ಕ್ಯೂಬಾದಲ್ಲಿ (Cuba) ಭಾರೀ ನಾಶ ನಷ್ಟವನ್ನುಂಟು ಮಾಡಿರುವ ಪ್ರಬಲ ಇಯಾನ್ ಚಂಡಮಾರುತ (Hurricane Ian) ಫ್ಲೋರಿಡಾದ ಪಶ್ಚಿಮ ಕರಾವಳಿಯತ್ತ ಚಲಿಸಿದೆ. ಮಂಗಳವಾರ ಕ್ಯೂಬಾಕ್ಕೆ ಈ ಚಂಡಮಾರುತ ಕಾಲಿಟ್ಟಿದ್ದು, ಸಾವಿರಾರು ಮಂದಿಯನ್ನು ಸ್ಥಳಾಂತರಿಸಲಾಗಿದೆ. ಕೆಟಗರಿ3ಕ್ಕೆ ಸೇರಿದ ಈ ಚಂಡ ಮಾರುತ ಕ್ಯೂಬಾದಲ್ಲಿ ಅವಾಂತರ ಸೃಷ್ಟಿಸಿದೆ.ಮಂಗಳವಾರ ರಾತ್ರಿ ವಿದ್ಯುತ್ ಸಮಸ್ಯೆಯುಂಟಾಗಿದ್ದು ದ್ವೀಪದಲ್ಲಿ ವಾಸಿಸುವ 11.3 ಮಿಲಿಯನ್ ಜನರು ಕತ್ತಲೆಯಲ್ಲಿ ಕಾಲಕಳೆಯುವಂತಾಗಿದೆ. ಚಂಡಮಾರುತದ ಹೊಡೆತದಿಂದ ತಪ್ಪಿಸಿಕೊಳ್ಳಲು ಜನರು ಸಾಮೂಹಿಕವಾಗಿ ವಲಸೆ ಹೋಗಿದ್ದಾರೆ. ಏತನ್ಮಧ್ಯೆ, ಫ್ಲೋರಿಡಾದಲ್ಲಿ ಚಂಡಮಾರುತದ ಭೀತಿಯಾವರಿಸಿದ್ದು,ಇಲ್ಲಿಗೆ ತಲುಪುವಾಗ ಇಯಾನ್ ಚಂಡಮಾರುತ 4ನೇ ಕೆಟಗರಿಗೆ ಸೇರುತ್ತದೆ. ಗಲ್ಫ್ ಕರಾವಳಿ ಜತೆ ಇಲ್ಲಿನ ಯಾವುದಾದರೊಂದು ಪ್ರದೇಶದಲ್ಲಿ ಬುಧವಾರಸಂಜೆ ಚಂಡ ಮಾರುತ ಅಪ್ಪಳಿಸಲಿದೆ. 2.5 ಮಿಲಿಯನ್‌ಗಿಂತಲೂ ಹೆಚ್ಚು ಫ್ಲೋರಿಡಿಯನ್ನರು ಸ್ಥಳಾಂತರಿಸುವ ಆದೇಶಗಳು ಅಥವಾ ಎಚ್ಚರಿಕೆಗಳ ಅಡಿಯಲ್ಲಿದ್ದರೆ, ಇತರರು ಆಹಾರ ಸಾಮಾಗ್ರಿಗಳನ್ನು ಸಂಗ್ರಹಿಸುತ್ತಿದ್ದಾರೆ. ಚಂಡಮಾರುತದಿಂದ ಉಂಟಾದ ಸುಂಟರಗಾಳಿಗಳು ಈಗಾಗಲೇ ಕರಾವಳಿಯನ್ನು ಅಪ್ಪಳಿಸುತ್ತಿವೆ ಎಂದು ವರದಿಯಾಗಿದೆ. ದಕ್ಷಿಣ ಫ್ಲೋರಿಡಾದಲ್ಲಿ ಸಣ್ಣ ವಿಮಾನಗಳನ್ನು ಮೇಲು ಕೆಳಗೆ ಮಾಡುವ ವಿಡಿಯೊಗಳು ಮತ್ತು ಫೋಟೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿವೆ.
ಯಾವುದಿದು ಇಯಾನ್ ಚಂಡಮಾರುತ?
ಇಯಾನ್ ಚಂಡಮಾರುತವು ವೇಗವಾಗಿ ಬೆಳೆಯುತ್ತಿರುವ ಚಂಡಮಾರುತವಾಗಿದ್ದು, ಸೋಮವಾರ ಗ್ರ್ಯಾಂಡ್ ಕೇಮನ್‌ನ ಪಶ್ಚಿಮಕ್ಕೆ ಸುಮಾರು 100 ಮೈಲಿಗಳು (160 ಕಿಮೀ) ದೂರದಲ್ಲಿದ್ದು, ವಾಯುವ್ಯದಿಂದ ಕ್ಯೂಬಾದ ಕಡೆಗೆ ಗಂಟೆಗೆ 80 ಮೈಲುಗಳಷ್ಟು (ಗಂಟೆಗೆ 130 ಕಿಮೀ) ಗರಿಷ್ಠ ಗಾಳಿ ಬೀಸುತ್ತದೆ. ಇದು ಕೆಟಗರಿ 1ಕ್ಕೆ ಸೇರಿದ ಚಂಡಮಾರುತವಾಗಿದೆ. ವಾರಾಂತ್ಯದಲ್ಲಿ ಕ್ಯೂಬಾ ಪ್ರವಾಸಿಗರನ್ನು ಸ್ಥಳಾಂತರಿಸಿದೆ. ಚಂಡಮಾರುತದ ಭೀತಿಯಿಂದಾಗಿ ಕೇಮನ್ ದ್ವೀಪಗಳು ಭಾನುವಾರದಂದು ವಿಮಾನಗಳನ್ನು ಸ್ಥಗಿತಗೊಳಿಸಿವೆ
ಮಂಗಳವಾರ ಕ್ಯೂಬಾದಲ್ಲಿ ವಿನಾಶವನ್ನು ಉಂಟುಮಾಡಿದ ಚಂಡಮಾರುತವು ವರ್ಗ 3 ರ ಚಂಡಮಾರುತವಾಗಿ ಬೆಳೆದಿದೆ. ಬುಧವಾರ ಕೆಟಗರಿ 4ಕ್ಕೆ ಇದು ಮಾರ್ಪಾಡಾಗಬಹುದು ಎಂದು ಹೇಳಲಾಗಿದೆ.
ವೇಗವಾಗಿ ತೀವ್ರಗೊಳ್ಳುವ ಬಿರುಗಾಳಿ 24 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ಗಾಳಿಯ ವೇಗದಲ್ಲಿ ಕನಿಷ್ಠ 35 mph ಅನ್ನು ಪಡೆಯುತ್ತದೆ ಎಂದು ರಾಷ್ಟ್ರೀಯ ಚಂಡಮಾರುತ ಸೆಂಟರ್ ವ್ಯಾಖ್ಯಾನಿಸುತ್ತದೆ. ಇಯಾನ್ ಚಂಡಮಾರುತದಿಂದಾಗಿ ಉಂಟಾಗುವ ಪರಿಸ್ಥಿತಿಗಳು ಸ್ಪಷ್ಟವಾಗಿರುವುದರಿಂದ ಮುನ್ಸೂಚಕರು ದಿನಗಳ ಮುಂಚೆಯೇ ಅದರ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಫ್ಲೋರಿಡಾದಲ್ಲಿ ಎಚ್ಚರಿಕೆ
ಚಂಡಮಾರುತ ಅಪ್ಪಳಿಸುವ ನಿಖರವಾದ ಸ್ಥಳದಲ್ಲಿ ವ್ಯಾಪಕವಾದ ಅನಿಶ್ಚಿತತೆಯಿದ್ದರೂ ಸಹ, ಸ್ಥಳೀಯ ಮಾಧ್ಯಮ ವರದಿಗಳು ದಕ್ಷಿಣ ಫ್ಲೋರಿಡಾದಲ್ಲಿ ಸಣ್ಣ ವಿಮಾನಗಳನ್ನು ಉರುಳಿಸಿದ ಮತ್ತು ಮರವನ್ನು ಬುಡಮೇಲು ಮಾಡಿದ ವಿಡಿಯೊಗಳನ್ನು ತೋರಿಸುತ್ತವೆ. ಬ್ರೋವರ್ಡ್ ಕೌಂಟಿಯ ಸಮೀಪವಿರುವ ಪ್ರದೇಶಗಳಲ್ಲಿ ಸಣ್ಣ ವಿಮಾನಗಳು ಮಗುಚಿದ್ದು ಚಂಡಮಾರುತ ಬಗ್ಗ ಎಚ್ಚರಿಕೆಯನ್ನು ನೀಡಲಾಯಿತು ಎಂದು ಸಿಬಿಎಸ್ ಮಿಯಾಮಿ ವರದಿ ಮಾಡಿದೆ.
ಫ್ಲೋರಿಡಾದ ತುರ್ತು ನಿರ್ವಹಣಾ ನಿರ್ದೇಶಕ ಕೆವಿನ್ ಗುತ್ರೀ ಅವರು ಮಂಗಳವಾರ ಸುರಕ್ಷಿತ ಸ್ಥಳಗಳಿಗೆ ತೆರಳಲು ನಿವಾಸಿಗಳನ್ನು ಒತ್ತಾಯಿಸಿದರು. “ತೆರವು ಮಾಡುವ ಸಮಯ ಇದು. ಸ್ಥಳಾಂತರಿಸುವಿಕೆಯನ್ನು ಸರಾಗಗೊಳಿಸುವ ಸಲುವಾಗಿ, ಅಧಿಕಾರಿಗಳು ಸೆಂಟ್ರಲ್ ಫ್ಲೋರಿಡಾದ ಪ್ರಮುಖ ಹೆದ್ದಾರಿಗಳು, ಟ್ಯಾಂಪಾ ಬೇ ಪ್ರದೇಶ ಮತ್ತು ಅಲಿಗೇಟರ್ ಅಲ್ಲೆ ಎಂದು ಕರೆಯಲ್ಪಡುವ ಎವರ್‌ಗ್ಲೇಡ್ಸ್‌ನ ಅಂತರರಾಜ್ಯ ವಿಸ್ತರಣೆಯ ಉದ್ದಕ್ಕೂ ಟೋಲ್ ಸಂಗ್ರಹವನ್ನು ಸ್ಥಗಿತಗೊಳಿಸಿದ್ದಾರೆ ಎಂದು ರಾಯಿಟರ್ಸ್‌ನ ವರದಿ ಮಾಡಿದೆ.
ಸಿಎನ್ಎನ್ ಪ್ರಕಾರ, ಪಿನೆಲ್ಲಾಸ್ ಕೌಂಟಿಯಲ್ಲಿ, 440,000 ಕ್ಕೂ ಹೆಚ್ಚು ಜನರು ಕಡ್ಡಾಯವಾಗಿ ಸ್ಥಳಾಂತರಿಸಲು ಆದೇಶ ನೀಡಲಾಗಿದೆ ಎಂದು ಕ್ಲಿಯರ್‌ವಾಟರ್ ಮೇಯರ್ ಫ್ರಾಂಕ್ ಹಿಬಾರ್ಡ್ ಹೇಳಿದ್ದಾರೆ. ಚಂಡಮಾರುತದ ಭೀತಿಯಿಂದಾಗಿ ಜಾರ್ಜಿಯಾ ಗವರ್ನರ್ ಬ್ರಿಯಾನ್ ಕೆಂಪ್ ಅವರು ಮಂಗಳವಾರ ತುರ್ತು ಪರಿಸ್ಥಿತಿಯನ್ನು ಹೊರಡಿಸಿದ್ದಾರೆ, ವಾರದ ನಂತರ ರಾಜ್ಯದಲ್ಲಿ ಭಾರೀ ಮಳೆ ಮತ್ತು ಕ ಗಾಳಿಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ ಎಂದು ಸಿಎನ್ಎನ್ ವರದಿ ಮಾಡಿದೆ.
ಏತನ್ಮಧ್ಯೆ, ರಾಜ್ಯದಾದ್ಯಂತ ವಿಮಾನಗಳನ್ನು ರದ್ದುಗೊಳಿಸಲಾಯಿತು ಮತ್ತು ಶಾಲೆಗಳನ್ನು ಮುಚ್ಚಲಾಗಿದೆ . ಟ್ಯಾಂಪಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು 5 ಗಂಟೆಗೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿತು. ಒರ್ಲ್ಯಾಂಡೊ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಬುಧವಾರ ಬೆಳಿಗ್ಗೆ 10:30 ಕ್ಕೆ ಅದೇ ರೀತಿ ಮಾಡಲು ನಿರ್ಧರಿಸಲಾಗಿದೆ ಎಂದು ಸಿಎನ್‌ಎನ್ ಹೇಳಿದೆ.