ಅಫ್ಘಾನಿಸ್ತಾನದಲ್ಲಿ ಅದೊಂದು ಪ್ರಾಂತ್ಯ ಮಾತ್ರ ಇನ್ನೂ ತಾಲಿಬಾನಿಗಳ ನಿಯಂತ್ರಣಕ್ಕೆ ಬಂದಿಲ್ಲ. ಅದುವೇ ಪಂಜಶೀರ್ ಪ್ರಾಂತ್ಯ. ಪಂಜಶೀರ್ ಪ್ರಾಂತ್ಯ ಮತ್ತು ತಾಲಿಬಾನಿಗಳ ನಡುವಿನ ಘರ್ಷಣೆಗೆ ಜನಾಂಗೀಯ ಕಾರಣವೂ ಇದೆಯೇ? ಪಂಜಶೀರ್ ಪ್ರಾಂತ್ಯದ ಶಕ್ತಿ, ಅನುಕೂಲತೆ ಹಾಗೂ ದೌರ್ಬಲ್ಯಗಳೇನು? ಎನ್ನುವುದನ್ನು ನಾವು ವಿವರಿಸುತ್ತೇವೆ.
ಮುಗಿಲೆತ್ತರದ ಬೆಟ್ಟಗಳು.. ಕಣ್ಣು ಹಾಯಿಸಿದಷ್ಟು ಹಸಿರ ವೈಭವ.. ದಟ್ಟ ಕಾನನದ ನಡುವೆ ಹಾಲಿನ ನೊರೆಯಂತೆ ಹರಿಯೋ ನದಿ.. ಈ ಸುಂದರ ಸೊಬಗನ್ನ ಮೈದುಂಬಿಕೊಂಡಿರೋ ಈ ಪ್ರದೇಶವೇ ಪಂಜ್‌ಶೀರ್. ಹೌದು. ವಿಶ್ವದಾದ್ಯಂತ ಚರ್ಚೆಗೆ ಗ್ರಾಸವಾಗಿರೋ, ಇಡೀ ವಿಶ್ವವೇ ತಿರುಗಿ ನೋಡ್ತಿರೋ ಪಂಜ್‌ಶೀರ್ ಪ್ರಾಕೃತಿಕ ಸೊಬಗಿನ ರಾಜನಂತಿದೆ. ಆದ್ರೆ, ಪಂಜ್‌ಶೀರ್ ಈಗ ಸುದ್ದಿಯಲ್ಲಿರೋದು ಪ್ರಕೃತಿಯ ವಿಚಾರಕ್ಕಲ್ಲ. ಬದಲಾಗಿ ಅಲ್ಲಿ ನಡಿತ್ತಿರೋ ನಾಗರಿಕ ಯುದ್ಧದ ವಿಷಯದಿಂದ..
ಇಡೀ ಅಫ್ಘಾನಿಸ್ತಾನವೇ ತಾಲಿಬಾನಿ ಉಗ್ರರ ಕೂಪದಲ್ಲಿ ನಲುಗಿ ಅಕ್ಷರಶಃ ಸ್ಮಶಾನವಾಗಿದೆ. ದಿನೇ ದಿನೇ ಬಿಗಾಡಾಯಿಸ್ತಿರೋ ಕಠೋರ ಪರಿಸ್ಥಿತಿಯಿಂದ ನರಕ ನರ್ತನವಾಡುತ್ತಿದೆ. ಅನ್ನ ನೀರಿಲ್ಲದೇ ಜನ ಬೀದಿ ಬೀದಿಯಲ್ಲಿ ನರಳುತ್ತಿದ್ದಾರೆ. ದೇಶಬಿಟ್ಟು ಹೋಗಲು ಹಪಹಪಿಸ್ತಿದ್ದಾರೆ. ಪರಿಸ್ಥಿತಿ ಈ ರೀತಿ ಇರುವಾಗ ಪಂಜ್‌ಶೀರ್ ಪ್ರಾಂತ್ಯದ ಜನ ತಾಲಿಬಾನಿಗಳ ಗುಂಡಿಗೆ ಎದೆ ಕೊಟ್ಟು ನಿಂತಿದ್ದಾರೆ.
ತಾಲಿಬಾನ್ ವಿರುದ್ಧ ಸಿಡಿದೆದ್ದ ‘ಪಂಜ್‌ಶೀರ್’ ಸಿಂಹಗಳು..!
ಯೆಸ್.. ಪಂಜ್‌ಶೀರ್ ನದಿಯ ತಟದಲ್ಲಿ ಸಿಂಹಗಳು ಘರ್ಜಿಸ್ತಿವೆ. ಹೆದರಿ ಓಡಿದ ಅದೆಷ್ಟೋ ಜನರ ಮಧ್ಯೆ ಸಿಡಿದೆದ್ದು ನಿಂತಿವೆ. ಅಮೆರಿಕ ಸೇನೆ ಆಫ್ಘನ್‌ನಿಂದ ಅದ್ಯಾವಾಗ ವಾಪಸ್ ಆಗಲು ಪ್ರಾರಂಭಿಸ್ತೋ, ಅವತ್ತಿನಿಂದಲೇ ತಾಲಿಬಾನಿಗಳ ಆಕ್ರಮಣ ಆರಂಭವಾಗಿತ್ತು. ಇಡೀ ಅಫ್ಘಾನಿಸ್ತಾನವನ್ನೇ ತೆಕ್ಕೆಗೆ ಹಾಕಿಕೊಂಡ್ರೂ, ತಾಲಿಬಾನಿಗಳಿಂದ ಪಂಜ್‌ಶೀರ್ ಪ್ರಾಂತ್ಯವನ್ನ ಟಚ್ ಕೂಡಾ ಮಾಡೋಕೆ ಆಗಿಲ್ಲ. ಯಾಕೆಂದ್ರೆ ಅಲ್ಲಿ ಎದ್ದಿರೋದು ಅಕ್ಷರಶಃ ಜನರ ದಂಗೆ..
ಪಂಜ್ ಶೀರ್ ಪ್ರಾಂತ್ಯವನ್ನ ತಾಲಿಬಾನಿಗಳು ಏಕೆ ವಶ ಪಡಿಸಿಕೊಳ್ಳೋಕೆ ಆಗ್ತಿಲ್ಲ. ಅಲ್ಲಿರೋ ಬಲವೇನು..! ಅನ್ನೋದನ್ನ ಹೇಳ್ತೀವಿ ಅದಕ್ಕೂ ಮುನ್ನ, ಪಂಜ್‌ಶೀರ್‌ನ ಪವರ್ ಏನು ಅನ್ನೋದನ್ನ ಹೇಳ್ತೀವಿ ನೋಡಿ.. ಅಂದಹಾಗೆ ಪಂಜ್‌ಶೀರ್ ಪ್ರಾಂತ್ಯದ ಇತಿಹಾಸ ಕೆದಕಿದ್ರೆ ಯುದ್ಧದ ಹಾದಿ ತೆರೆದುಕೊಳ್ಳುತ್ತೆ. ಸದ್ಯ ತಾಲಿಬಾನಿಗಳ ವಿರುದ್ಧ ಇದೇ ಪ್ರಾಂತ್ಯದ ಅಮ್ರುಲ್ಲಾ ಸಲೇ ಮತ್ತು ಅಹ್ಮದ್ ಮಸೂದ್ ಸಿಡಿದೆದ್ದಿದ್ದಾರೆ.
ಇವರ ಹಿಂದೆ 7 ಜಿಲ್ಲೆ, 512 ಹಳ್ಳಿಗಳ 1 ಲಕ್ಷದ 70 ಸಾವಿರ ಜನ ಬೆನ್ನಿಗೆ ನಿಂತಿದ್ದಾರೆ. ಒಂದಲ್ಲ ಎರಡಲ್ಲ.. ಬರೋಬ್ಬರಿ 20 ವರ್ಷ ಆಫ್ಘನ್ ನೆಲದಲ್ಲಿದ್ದ ಅಮೆರಿಕ ಸೇನೆಯೇ ತಾಲಿಬಾನಿಗಳನ್ನ ಅಲುಗಾಡಿಸಲು ಆಗಲಿಲ್ಲ. ಆದ್ರೆ, ಜಸ್ಟ್ ಕಾಬೂಲ್‌ನಿಂದ 125 ಕಿಲೋ ಮೀಟರ್ ದೂರದಲ್ಲಿರೋ ಪಂಜ್‌ಶೀರ್ ಪ್ರಾಂತ್ಯದ ಜನ ತಾಲಿಬಾನಿಗಳ ಲೆಕ್ಕಾಚಾರವನ್ನೇ ತಲೆಕೆಳಗಾಗುವಂತೆ ಮಾಡಿದ್ದಾರೆ.
ಯೆಸ್.. ತಾಲಿಬಾನಿಗಳ ಲೆಕ್ಕ ತಲೆಕೆಳಗಾಗಿದೆ. ಸಿಡಿದಿದ್ದೆರೋ ಪಂಜ್‌ಶೀರ್ ಪ್ರಾಂತ್ಯದ ಜನರ ಮುಂದೆ ತಾಲಿಬಾನಿಗಳು ಮಕಾಡೆ ಮಲಗುವಂತಾಗಿದೆ. ಪಂಜ್‌ಶೀರ್ ಸಿಂಹಗಳ ಹೋರಾಟ ಹೇಗಿದೆ ಅಂದ್ರೆ, ಪ್ರಾಂತ್ಯದ ಎಲ್ಲ ಗಡಿಯಲ್ಲೂ ತಾಲಿಬಾನಿ ವಿರೋಧಿ ಪಡೆ ಕಟ್ಟಿಕೊಂಡು ಕಾಯುತ್ತಿದ್ದಾರೆ. ಗನ್ ಹಿಡಿದು ಪ್ರಾಂತ್ಯ ಕಾಯುತ್ತಿರೋ ಹೋರಾಟಗಾರರು, ಗಡಿಯಲ್ಲಿ ಚೆಕ್‌ಪೋಸ್ಟ್ ನಿರ್ಮಿಸಿ ಪಹರೆ ಹಾಕುತ್ತಿದ್ದಾರೆ. ಬುಡಕಟ್ಟು ಜನರಿರೋ ಇಲ್ಲಿ, ಒಂದೊಂದು ಸಮುದಾಯ ಒಂದೊಂದು ಸಂಸ್ಕೃತಿ ಹೊಂದಿದೆ.
ಹೀಗಾಗಿ ತಾಲಿಬಾನ್ ಸಂಸ್ಕೃತಿಯನ್ನ ಇಲ್ಲಿನ ಜನ ಒಪ್ಪಿಕೊಳ್ಳಲು ಸಿದ್ದರಿಲ್ಲ. ಹೀಗಾಗಿಯೇ ಈ ಪ್ರಾಂತ್ಯದ ಜನರ ಹೋರಾಟಕ್ಕೆ ಆಫ್ಘನ್ ಉಪಾಧ್ಯಕ್ಷನಾಗಿದ್ದ ಅಮ್ರುಲ್ಲಾ ಸಲೇಹಾ ಮತ್ತು ಉತ್ತರ ಮೈತ್ರಿ ಸೇನೆಯ ಅಹ್ಮದ್ ಮಸೂದ್ ಮುನ್ನುಡಿ ಬರೆದಿದ್ದಾರೆ. ಇಷ್ಟೇ ಅಲ್ಲ, ಅಫ್ಘನ್ ಸೇನೆಯಿಂದಲೂ ಪಂಜ್‌ಶೀರ್ ಜನರಿಗೆ ಸಪೋರ್ಟ್ ಸಿಕ್ಕಿದ್ದು, ನೆರೆ ರಾಷ್ಟ್ರ ತಜಕಿಸ್ತಾನವೂ ಪಂಜ್‌ಶೀರ್ ಹೋರಾಟಕ್ಕೆ ಬೆಂಬಲ ಕೊಟ್ಟಿದೆ. ಇಷ್ಟೊಂದು ಹೋರಾಟದ ಕಿಚ್ಚು ಇರಬೇಕು ಅಂದ್ರೆ, ಅದಕ್ಕೊಂದು ಹಿನ್ನಲೆ ಇರಲೇಬೇಕು. ಹೌದು. ಪಂಜ್‌ಶೀರ್ ಜನರ ಹೋರಾಟದ ಕಿಚ್ಚನ್ನ ಕೆದಕಿದ್ರೆ, ಅಲ್ಲೋದು ರೋಚಕ ಇತಿಹಾಸ ಬಿಚ್ಚಿಕೊಳ್ಳುತ್ತೆ.
ಹೌದು.. ತಾಲಿಬಾನಿಗಳಿರಲಿ, ವಿದೇಶಿಗರೇ ಬರಲಿ, ಪಂಜ್‌ಶೀರ್ ಪತರಗುಟ್ಟಿಲ್ಲ. ಸೋವಿಯತ್ ರಷ್ಯಾ ದಾಳಿಗೂ ತಲೆಬಾಗಿಲ್ಲ. 1989ರಲ್ಲಿ ಸೋವಿಯತ್ ಒಕ್ಕೂಟ ದಾಳಿ ನಡೆಸಿ ಆಫ್ಘನ್ ವಶಕ್ಕೆ ಪಡೆದಿತ್ತು. ಆಗಲೂ ಪಂಜ್ ಶೀರ್ ಪ್ರಾಂತ್ಯವನ್ನ ಆಕ್ರಮಣ ಮಾಡಲು ಆಗಿರಲಿಲ್ಲ. ಯಾಕೆಂದ್ರೆ ಪ್ರಾಂತ್ಯದಲ್ಲಿ ಸಿಂಹದಂತೆ ಹೋರಾಡ್ತಿದ್ದ ಮೊಹ್ಮದ್ ಶಾ ಮಸೂದ್, ವಿದೇಶಿಗರ ದಾಳಿಗೆ ಪಂಜ್‌ಶೀರ್ ಬಲಿಯಾಗದಂತೆ ನೋಡಿಕೊಂಡಿದ್ದ. ಮಿಲಿಟರಿ ಕಮಾಂಡರ್ ಆಗಿ, ರಾಜಕಾರಣಿಯಾಗಿದ್ದ ಮೊಹ್ಮದ್ ಶಾ ಮಸೂದ್, ತಾಲಿಬಾನಿಗಳಿಗೂ ಎದೆ ಕೊಟ್ಟು ನಿಂತಿದ್ದ. ಹೀಗಾಗಿಯೇ ಪ್ರಾಂತ್ಯದಲ್ಲಿ ಈತನನ್ನ ಸಿಂಹ ಅಂತಾನೇ ಕರಿತಿದ್ರು. ಮೊಹ್ಮದ್ ಶಾ ಮಸೂದ್ ಹಾಕಿಕೊಟ್ಟ ಅಡಿಪಾಯವೇ ಇವತ್ತಿನ ಹೋರಾಟಕ್ಕೂ ಶಕ್ತಿ ತಂದಿದೆ ಅಂದ್ರೆ ಅತಿಶಯೋಕ್ತಿಯಲ್ಲ.
ರಕ್ತಗತವಾಗಿ ಬಂದಿರೋ ಪಂಜ್‌ಶೀರ್ ಜನರ ಹೋರಾಟದ ಕಿಚ್ಚು, ಇವತ್ತು ತಾಲಿಬಾನಿಗಳ ಗುಂಡಿಗೆ ಸೆಡ್ಡು ಹೊಡೆದು ನಿಲ್ಲುವಂತೆ ಮಾಡಿದೆ. ಹೀಗಾಗಿಯೇ ತಮ್ಮ ಪ್ರಾಂತ್ಯದ ರಕ್ಷಣೆಗಾಗಿ ಪಂಜ್‌ಶೀರ್‌ನ ಮಕ್ಕಳು, ಮಹಿಳೆಯರು ಕೂಡ ಕೈಗೆ ಗನ್ ಎತ್ತಿಕೊಂಡಿದ್ದಾರೆ. ಸ್ವಾಭಿಮಾನಕ್ಕಾಗಿ, ತಮ್ಮ ಪ್ರಾಂತ್ಯದ ಉಳಿವಿಗಾಗಿ ಪ್ರಾಣದ ಹಂಗು ತೊರೆದು ತಾಲಿಬಾನಿಗಳ ವಿರುದ್ಧ ಹೋರಾಟಕ್ಕಿಳಿದಿದ್ದಾರೆ.
ಪಂಜ್ ಶಿರ್ ಪ್ರಾಂತ್ಯದ ಶಕ್ತಿ, ಅನುಕೂಲತೆಗಳು ಏನೇನು ಇವೆ?
1-ಪಂಜಶಿರ್ ಪ್ರಾಂತ್ಯ ಬೆಟ್ಟಗುಡ್ಡಗಳಿಂದ ಆವೃತ್ತವಾಗಿದೆ. ಪಂಜಶಿರ್ ಪ್ರಾಂತ್ಯಕ್ಕೆ ನದಿ ಹರಿಯುವ ಪ್ರದೇಶದಲ್ಲಿ ಮಾತ್ರ ಕಿರಿದಾದ ರಸ್ತೆಯ ಮೂಲಕ ಪ್ರವೇಶಕ್ಕೆ ಅವಕಾಶ ಇದೆ. ಈ ಎಂಟ್ರಿ ಪಾಯಿಂಟ್ ನಲ್ಲಿ ತಾಲಿಬಾನ್ ಉಗ್ರರು ಬರದಂತೆ ತಡೆದರೇ, ಬೇರೆ ಕಡೆಯಿಂದ ಬರಲು ಅವಕಾಶ ಇಲ್ಲ.
2-ಹಿಂದೂಕುಷ್ ಪರ್ವತ ಶ್ರೇಣಿಯಲ್ಲಿ ಪಂಜಶಿರ್ ಪ್ರಾಂತ್ಯ ಇದೆ. ಬೆಟ್ಟಗುಡ್ಡಗಳಿಂದ ಪಂಜಶಿರ್ ಪ್ರಾಂತ್ಯ ಆವೃತ್ತವಾಗಿರುವುದರಿಂದ ಬೆಟ್ಟಗಳ ಮೇಲ್ಭಾಗದಿಂದ ಕೆಳಭಾಗದಲ್ಲಿರುವ ತಾಲಿಬಾನ್ ಉಗ್ರರ ಮೇಲೆ ದಾಳಿ ನಡೆಸುವುದು ಸುಲಭ. ಕೆಳಭಾಗದಲ್ಲಿ ನಿಂತುಕೊಂಡು ತಾಲಿಬಾನ್ ಉಗ್ರರು ಮೇಲ್ಭಾಗದ ನಾರ್ದನ್ ಅಲೈಯನ್ಸ್ ಯೋಧರ ಮೇಲೆ ದಾಳಿ ನಡೆಸಲು ಸಾಧ್ಯವಿಲ್ಲ.
3-ಪಂಜಶಿರ್ ಪ್ರಾಂತ್ಯದ ಭೌಗೋಳಿಕ ಸ್ವರೂಪವೇ ಕೋಟೆಯಂತೆ ಇದೆ. ಸುತ್ತಲೂ ಬೆಟ್ಟಗುಡ್ಡಗಳಿವೆ. ಇದನ್ನು ಭೇಧಿಸಿ ಪಂಜಶಿರ್ ಪ್ರಾಂತ್ಯದ ಒಳಗೆ ಬರುವುದು ಸುಲಭವಲ್ಲ.
4-ಪಂಜಶಿರ್ ಪ್ರಾಂತ್ಯಕ್ಕೆ ಪ್ರಬಲ ನಾಯಕತ್ವ ಇದೆ. ಅಹಮದ್ ಮಸೂದ್, ಅಮರುಲ್ಲಾ ಸಲೇಹಾ ಹಾಗೂ ಮಾಜಿ ರಕ್ಷಣಾ ಇಲಾಖೆಯ ಸಚಿವ ಬಿಸ್ಮಿಲ್ಲಾ ಖಾನ್ ಅಹಮದಿ ನಾಯಕತ್ವ ಇದೆ. ಮೂವರು ಗೆರಿಲ್ಲಾ ಯುದ್ಧದಲ್ಲಿ ಪಳಗಿದವರು.
5-ನಾರ್ದನ್ ಅಲೈಯನ್ಸ್ ಹಾಗೂ ಪ್ರತಿರೋಧ ಪಡೆಯಲ್ಲಿ 10 ಸಾವಿರ ಯೋಧರಿದ್ದಾರೆ. ಇವರ ಜೊತೆಗೆ ಈಗ ಅಫ್ಘನಿಸ್ತಾನದ ರಾಷ್ಟ್ರೀಯ ಸೇನೆಯ 1,200 ಯೋಧರು ಬಂದು ಪಂಜಶಿರ್ ಪ್ರಾಂತ್ಯಕ್ಕೆ ಸೇರಿಕೊಂಡಿದ್ದಾರೆ. ಇದರಿಂದಾಗಿ ಸೈನಿಕರ ಸಂಖ್ಯೆ ಹೆಚ್ಚಾಗಿದೆ. ಪಂಜಶಿರ್ ಪ್ರಾಂತ್ಯದ ಬಳಿಯೂ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿವೆ.
6-ತಾಲಿಬಾನ್ ದಾಳಿ ತಡೆಯಲಾಗದೇ, ಪಕ್ಕದ ತಜಕಿಸ್ತಾನಕ್ಕೆ ಹೋಗಿದ್ದ ಅಫ್ಘನಿಸ್ತಾನದ ರಾಷ್ಟ್ರೀಯ ಸೇನೆಯ ಯೋಧರು ಈಗ ಪಂಜಶಿರ್ ಗೆ ಬಂದಿಳಿದಿದ್ದಾರೆ. ಜೊತೆಗೆ ಸೇನೆಯ ಶಸ್ತ್ರಾಸ್ತ್ರ, ಯುದ್ಧಟ್ಯಾಂಕ್ ಗಳನ್ನು ತಂದಿದ್ದಾರೆ. ಮೂರು ಹೆಲಿಕಾಪ್ಟರ್ ಗಳು ಕೂಡ ತಜಕಿಸ್ತಾನದಿಂದ ಬಂದಿವೆ. ಆದರೇ, ಈ ಹೆಲಿಕಾಪ್ಟರ್ ಗಳು ಅಫ್ಘನಿಸ್ತಾನದ ಸೇನೆಗೆ ಸೇರಿದ ಹೆಲಿಕಾಪ್ಟರ್ ಗಳು. ಇವುಗಳನ್ನೇ ತೆಗೆದುಕೊಂಡು ಪೈಲಟ್ ಗಳು ತಜಕಿಸ್ತಾನಕ್ಕೆ ಹೋಗಿದ್ದರು. ಈಗ ಅಮರುಲ್ಲಾ ಸಲೇಹಾ ನಾಯಕತ್ವಕ್ಕೆ ಬೆಂಬಲ ವ್ಯಕ್ತಪಡಿಸಿ, ಹೆಲಿಕಾಪ್ಟರ್ ಸಮೇತ ಪಂಜಶಿರ್ ಪ್ರಾಂತ್ಯಕ್ಕೆ ಬಂದಿದ್ದಾರೆ. ಪಂಜಶಿರ್ ಪ್ರಾಂತ್ಯದಲ್ಲಿ 1.78 ಲಕ್ಷ ಜನಸಂಖ್ಯೆ ಇದೆ. ಈ ಚಿಕ್ಕ ಪ್ರಾಂತ್ಯವೇ ಈಗ ತಾಲಿಬಾನ್ ಸಂಘಟನೆಗೆ ಸವಾಲೊಡ್ಡಿದೆ.
7-ಪಂಜಶಿರ್ ಪ್ರಾಂತ್ಯ ಕೆಲ ತಿಂಗಳ ಕಾಲ ಶಸ್ತ್ರಾಸ್ತ್ರ ಹೋರಾಟಕ್ಕೆ ಸಿದ್ದತೆ ನಡೆಸಿಕೊಂಡಿದೆ. ಆಹಾರ ಸಾಮಗ್ರಿ, ಇಂಧನ ಸೇರಿದಂತೆ ಎಲ್ಲವನ್ನೂ ಕೆಲ ತಿಂಗಳವರೆಗೂ ಸಂಗ್ರಹಿಸಿಟ್ಟುಕೊಂಡಿದೆ. ಯುದ್ಧ ಬಯಸಲ್ಲ. ಆದರೆ, ತಾಲಿಬಾನ್ ಗೆ ಶರಣಾಗಲ್ಲ ಎಂಬ ಅಚಲ ನಿಲುವು ಪಂಜಶಿರ್ ಪ್ರಾಂತ್ಯದ ನಾಯಕರದ್ದು.
8-ಈ ಹಿಂದೆ 1980-89ರ ಅವಧಿಯಲ್ಲಿ ಸೋವಿಯತ್ ರಷ್ಯಾದ ಆಳ್ವಿಕೆಗೆ ಒಳಪಡದೇ, ಈ ಪಂಜಶಿರ್ ಪ್ರಾಂತ್ಯ ಸ್ವತಂತ್ರವಾಗಿತ್ತು. ಸೋವಿಯತ್ ರಷ್ಯಾಕ್ಕೂ ಈ ಪ್ರಾಂತ್ಯವನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಸೋವಿಯತ್ ರಷ್ಯಾಗೆ ಅಹಮದ್ ಶಾ ಮಸೂದ್ ಸೆಡ್ಡು ಹೊಡೆದು ಈ ಪ್ರಾಂತ್ಯದ ಸ್ವಾತಂತ್ರ್ಯ ಕಾಪಾಡಿಕೊಂಡಿದ್ದರು. ಬಳಿಕ 1996-2001ರ ಅವಧಿಯಲ್ಲೂ ಈ ಪಂಜಶಿರ್ ಪ್ರಾಂತ್ಯ ತಾಲಿಬಾನ್ ಆಳ್ವಿಕೆಗೆ ಒಳಪಟ್ಟಿರಲಿಲ್ಲ. ಈ ಹಿಂದೆಯೂ ಈ ಪ್ರಾಂತ್ಯವನ್ನು ವಶಕ್ಕೆ ಪಡೆಯಲು ತಾಲಿಬಾನ್ ಗೆ ಸಾಧ್ಯವಾಗಿಲ್ಲ.
ಜನ ಮನಸ್ಸು ಮಾಡಿದ್ರೆ ಏನು ಬೇಕಾದ್ರೂ ಸಾಧ್ಯ ಅನ್ನೋದಕ್ಕೆ ಪಂಜ್‌ಶೀರ್ ಹೋರಾಟಗಾರರೇ ಸಾಕ್ಷಿ. ಸದ್ಯ ಪಂಜ್‌ಶೀರ್ ಶರಣಾಗತಿಗೆ ತಾಲಿಬಾನ್ ಡೆಡ್‌ಲೈನ್ ನೀಡಿದೆ. ಆದ್ರೆ, ತಾಲಿಬಾನಿಗಳ ಡೆಡ್‌ಲೈನ್ ಕ್ಯಾರೆ ಎನ್ನದ ಪಂಜ್‌ಶೀರ್ ಸಿಂಹಗಳು ಗಡಿಯಲ್ಲಿ ಗನ್ ಹಿಡಿದು ನಿಂತಿದ್ದಾರೆ.
ಪಂಜಶಿರ್ ಪ್ರಾಂತ್ಯದ ದೌರ್ಬಲ್ಯಗಳೇನು?
1-ಪಂಜಶೀರ್ ಪ್ರಾಂತ್ಯವನ್ನು ತಾಲಿಬಾನಿಗಳು ಸೋಲಿಸಲೇಬೇಕಾದ ಅಗತ್ಯವೇ ಇಲ್ಲ. ಪಂಜಶೀರ್ ಪ್ರಾಂತ್ಯಕ್ಕೆ ಹೋಗುವ ರಸ್ತೆ, ಹೊರಬರುವ ರಸ್ತೆಗಳನ್ನು ಬಂದ್ ಮಾಡಿದರೇ, ಪಂಜಶೀರ್ ಪ್ರಾಂತ್ಯ ಸೋತಂತೆ. ಪಂಜಶೀರ್ ಪ್ರಾಂತ್ಯದಲ್ಲಿ ಸದ್ಯ ಕೆಲ ತಿಂಗಳಿಗೆ ಆಗುವಷ್ಟು ಮಾತ್ರ ಆಹಾರ ಧಾನ್ಯ, ಇಂಧನ ಇದೆ. ಉಳಿದಿದ್ದಕ್ಕೆಲ್ಲಾ ಹೊರಗೆ ಬರಲೇಬೇಕು. ಹೀಗಾಗಿ ಪಂಜಶೀರ್ ಪ್ರಾಂತ್ಯದಲ್ಲಿ ಆಹಾರ ಧಾನ್ಯ, ಇಂಧನ ಇರುವವರೆಗೂ ಸಮಸ್ಯೆ ಇಲ್ಲ. ಆಹಾರ ಧಾನ್ಯ, ಇಂಧನ ಮುಗಿದ ಬಳಿಕ ತಾಲಿಬಾನ್ ಗೆ ಶರಣಾಗಬಹುದು. ತಾಲಿಬಾನ್ ಹೊರಗಿನಿಂದ ಪಂಜಶೀರ್ ಪ್ರಾಂತ್ಯದ ವಿದ್ಯುತ್ ಸಂಪರ್ಕ ಕೂಡ ಕಡಿತ ಮಾಡಬಹುದು.
2-ಪಂಜಶೀರ್ ಪ್ರಾಂತ್ಯವನ್ನು ಈಗಾಗಲೇ ತಾಲಿಬಾನಿಗಳು ಸುತ್ತುವರಿದಿದ್ದಾರೆ. ಪಂಜಶೀರ್ ಪ್ರಾಂತ್ಯಕ್ಕೆ ದಿಗ್ಭಂಧನ ವಿಧಿಸಿದಂತಾಗಿದೆ. ಕೋಟೆಯೊಳಗಡೆಯೇ ಸಿಂಹಗಳು ಬಹಳ ದಿನ ಇರಲು ಸಾಧ್ಯವಿಲ್ಲ. ಕೋಟೆಯಿಂದ ಸಿಂಹಗಳು ಹೊರಗೆ ಬರಲೇಬೇಕಾದ ಅನಿವಾರ್ಯತೆಯೂ ಬರುತ್ತೆ.
3-ತಾಲಿಬಾನಿಗಳ ಬಳಿ 85 ಸಾವಿರ ಜಿಹಾದಿ ಉಗ್ರರಿದ್ದಾರೆ. ಆದರೇ, ಪಂಜಶೀರ್ ಪ್ರಾಂತ್ಯದ ಬಳಿ 12 ಸಾವಿರ ಸೈನಿಕರಿದ್ದಾರೆ. ಸಂಖ್ಯಾಬಲದಲ್ಲಿ ಪಂಜಶೀರ್ ಪ್ರಾಂತ್ಯದ ಯೋಧರಿಗಿಂತ ತಾಲಿಬಾನಿಗಳ ಬಳಿಯೇ ಹೆಚ್ಚಿನ ಉಗ್ರರಿದ್ದಾರೆ.
4-ತಾಲಿಬಾನ್ ಉಗ್ರರ ಬಳಿ ಈಗ ಆಮೆರಿಕಾದ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿವೆ. ಐಇಡಿ ಬಾಂಬ್ ಸ್ಪೋಟವನ್ನು ತಡೆಯುವ ಸಾಮರ್ಥ್ಯದ ವಾಹನಗಳಿವೆ. ಹೀಗಾಗಿ ಯುದ್ಧ ನಡೆದರೇ, ತಾಲಿಬಾನ್ ಗೂ ಈಗ ಪಂಜಶೀರ್ ಪ್ರಾಂತ್ಯದ ನಾರ್ದನ್ ಅಲೈಯನ್ಸ್ ಹಾಗೂ ಪ್ರತಿರೋಧ ಪಡೆಯನ್ನು ಸೋಲಿಸುವ ಶಕ್ತಿ ಇದೆ.
5-1996ರಿಂದ 2001ರ ಅವಧಿಯಲ್ಲಿ ಪಂಜಶೀರ್ ಪ್ರಾಂತ್ಯಕ್ಕೆ ತಾಲಿಬಾನ್ ವಿರುದ್ಧ ಹೋರಾಟ ಮಾಡಲು ಭಾರತ, ಆಮೆರಿಕಾ, ರಷ್ಯಾ ಬೆಂಬಲ ನೀಡಿದ್ದವು. ಆದರೇ ಈಗ ಯಾವುದೇ ವಿದೇಶಿ ಶಕ್ತಿಗಳು ಕೂಡ ಪಂಜಶೀರ್ ಪ್ರಾಂತ್ಯಕ್ಕೆ ತಾಲಿಬಾನ್ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿಲ್ಲ. ಪಂಜಶೀರ್ ಪ್ರಾಂತ್ಯ ಈಗ ಸ್ವಂತ ಶಕ್ತಿಯ ಮೇಲೆಯೇ ತಾಲಿಬಾನಿ ವಿರುದ್ಧ ಹೋರಾಡಬೇಕಾಗಿದೆ.
6-ತಾಲಿಬಾನ್ ಈ ಹಿಂದೆ ಇದ್ದಂತೆ ಈಗ ಇಲ್ಲ. ಈಗ ಪರಿಸ್ಥಿತಿ ಬದಲಾಗಿದೆ. ತಾಲಿಬಾನ್ ಗೆ ಈಗ ಚೀನಾ, ರಷ್ಯಾ, ಪಾಕಿಸ್ತಾನದ ಬೆಂಬಲ ಇದೆ. ವಿದೇಶಿ ಶಕ್ತಿಗಳ ಬೆಂಬಲ ಪಡೆದು ಪಂಜಶೀರ್ ಪ್ರಾಂತ್ಯದ ಮೇಲೆ ಮೇಲುಗೈ ಸಾಧಿಸುವ ಅವಕಾಶ ತಾಲಿಬಾನ್ ಗೆ ಇದೆ.
ಈಗ ಪಂಜಶೀರ್ ಪ್ರಾಂತ್ಯದಲ್ಲಿ ಮುಖ್ಯವಾಗಿ ತಜಕಿ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೇ, ತಾಲಿಬಾನ್ ಉಗ್ರಗಾಮಿ ಸಂಘಟನೆಯಲ್ಲಿ ಪಶ್ತೂನ್ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಇದು ತಾಲಿಬಾನ್ ಮತ್ತು ಪಂಜಶೀರ್ ಪ್ರಾಂತ್ಯದ ನಡುವೆ ಜನಾಂಗೀಯ ಘರ್ಷಣೆಯೂ ಹೌದು. ಈಗ ಪಂಜಶೀರ್ ಪ್ರಾಂತ್ಯದ ಅಹಮದ್ ಮಸೂದ್ ಕೂಡ ಅಫ್ಘನಿಸ್ತಾನದ ಹೊಸ ಸರ್ಕಾರದಲ್ಲಿ ಎಲ್ಲ ವರ್ಗ, ಜನಾಂಗಗಳಿಗೂ ಪ್ರಾತಿನಿಧ್ಯ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ.
ಅಂದರೆ, ತಜಕಿ ಜನಾಂಗದ ತಮಗೂ ಪ್ರಾತಿನಿಧ್ಯ ನೀಡಬೇಕೆಂಬ ಬೇಡಿಕೆಯನ್ನು ಇಟ್ಟಿದ್ದಾರೆ. ತಾಲಿಬಾನ್ ಈ ಬೇಡಿಕೆಗೆ ಒಪ್ಪಿಕೊಂಡರೇ, ಪಂಜಶೀರ್ ಪ್ರಾಂತ್ಯದ ನಾಯಕರು ಕೂಡ ತಾಲಿಬಾನಿಗಳ ಹೊಸ ಸರ್ಕಾರವನ್ನು ಸೇರಬಹುದು. ಅಹಮದ್ ಮಸೂದ್ ಕೂಡ ಯುದ್ಧ ಬೇಡ, ಶಾಂತಿ ಬೇಕು ಎನ್ನುತ್ತಿದ್ದಾರೆ. ಪಂಜಶೀರ್ ಪ್ರಾಂತ್ಯದ ರಕ್ಷಣೆಗಾಗಿ ಹೋರಾಟ, ಯುದ್ಧಕ್ಕೂ ಸಿದ್ಧ ಎನ್ನುತ್ತಿದ್ದಾರೆ.
ಪಂಜಶೀರ್ ಪ್ರಾಂತ್ಯ ಹಾಗೂ ತಾಲಿಬಾನಿಗಳ ನಡುವೆ ಸಂಧಾನ ನಡೆಸಲು ತಾವು ಸಿದ್ಧ ಎಂದು ಆಶ್ರಫ್ ಘನಿ ಸೋದರ ಹಸ್ಮತ್ ಘನಿ ಹೇಳಿದ್ದಾರೆ. ಈಗಾಗಲೇ ತಾಲಿಬಾನಿಗಳು ಹಾಗೂ ಪಂಜಶೀರ್ ಪ್ರಾಂತ್ಯದ ನಡುವೆ ಸಂಧಾನ ಮಾತುಕತೆಗಳು ಕೂಡ ನಡೆಯುತ್ತಿವೆ. ಈ ಸಂಧಾನ ಮಾತುಕತೆ ಯಶಸ್ವಿಯಾದರೇ , ಪಂಜಶೀರ್ ಪ್ರಾಂತ್ಯ ಕೂಡ ತಾಲಿಬಾನ್ ಆಳ್ವಿಕೆಗೆ ಒಳಪಡಬಹುದು. ಆಗ ತಾಲಿಬಾನಿಗಳ ಹೊಸ ಸರ್ಕಾರದಲ್ಲಿ ಪಂಜಶೀರ್ ಪ್ರಾಂತ್ಯದ ತಜಕಿ ಜನಾಂಗಕ್ಕೂ ಸೂಕ್ತ ಪ್ರಾತಿನಿಧ್ಯ ನೀಡಲೇಬೇಕಾಗುತ್ತೆ.
ಪಂಜಶೀರ್ ಪ್ರಾಂತ್ಯ ತಾಲಿಬಾನಿಯರು, ವಿದೇಶಿ ಶಕ್ತಿಗಳಿಗೂ ಮಣಿಯದೇ ಇರುವ ತನ್ನ ಇತಿಹಾಸ, ಪರಂಪರೆಯನ್ನು ಮುಂದುವರೆಸುತ್ತಾ, ಇಲ್ಲವೇ ಸಂಧಾನ ಮಾತುಕತೆ ಯಶಸ್ವಿಯಾಗಿ ತಜಕಿ ಜನಾಂಗ ಈ ಬಾರಿ ತಾಲಿಬಾನ್ ಸರ್ಕಾರದ ಭಾಗವಾಗುತ್ತಾ ಎಂಬುದು ಕುತೂಹಲ ಕೆರಳಿಸಿದೆ. ಒಂದು ವೇಳೆ ತಾಲಿಬಾನಿಗಳು ಹಾಗೂ ಪಂಜಶೀರ್ ಪ್ರಾಂತ್ಯದ ನಡುವೆ ಈಗ ಯುದ್ಧ ನಡೆದರೇ, ಯಾರ ಕೈ ಮೇಲಾಗುತ್ತೆ ಎನ್ನುವ ಕ್ಲೈಮಾಕ್ಸ್ ಅನ್ನು ಕೂಡ ವಿಶ್ವ ಕಾತರದಿಂದ ಎದುರು ನೋಡುತ್ತಿದೆ.
(what happens to panjshir province of taliban blockade continues)