ ಪಾಕಿಸ್ತಾನಕ್ಕೆ ತೆಗೆದುಕೊಂಡು ಹೋಗಿದೆ. ಕಳೆದ ಗುರುವಾರ ಪಾಕಿಸ್ತಾನದ ಸಿ-130ಜೆ ವಿಮಾನಗಳು ಮಾನವೀಯ ನೆರವನ್ನು ಹೊತ್ತು ಕಾಬೂಲ್‌ಗೆ ಬಂದಿದ್ದವು. ಈ ವಿಮಾನಗಳು ವಾಪಸ್ ಪಾಕಿಸ್ತಾನಕ್ಕೆ ಹೋಗುವಾಗ ಅಫ್ಘಾನಿಸ್ತಾನದಿಂದ ರಹಸ್ಯ ದಾಖಲೆಗಳನ್ನು ತೆಗೆದುಕೊಂಡು ಹೋಗಲಾಗಿದೆ.

ಹಾರ್ಡ್ ಡಿಸ್ಕ್ ಮತ್ತು ಇತರೆ ಡಿಜಿಟಲ್ ದಾಖಲೆಗಳನ್ನು ಕಾಬೂಲ್​ನಿಂದ ಪಾಕಿಸ್ತಾನಕ್ಕೆ ಐಎಸ್ಐ ತೆಗೆದುಕೊಂಡು ಹೋಗಿದೆ. ಈ ದಾಖಲೆಗಳನ್ನು ಐಎಸ್ಐ ತನ್ನ ಸ್ವಂತ ಬಳಕೆಗೆ ಬಳಸಿಕೊಳ್ಳಬಹುದು. ಇದು ಬೇರೆ ದೇಶ, ಅಫ್ಘಾನಿಸ್ತಾನದ ಭದ್ರತೆಗೂ ಧಕ್ಕೆ ತರಬಹುದು. ಈ ದಾಖಲೆಗಳಿಂದ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರವು ಪಾಕಿಸ್ತಾನದ ಮೇಲೆ ಅವಲಂಬಿತ ಆಗುವಂತೆ ಮಾಡಲಿದೆ ಎಂದು ಅಫ್ಘನ್ನ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರರ ಆಪ್ತ ಮೂಲಗಳು ಹೇಳಿವೆ.

ಅಫ್ಘಾನಿಸ್ತಾನಲಿದ್ದ ಈ ಸಾಕಷ್ಟು ಮಹತ್ವದ ದಾಖಲೆಗಳನ್ನು ಆಶ್ರಫ್ ಘನಿ ಸರ್ಕಾರ ನಾಶಪಡಿಸಿರಲಿಲ್ಲ. ಆಶ್ರಫ್ ಘನಿ ಸರ್ಕಾರಕ್ಕೆ ಧಿಡಿರನೇ ತಾಲಿಬಾನ್ ಉಗ್ರರು ಕಾಬೂಲ್‌ಗೆ ಬಂದು ಆಕ್ರಮಿಸಿಕೊಳ್ಳುವ ನಿರೀಕ್ಷೆ ಇರಲಿಲ್ಲ. ತಾಲಿಬಾನ್ ಉಗ್ರರು ಕಾಬೂಲ್‌ ವಶಪಡಿಸಿಕೊಂಡ ಬಳಿಕ ರಾಷ್ಟ್ರೀಯ ಭದ್ರತೆ ಮಹತ್ವದ ದಾಖಲೆ ನಾಶಪಡಿಸಲು ಯಾವುದೇ ಸಿಬ್ಬಂದಿ ಕಚೇರಿಗೆ ಹೋಗಿಲ್ಲ. ಹೀಗಾಗಿ ಈ ದಾಖಲೆಗಳೆಲ್ಲಾ ಈಗ ಪಾಕಿಸ್ತಾನದ ಐಎಸ್ಐ ಪಾಲಾಗಿವೆ. ಅಫ್ಘಾನಿಸ್ತಾನದ ಪಾಕಿಸ್ತಾನ ರಾಯಭಾರಿ ಮನ್ಸೂರ್ ಅಹಮದ್ ಈ ರಹಸ್ಯ ದಾಖಲೆಗಳು ಪಾಕಿಸ್ತಾನಕ್ಕೆ ಹೋಗಲು ಎಲ್ಲ ಸಮನ್ವಯತೆಯ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ

ಇಂದು ಅಫ್ಘಾನಿಸ್ತಾನದಲ್ಲಿ ನಡೆಯಬೇಕಿದ್ದ ತಾಲಿಬಾನ್ ಸರ್ಕಾರ ಉದ್ಘಾಟನೆ ಕ್ಯಾನ್ಸಲ್​​​; ​ ಕಾಬೂಲ್ ಏರ್​ಪೋರ್ಟ್ ಹೆಸರು ಬದಲಾವಣೆ

ಅಫ್ಘಾನಿಸ್ತಾನದ ಮಾಜಿ ಉಪಾಧ್ಯಕ್ಷ ಅಮ್ರುಲ್ಲಾಹ್ ಸಾಲೆಹ್ ಸೋದರನನ್ನು ಕೊಂದು ಹಾಕಿದ ತಾಲಿಬಾನಿಗಳು

(disagreement between the Taliban and Pakistan)

Published On - 3:23 pm, Sat, 11 September 21