Nepal Plane Crash: ನೇಪಾಳ ವಿಮಾನ ದುರಂತದಲ್ಲಿ ಎಲ್ಲಾ ಪ್ರಯಾಣಿಕರ ಸಾವು, 5 ಸದಸ್ಯರ ತನಿಖಾ ಆಯೋಗ ರಚನೆ
ಕಠ್ಮಂಡುವಿನಿಂದ ಪೋಖರಾ ಕಡೆಗೆ ತೆರಳುತ್ತಿದ್ದ ಯೇತಿ ಏರ್‌ಲೈನ್ಸ್ (Yeti Airlines)ಗೆ ಸೇರಿದ ಎರಡು ಎಂಜಿನ್‌ನ ಎಟಿಆರ್ 72 ವಿಮಾನದಲ್ಲಿ ಸುಮಾರು 68 ಪ್ರಯಾಣಿಕರಿದ್ದರು. ಹಾಗೂ ನಾಲ್ವರು ಸಿಬ್ಬಂದಿ ಪ್ರಯಾಣಿಸುತ್ತಿದ್ದರು.
ಕಠ್ಮಂಡು: ನೇಪಾಳದ ಪೋಖರಾದಲ್ಲಿ ಭಾನುವಾರ ಬೆಳಿಗ್ಗೆ ಭೀಕರ ವಿಮಾನ ಅಪಘಾತವೊಂದು ಸಂಭವಿಸಿದ್ದು ಅದರಲ್ಲಿ ಪ್ರಯಾಣಿಸುತ್ತಿದ್ದ ಅಷ್ಟೂ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕಠ್ಮಂಡುವಿನಿಂದ ಪೋಖರಾ ಕಡೆಗೆ ತೆರಳುತ್ತಿದ್ದ ಯೇತಿ ಏರ್‌ಲೈನ್ಸ್ (Yeti Airlines)ಗೆ ಸೇರಿದ ಎರಡು ಎಂಜಿನ್‌ನ ಎಟಿಆರ್ 72 ವಿಮಾನದಲ್ಲಿ ಸುಮಾರು 68 ಪ್ರಯಾಣಿಕರಿದ್ದರು. ಹಾಗೂ ನಾಲ್ವರು ಸಿಬ್ಬಂದಿ ಪ್ರಯಾಣಿಸುತ್ತಿದ್ದರು. ವಿಮಾನ ಅಪಘಾತಕ್ಕೀಡಾಗಿ ಅಷ್ಟೂ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಈ ವಿಮಾನದಲ್ಲಿ 53 ನೇಪಾಳಿಗಳು, 5 ಭಾರತೀಯರು, 4 ರಷ್ಯನ್ನರು, ಒಬ್ಬ ಐರಿಶ್, 2 ಕೊರಿಯನ್ನರು, 1 ಅರ್ಜೆಂಟೀನಾದ ಪ್ರಜೆ ಮತ್ತು ಒಬ್ಬ ಫ್ರೆಂಚ್ ಪ್ರಜೆ ವಿಮಾನದಲ್ಲಿದ್ದರು ಎಂದು ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ. ವಿಮಾನವು ಕಠ್ಮಂಡುವಿನಿಂದ ಪೊಖರಾಗೆ ತೆರಳುತ್ತಿತ್ತು. ಭಾನುವಾರ ಬೆಳಗ್ಗೆ 10:33ಕ್ಕೆ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನ ಟೇಕಾಫ್ ಆಗಿತ್ತು. ವಿಮಾನವು ಟೇಕ್ ಆಫ್ ಆದ ಸುಮಾರು 20 ನಿಮಿಷಗಳಲ್ಲೇ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ 5 ಭಾರತೀಯರ ಸಾವು
ಈ ದುರಂತದಲ್ಲಿ 5 ಭಾರತೀಯರು ಸಾವನ್ನಪ್ಪಿದ್ದಾರೆ. ಮೃತ ಭಾರತೀಯ ಪ್ರಜೆಗಳನ್ನು ಅಭಿಷೇಕ್ ಕುಶ್ವಾಹ, ಬಿಶಾಲ್ ಶರ್ಮಾ, ಅನಿಲ್ ಕುಮಾರ್ ರಾಜ್‌ಭರ್, ಸೋನು ಜೈಸ್ವಾಲ್ ಮತ್ತು ಸಂಜಯ ಜೈಸ್ವಾಲ್ ಎಂದು ಗುರುತಿಸಲಾಗಿದೆ ಎಂದು ಯೇತಿ ಏರ್‌ಲೈನ್ಸ್ ಅಧಿಕಾರಿ ತಿಳಿಸಿದ್ದಾರೆ. “ಇದು ಅತ್ಯಂತ ದುರದೃಷ್ಟಕರ ಘಟನೆ ಎಂದು ಭಾರತದ ನೇಪಾಳ ರಾಯಭಾರಿ ಶಂಕರ್ ಪಿ ಶರ್ಮಾ ಸಂತಾಪ ಸೂಚಿಸಿದ್ದಾರೆ.
ಘಟನೆಗೆ ಕಾರಣವೇನು?
ನಾಗರಿಕ ವಿಮಾನಯಾನ ಪ್ರಾಧಿಕಾರದ ಪ್ರಕಾರ, ಲ್ಯಾಂಡಿಂಗ್ ಮೊದಲು ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗುತ್ತಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ತಾಂತ್ರಿಕ ದೋಷದಿಂದ ಅಪಘಾತ ಸಂಭವಿಸಿದೆ ಎಂದು ನೇಪಾಳ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಪೈಲಟ್ ಏರ್ ಟ್ರಾಫಿಕ್ ಕಂಟ್ರೋಲ್ (ಎಟಿಸಿ) ಯಿಂದ ಲ್ಯಾಂಡಿಂಗ್‌ಗೆ ಅನುಮತಿ ಪಡೆದರು ಮತ್ತು ಅದಕ್ಕೆ ಒಪ್ಪಿಗೆ ನೀಡಲಾಯಿತು. ಯೇತಿ ಏರ್‌ಲೈನ್ಸ್ ವಿಮಾನ ದುರಂತದ ಕುರಿತು ತನಿಖೆ ನಡೆಸಲು 5 ಸದಸ್ಯರ ತನಿಖಾ ಆಯೋಗವನ್ನು ರಚಿಸಲಾಗಿದೆ.
ಗಣ್ಯರಿಂದ ಸಂತಾಪ
ನೇಪಾಳ ಪ್ರಧಾನಿ, ಭಾರತದ ನಾಗರಿಕ ವಿಮಾನಯಾನ ಸಚಿವರು ಘಟನೆ ಸಂಬಂಧ ಸಂತಾಪ ವ್ಯಕ್ತಪಡಿಸಿದ್ದಾರೆ. ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಲ್ (ಪ್ರಚಂಡ) ಅವರು ಈ ದುರದೃಷ್ಟಕರ ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ್ದಾರೆ ಮತ್ತು “ಪ್ರಯಾಣಿಕರೊಂದಿಗೆ ಕಠ್ಮಂಡುವಿನಿಂದ ಪೋಖರಾಗೆ ಹಾರುತ್ತಿದ್ದ ಯೇತಿ ಏರ್‌ಲೈನ್ಸ್ ಎಎನ್‌ಸಿ ಎಟಿಆರ್ 72 ರ ದುರಂತ ಅಪಘಾತದಿಂದ ನಾನು ತುಂಬಾ ದುಃಖಿತನಾಗಿದ್ದೇನೆ. ಭದ್ರತಾ ಸಿಬ್ಬಂದಿ, ನೇಪಾಳ ಸರ್ಕಾರದ ಎಲ್ಲಾ ಏಜೆನ್ಸಿಗಳು ಮತ್ತು ಸಾರ್ವಜನಿಕರಿಗೆ ರಕ್ಷಣೆಯನ್ನು ಪ್ರಾರಂಭಿಸಲು ನಾನು ಪ್ರಾಮಾಣಿಕವಾಗಿ ಮನವಿ ಮಾಡುತ್ತೇನೆ ಎಂದಿದ್ದಾರೆ. ಹಾಗೂ ಭಾರತದ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಕೂಡ ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. “ನೇಪಾಳದಲ್ಲಿ ಸಂಭವಿಸಿದ ದುರಂತ ವಿಮಾನ ಅಪಘಾತದಲ್ಲಿ ಜೀವಹಾನಿ ಅತ್ಯಂತ ದುರದೃಷ್ಟಕರ. ನನ್ನ ಆಲೋಚನೆಗಳು ಮತ್ತು ಪ್ರಾರ್ಥನೆಗಳು ದುಃಖಿತರ ಕುಟುಂಬಗಳೊಂದಿಗೆ ಇವೆ. ಓಂ ಶಾಂತಿ.” ಎಂದು ಟ್ವೀಟ್ ಮಾಡಿದ್ದಾರೆ.
The loss of lives in a tragic plane crash in Nepal is extremely unfortunate. My thoughts & prayers are with the families of the bereaved. Om Shanti.
— Jyotiraditya M. Scindia (@JM_Scindia) January 15, 2023
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ