ನೇಪಾಳದ ಪೋಖರಾ ವಿಮಾನ ನಿಲ್ದಾಣದಲ್ಲಿ 72 ಪ್ರಯಾಣಿಕರಿದ್ದ ವಿಮಾನ ಪತನಗೊಂಡಿದೆ. ಏತಿ ಏರ್ಲೈನ್ಸ್ ನಿರ್ವಹಿಸುತ್ತಿದ್ದ ಎಟಿಆರ್-72 ವಿಮಾನವು ಕಸ್ಕಿ ಜಿಲ್ಲೆಯ ಪೋಖರಾದಲ್ಲಿ ಭಾನುವಾರ ಪತನಗೊಂಡಿದ್ದು, ಕನಿಷ್ಠ 13 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದು ಹಲವರು ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ರಕ್ಷಣಾ ಕಾರ್ಯ ಮುಂದುವರೆದಿದೆ, ವಿಮಾನದಲ್ಲಿ 68 ಪ್ರಯಾಣಿಕರು ಹಾಗೂ 4 ಸಿಬ್ಬಂದಿ ಇದ್ದರು. ಅಪಘಾತದ ಸ್ಥಳದಲ್ಲಿ 40 ಮೃತದೇಹಗಳು ಕಂಡುಬಂದಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಅಪಘಾತಕ್ಕೆ ಕಾರಣವೇನೆಂಬುದು ಇನ್ನೂ ತಿಳಿದುಬಂದಿಲ್ಲ.
ವಿಮಾನದಲ್ಲಿ 5 ಮಂದಿ ಭಾರತೀಯರು ಕೂಡ ಪ್ರಯಾಣಿಸುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ. ಇದುವರೆಗೆ 40 ಮಂದಿಯ ಮೃತದೇಹ ಪತ್ತೆಯಾಗಿದೆ ಎಂದು ಹೇಳಲಾಗಿತ್ತು ಆದರೆ ಇದೀಗ ಎಲ್ಲರೂ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ವಿಮಾನ ಪತನದ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದ್ದು, ಭಾರಿ ಬೆಂಕಿಗೆ ವಿಮಾನ ಧಗಧಗ ಉರಿಯುತ್ತಿರುವುದನ್ನು ಕಾಣಬಹುದು, ಇದೇ ಸಮಯದಲ್ಲಿ ಸುತ್ತ ಸಾಕಷ್ಟು ಜನರು ನೆರೆದಿದ್ದು, ರಕ್ಷಣಾ ಪಡೆಗಳು ವಿಮಾನದಲ್ಲಿದ್ದವರ ಪ್ರಾಣವುಳಿಸಲು ಪ್ರಯತ್ನಿಸುತ್ತಿವೆ.
ನೇಪಾಳದ ವಿಮಾನೋದ್ಯಮವು ಇತ್ತೀಚೆಗೆ ಪ್ರಗತಿಯಾಗುತ್ತಿದೆ. ನೇಪಾಳದ ದುರ್ಗಮ ಪ್ರದೇಶಗಳಿಗೆ ಜನರು ಮತ್ತು ಸರಕುಗಳನ್ನು ಸಾಗಿಸಲು ಇಲ್ಲಿನ ವಿಮಾನಗಳು ಹೆಚ್ಚಾಗಿ ಬಳಸುತ್ತಿವೆ. ನೇಪಾಳಿಗರು ಮಾತ್ರವಲ್ಲದೆ ವಿದೇಶಿಗರು ಅಲ್ಲಿನ ವಿಮಾನಗಳನ್ನು ಬಳಸುತ್ತಿದ್ದಾರೆ.ಆದರೆ, ಸೂಕ್ತ ನಿರ್ವಹಣೆ ಕೊರತೆ ಮತ್ತು ತರಬೇತಿ ಕೊರತೆಯನ್ನೂ ಅಲ್ಲಿನ ವೈಮಾನಿಕ ಕ್ಷೇತ್ರ ಅನುಭವಿಸುತ್ತಿದೆ.
ಬೆಂಕಿ ಮತ್ತು ಅಪಘಾತದ ತೀವ್ರತೆ ಗಮನಿಸಿದರೆ ವಿಮಾನದಲ್ಲಿದ್ದವರ ಸ್ಥಿತಿ ಏನಾಗಿರಬಹುದು ಎಂಬ ಆತಂಕ ವ್ಯಕ್ತವಾಗಿದೆ. ಕೆಲವೊಂದು ವರದಿಗಳು ವಿಮಾನದಲ್ಲಿರುವ ಎಲ್ಲರೂ ಮೃತಪಟ್ಟಿರುವ ಶಂಕೆ ಇದೆ ಎಂದು ಹೇಳಲಾಗಿತ್ತು.
ನೇಪಾಳ ವಿಮಾನ ದುರಂತದಲ್ಲಿ 72 ಪ್ರಯಾಣಿಕರು ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಏತಿ ವಿಮಾನಯಾನ ಸಂಸ್ಥೆಯಿಂದ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
37 ಪುರುಷರು, 25 ಮಹಿಳೆಯರು, 3 ಹಸುಳೆಗಳು, 3 ಮಕ್ಕಳು ಮೃತಪಟ್ಟಿದ್ದಾರೆ, ಏತಿ ಏರ್ಲೈನ್ಸ್ನ ನಾಲ್ವರು ಸಿಬ್ಬಂದಿ ಸೇರಿ 72 ಜನರು ಮೃತಪಟ್ಟಿದ್ದಾರೆ.
ಐವರು ಭಾರತೀಯರು, ನೇಪಾಳದ 53 ಪ್ರಯಾಣಿಕರು ಮೃತಪಟ್ಟಿದ್ದಾರೆ, ರಷ್ಯಾದ ನಾಲ್ವರು ಪ್ರಜೆಗಳು, ಕೊರಿಯಾದ 12 ಪ್ರಜೆಗಳು, ಅರ್ಜೆಂಟೀನಾದ ಓರ್ವ, ಆಸ್ಟ್ರೇಲಿಯಾದ ಓರ್ವ, ಐರ್ಲೆಂಡ್, ಫ್ರಾನ್ಸ್ ದೇಶಗಳ ತಲಾ ಓರ್ವ ಪ್ರಜೆ ಸಾವನ್ನಪ್ಪಿದ್ದಾರೆ.
ಏತಿ ಏರ್ಲೈನ್ಸ್ ಸಿಬ್ಬಂದಿ ಕೆ.ಸಿ.ಕಮಲ್, ಅಂಜು ಖತಿವಾಡ, ಸೃಷ್ಟಿ ಹಾಂಗ್ಚುನ್, ಒಸಿನ್ ಅಲೆ ಮಗರ್ ಮೃತಪಟ್ಟಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:33 am, Sun, 15 January 23