ಅಮೆರಿಕದಲ್ಲಿ ಅಧ್ಯಕ್ಷ ಬೈಡನ್​-ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ ನಡುವೆ ಭಿನ್ನಾಭಿಪ್ರಾಯ !; ವೈಯಕ್ತಿಕ ಸ್ಪರ್ಧೆಗೆ ಬಿದ್ದರಾ ನಾಯಕರು?

|

Updated on: Nov 16, 2021 | 8:08 PM

ಆಗಸ್ಟ್​​ನಲ್ಲಿ ಅಫ್ಘಾನಿಸ್ತಾನದಿಂದ ಯುಎಸ್​ ತನ್ನ ಸೇನೆಯನ್ನು ಸಂಪೂರ್ಣವಾಗಿ ವಾಪಸ್​ ಪಡೆಯಿತು. ಆದರೆ ಈ ವಿಚಾರದ ಬಗ್ಗೆ ನನ್ನೊಂದಿಗೆ ಸರಿಯಾಗಿ ಸಮಾಲೋಚನೆ ನಡೆಸಲಿಲ್ಲ ಎಂದು ಕಮಲಾ ಹ್ಯಾರಿಸ್​ ಹೇಳಿದ್ದಾಗಿ ತಿಳಿದುಬಂದಿದೆ.

ಅಮೆರಿಕದಲ್ಲಿ ಅಧ್ಯಕ್ಷ ಬೈಡನ್​-ಉಪಾಧ್ಯಕ್ಷೆ ಕಮಲಾ ಹ್ಯಾರಿಸ್​ ನಡುವೆ ಭಿನ್ನಾಭಿಪ್ರಾಯ !; ವೈಯಕ್ತಿಕ ಸ್ಪರ್ಧೆಗೆ ಬಿದ್ದರಾ ನಾಯಕರು?
ಜೋ ಬೈಡನ್​ ಮತ್ತು ಕಮಲಾ ಹ್ಯಾರಿಸ್​
Follow us on

ಯುಎಸ್​ನ ಉಪಾಧ್ಯಕ್ಷ ಸ್ಥಾನಕ್ಕೆ ಏರುವ ಮೂಲಕ ಇತಿಹಾಸ ಸೃಷ್ಟಿಸಿದ್ದ ಕಮಲಾ ಹ್ಯಾರಿಸ್​ ಮತ್ತು ಅಧ್ಯಕ್ಷ ಜೋ ಬೈಡನ್​ ನಡುವೆ ಭಿನ್ನಾಭಿಪ್ರಾಯ ಭುಗಿಲೆದ್ದಿದೆಯಾ ಎಂಬುದೊಂದು ಅನುಮಾನ ಹುಟ್ಟುಹಾಕುವಂತ ವರದಿಯನ್ನು ಸಿಎನ್​ಎನ್​ ಅಂತಾರಾಷ್ಟ್ರೀಯ ಮಾಧ್ಯಮ ಪ್ರಕಟ ಮಾಡಿದೆ. ಹ್ಯಾರಿಸ್ ಸಾರ್ವಜನಿಕರೊಂದಿಗೆ ಸಂಪರ್ಕ ಬೆಳೆಸಿಕೊಂಡಿದ್ದಾರೆ. ಈ ಮೂಲಕ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತ ಹ್ಯಾರಿಸ್​ ತಮ್ಮ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇದರಿಂದ ಅಧ್ಯಕ್ಷ ಜೋ ಬೈಡನ್​ ತಂಡ ಹತಾಶೆಗೆ ಒಳಗಾಗಿದ್ದು, ಬೇಕಂತಲೇ ಆಡಳಿತ ವಿಷಯದಲ್ಲಿ ಕಮಲಾ ಹ್ಯಾರಿಸ್​​ ಮತ್ತು ಅವರ ತಂಡದ ಸಿಬ್ಬಂದಿಯನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಉಪಾಧ್ಯಕ್ಷೆ ಹ್ಯಾರಿಸ್​ ಬೆಂಬಲಿಗರು, ಅವರ ಆಪ್ತರು ಆರೋಪ ಮಾಡುತ್ತಿದ್ದಾರೆ ಎಂದು ಸಿಎನ್​ಎನ್​ ವರದಿಯಲ್ಲಿ ಉಲ್ಲೇಖಿಸಿದೆ. 

ಬೈಡನ್​ ಮತ್ತು ಹ್ಯಾರಿಸ್​ ತಂಡದ ನಡುವೆ ಅಂತರ ಶುರುವಾಗಿದೆ ಎಂಬ ಬಗ್ಗೆ ಅಮೆರಿಕ ಶ್ವೇತಭವನದ ಸಿಬ್ಬಂದಿಯೇ ಮಾಹಿತಿ ಬಹಿರಂಗಪಡಿಸಿದ್ದಾಗಿ ಸಿಎನ್​ಎನ್​ ತನ್ನ ಸುದೀರ್ಘ ಲೇಖನದಲ್ಲಿ ಹೇಳಿದೆ.  ಸಣ್ಣಪುಟ್ಟ ಕಿರಿಕಿರಿಗಳು ಹೆಚ್ಚುತ್ತಿವೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದೂ ವೈಟ್​ಹೌಸ್​ ಸಿಬ್ಬಂದಿ ಹೇಳಿಕೊಂಡಿದ್ದಾರೆ. ಈ ಮಧ್ಯೆ ಶ್ವೇತ ಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಪ್ಸಾಕಿ ಟ್ವೀಟ್​ ವೈರಲ್​ ಆಗುತ್ತಿದೆ. ಅದರಲ್ಲಿ ಅವರು, ಉಪಾಧ್ಯಕ್ಷರು ಕೇವಲ ಆಡಳಿತದ ವಿಚಾರದಲ್ಲಿ ಪ್ರಮುಖ ಪಾಲುದಾರರಷ್ಟೇ ಅಲ್ಲ.  ದೇಶದಲ್ಲಿರುವ ಮತದಾನದ ಹಕ್ಕು, ವಲಸೆ ಸಮಸ್ಯೆಗಳಂಥ ಸವಾಲುಗಳನ್ನು ಎದುರಿಸಲು ಸಿದ್ಧರಾಗಿರುವ ದಿಟ್ಟ ನಾಯಕರೂ ಹೌದು ಎಂದು ಹೇಳಿಕೊಂಡಿದ್ದಾರೆ. ಹೀಗೆ ಉಪಾಧ್ಯಕ್ಷರನ್ನು ಸಮರ್ಥನೆ ಮಾಡಿಕೊಳ್ಳುವ ಈ ಟ್ವೀಟ್​, ಬೈಡನ್​ ಮತ್ತು ಹ್ಯಾರಿಸ್​ ನಡುವಿನ ಆಂತರಿಕ ಸ್ಪರ್ಧೆಗೆ ಪುಷ್ಟಿ ನೀಡುವಂತಿದೆ.

ಅಫ್ಘಾನ್​ ವಿಚಾರದಲ್ಲಿ ನಿರ್ಲಕ್ಷ್ಯ
ಆಗಸ್ಟ್​​ನಲ್ಲಿ ಅಫ್ಘಾನಿಸ್ತಾನದಿಂದ ಯುಎಸ್​ ತನ್ನ ಸೇನೆಯನ್ನು ಸಂಪೂರ್ಣವಾಗಿ ವಾಪಸ್​ ಪಡೆಯಿತು. ಆದರೆ ಈ ವಿಚಾರದ ಬಗ್ಗೆ ನನ್ನೊಂದಿಗೆ ಸರಿಯಾಗಿ ಸಮಾಲೋಚನೆ ನಡೆಸಲಿಲ್ಲ ಎಂದು ಕಮಲಾ ಹ್ಯಾರಿಸ್​ ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬಂದಿದೆ. ಮುಂದಿನ ಅವಧಿಗೆ ಅಧ್ಯಕ್ಷೆಯಾಗಲು ಕಮಲಾ ಹ್ಯಾರಿಸ್ ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ಅಧ್ಯಕ್ಷ ಜೋ ಬೈಡನ್​ ಮತ್ತು ತಂಡಕ್ಕೆ ಇದು ಸಹ್ಯವಾಗುತ್ತಿಲ್ಲ ಎಂಬ ಮಾತುಗಳು ಶ್ವೇತಭವನದಿಂದ ಕೇಳಿಬರುತ್ತಿದೆ.

ಇದನ್ನೂ ಓದಿ: ‘ನನ್ನ ತಮ್ಮನಿಗೆ ನನ್ನದೇ ದೃಷ್ಟಿ ಬಿತ್ತೇನೋ ಅನಿಸುತ್ತಿದೆ’; ‘ಪುನೀತ ನಮನ’ದಲ್ಲಿ ಅಳುತ್ತಲೇ ಮಾತನಾಡಿದ ಶಿವಣ್ಣ