ಅಫ್ಘಾನಿಸ್ತಾನದಲ್ಲಿ ಸಂಪೂರ್ಣ ಇಸ್ಲಾಮಿಕ್ ಕಾನೂನು ಜಾರಿಗೆ ತಾಲಿಬಾನ್ ಆದೇಶ

| Updated By: Rakesh Nayak Manchi

Updated on: Nov 15, 2022 | 8:12 AM

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ವೋಚ್ಚ ನಾಯಕ ಮೌಲಾವಿ ಹೆಬತುಲ್ಲಾ ಅಖುಂದ್ಜಾದಾ, ಇಸ್ಲಾಮಿಕ್ ಕಾನೂನನ್ನು ಸಂಪೂರ್ಣವಾಗಿ ಜಾರಿಗೆ ತರಲು ನ್ಯಾಯಾಧೀಶರಿಗೆ ಆದೇಶಿಸಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಸಂಪೂರ್ಣ ಇಸ್ಲಾಮಿಕ್ ಕಾನೂನು ಜಾರಿಗೆ ತಾಲಿಬಾನ್ ಆದೇಶ
ಅಫ್ಘಾನಿಸ್ತಾನದಲ್ಲಿ ಸಂಪೂರ್ಣ ಇಸ್ಲಾಮಿಕ್ ಕಾನೂನು ಜಾರಿಗೆ ಆದೇಶ
Follow us on

ಜನರು ಯಾವುದೇ ಭೀತಿ ಇಲ್ಲದೆ ಓಡಾಡುತ್ತಿದ್ದ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ (Taliban rule in Afghanistan) ಬಂದ ನಂತರ ಜನರ ಒಂದೊಂದೆ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತಾ ಬರಲಾಗಿದೆ. ಅಲ್ಲಿನ ಮಾನವ ಹಕ್ಕುಗಳ ಪರಿಸ್ಥಿತಿಯ ಬಗ್ಗೆ ಹೆಚ್ಚುತ್ತಿರುವ ಕಳವಳದ ನಡುವೆಯೇ ತಾಲಿಬಾನ್ ಸರ್ವೋಚ್ಚ ನಾಯಕ ಮೌಲಾವಿ ಹೆಬತುಲ್ಲಾ ಅಖುಂದ್ಜಾದಾ, ದೇಶದಲ್ಲಿ ಇಸ್ಲಾಮಿಕ್ ಕಾನೂನನ್ನು (Islamic law) ಸಂಪೂರ್ಣವಾಗಿ ಜಾರಿಗೆ ತರಲು ನ್ಯಾಯಾಧೀಶರಿಗೆ ಆದೇಶಿಸಿದ್ದಾರೆ. ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್, ನ್ಯಾಯಾಧೀಶರ ಗುಂಪನ್ನು ಭೇಟಿಯಾದ ನಂತರ ಹೈಬತುಲ್ಲಾ ಅಖುಂದ್ಜಾದಾ ಅವರಿಂದ ಆದೇಶ ಬಂದಿತು ಎಂದು ಹೇಳಿದರು. “ಅಲೈಕದಾರ್ ಅಮಿರುಲ್ ಮೊಮಿನಿಯನ್ ಅವರು ನ್ಯಾಯಾಧೀಶರ ಸಭೆಯಲ್ಲಿ ಕಳ್ಳರು, ಅಪಹರಣಕಾರರು ಮತ್ತು ದೇಶದ್ರೋಹಿಗಳ ಪ್ರಕರಣಗಳನ್ನು ತನಿಖೆ ಮಾಡಿ ಮತ್ತು ಅಂತಹವರಿಗೆ ಷರಿಯತ್ ಪ್ರಕಾರ ಶಿಕ್ಷೆಗೆ ಒಳಪಡಿಸಲು ನೀವು ಬದ್ಧರಾಗಿರುತ್ತೀರಿ. ಏಕೆಂದರೆ ಇದು ಷರಿಯಾ (Shariat law) ಮತ್ತು ನನ್ನ ಆದೇಶದ ಕ್ರಮವಾಗಿದೆ ಮತ್ತು ಕ್ರಮ ಕೈಗೊಳ್ಳುವುದು ಕಡ್ಡಾಯವಾಗಿದೆ” ಎಂದು ಹೇಳಿರುವುದಾಗಿ ಜಬೀಹುಲ್ಲಾ ಮುಜಾಹಿದ್ ಭಾನುವಾರ ಟ್ವೀಟ್ ಮಾಡಿದ್ದಾರೆ.

ಇಸ್ಲಾಮಿಕ್ ಎಮಿರೇಟ್‌ನ ನಾಯಕನ ಆದೇಶವನ್ನು ದೇಶಾದ್ಯಂತ ಜಾರಿಗೆ ತರಲಾಗುವುದು ಎಂದು ತಾಲಿಬಾನ್ ವಕ್ತಾರರು ತಿಳಿಸಿದ್ದಾರೆ. “ಕೊಲೆ, ಅಪಹರಣ ಮತ್ತು ಕಳ್ಳತನದಲ್ಲಿ ತೊಡಗಿರುವವರು ಶಿಕ್ಷೆಗೆ ಒಳಗಾಗಬೇಕು” ಎಂದು ತಾಲಿಬಾನ್ ವಕ್ತಾರ ಯೂಸೆಫ್ ಅಹ್ಮದಿ TOLOnews ಗೆ ತಿಳಿಸಿದರು.

ಇಸ್ಲಾಮಿಕ್ ಗುಂಪು ಅಧಿಕಾರಕ್ಕೆ ಬಂದ ನಂತರ ದೇಶಾದ್ಯಂತ ಇಸ್ಲಾಮಿಕ್ ಕಾನೂನಿನ ಎಲ್ಲಾ ಅಂಶಗಳನ್ನು ಸಂಪೂರ್ಣವಾಗಿ ಜಾರಿಗೆ ತರಲು ತಾಲಿಬಾನ್ ನಾಯಕ ಔಪಚಾರಿಕ ಆದೇಶವನ್ನು ಹೊರಡಿಸಿದ್ದು ಇದೇ ಮೊದಲ ಬಾರಿಗೆ ಎಂದು ಆಫ್ಘನ್ ಸುದ್ದಿ ಸಂಸ್ಥೆ ಹೇಳಿದೆ.
ತಾಲಿಬಾನ್ 2021ರ ಆಗಸ್ಟ್ ತಿಂಗಳಲ್ಲಿ ಅಫ್ಘಾನಿಸ್ತಾನವನ್ನು ಸ್ವಾಧೀನಪಡಿಸಿಕೊಂಡಿತು ಮತ್ತು ಮಾನವ ಹಕ್ಕುಗಳ ವಾಚ್ (HRW) ಪ್ರಕಾರ, ಮೂಲಭೂತ ಹಕ್ಕುಗಳನ್ನು ವಿಶೇಷವಾಗಿ ಮಹಿಳೆಯರು ಮತ್ತು ಹುಡುಗಿಯರನ್ನು ತೀವ್ರವಾಗಿ ನಿರ್ಬಂಧಿಸುವ ನೀತಿಗಳನ್ನು ವಿಧಿಸಿತು.

ಆಡಳಿತ ತಮ್ಮ ಕೈಗೆ ಸಿಗುತ್ತಿದ್ದಂತೆ ತಾಲಿಬಾನಿಗಳು ಎಲ್ಲಾ ಮಹಿಳೆಯರನ್ನು ನಾಗರಿಕ ಸೇವೆಯ ನಾಯಕತ್ವದ ಹುದ್ದೆಗಳಿಂದ ವಜಾಗೊಳಿಸಿದರು ಮತ್ತು ಹೆಚ್ಚಿನ ಪ್ರಾಂತ್ಯಗಳಲ್ಲಿ ಬಾಲಕಿಯರು ಮಾಧ್ಯಮಿಕ ಶಾಲೆಗೆ ಹೋಗುವುದನ್ನು ನಿಷೇಧಿಸಲಾಗಿದೆ. ಓರ್ವ ಪುರುಷನೊಂದಿಗೆ ಮಹಿಳೆ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಬೇಕು, ಒಂಟಿಯಾಗಿ ಓಡಾಡುವಂತಿಲ್ಲ. ಮಹಿಳಾ ಟಿವಿ ಸುದ್ದಿವಾಚಕರು ಸೇರಿದಂತೆ ಮಹಿಳೆಯರ ಮುಖಗಳನ್ನು ಸಾರ್ವಜನಿಕವಾಗಿ ಮುಚ್ಚಬೇಕು ಎಂದು ಆದೇಶಿಸಲಾಗಿತ್ತು.

ಹಕ್ಕುಗಳ ಗುಂಪುಗಳ ಪ್ರಕಾರ, ತಾಲಿಬಾನ್ ಪಡೆಗಳು ಪ್ರತೀಕಾರದ ಹತ್ಯೆಗಳನ್ನು ನಡೆಸಿವೆ ಮತ್ತು ಮಾಜಿ ಸರ್ಕಾರಿ ಅಧಿಕಾರಿಗಳು ಮತ್ತು ಭದ್ರತಾ ಪಡೆ ಸಿಬ್ಬಂದಿಯ ಬಲವಂತದ ಅಪಹರಣ ನಡೆಸಿವೆ. ತಾಲಿಬಾನ್ ಪಡೆಗಳು ಸೇಡು ತೀರಿಸಿಕೊಳ್ಳುವ ಹತ್ಯೆಗಳನ್ನು ನಡೆಸಿವೆ, ಒಂದಷ್ಟು ಜನರನ್ನು ಗಲ್ಲಿಗೇರಿಸಿದ್ದಾರೆ.

ಮತ್ತಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:07 am, Tue, 15 November 22