ಇಸ್ಲಾಮಾಬಾದ್, ಮಾರ್ಚ್ 10: ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಪಕ್ಷದ ಸಹ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ (Asif Ali Zardari) ಇಂದು ಭಾನುವಾರ ಪಾಕಿಸ್ತಾನದ 14ನೇ ಅಧ್ಯಕ್ಷರಾಗಿ ಪ್ರಮಾಣವಚನ (oath taking ceremony) ಸ್ವೀಕರಿಸಿದ್ದಾರೆ. ನಿನ್ನೆ ಪಾಕಿಸ್ತಾನದ ಎಲ್ಲಾ ಸಂಸದರು, ಶಾಸಕರು ಸೇರಿ ಬಹುಮತದಿಂದ ಜರ್ದಾರಿ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ್ದರು. ಅಸಿಫ್ ಅಲಿ ಜರ್ದಾರಿ 411 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ಮೆಹಮೂದ್ ಖಾನ್ ಅಚಕ್ಝೈ (Mehboob Khan Achakzai) ಅವರಿಗೆ 181 ವೋಟು ಲಭಿಸಿತು. ಮೆಹಮೂದ್ ಖಾನ್ ಅವರು ಇಮ್ರಾನ್ ಖಾನ್ ಅವರ ಪಿಟಿಐ ಪಕ್ಷದ ಬೆಂಬಲದಿಂದ ಸ್ಪರ್ಧಿಸಿದ್ದರು. ತಮ್ಮ ಪ್ರತಿಸ್ಪರ್ಧಿ ವಿರುದ್ಧ ಎರಡು ಪಟ್ಟಿಗೂ ಹೆಚ್ಚು ಮತಗಳ ಅಂತರದಿಂದ ಗೆದ್ದ ಜರ್ದಾರಿ ಪಾಕಿಸ್ತಾನದ 14ನೇ ಅಧ್ಯಕ್ಷರಾಗಿದ್ದಾರೆ.
ಇಸ್ಲಾಮಾಬಾದ್ನ ಅಧ್ಯಕ್ಷೀಯ ಭವನವಾದ ಏವನ್-ಎ-ಸದರ್ನಲ್ಲಿ ಭಾನುವಾರ ಸಂಜೆ 4ಕ್ಕೆ ನಡೆದ ಸಮಾರಂಭದಲ್ಲಿ ಪಾಕಿಸ್ತಾನದ ಮುಖ್ಯನ್ಯಾಯಮೂರ್ತಿ ಖಾಜಿ ಫೇಜ್ ಇಸಾ ಅವರು ಪ್ರಮಾಣವಚನ ಬೋಧಿಸಿದ್ದಾರೆ. ಪಾಕಿಸ್ತಾನ ಪ್ರಧಾನಿ ಶಹಬಾಜ್ ಶರೀಫ್, ಪಾಕಿಸ್ತಾನದ ವಿವಿಧ ಸೇನಾ ಮುಖ್ಯಸ್ಥರು, ನಾಲ್ಕು ಪ್ರಾಂತ್ಯಗಳ ರಾಜ್ಯಪಾಲರು, ಮುಖ್ಯಮಂತ್ರಿಗಳು ಮೊದಲಾದವರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಇದನ್ನೂ ಓದಿ: ಖಲಿಸ್ತಾನಿ ಬೆಂಬಲಿಗರ 300ಕ್ಕೂ ಹೆಚ್ಚು ಬ್ಯಾಂಕ್ ಖಾತೆ ವಶಪಡಿಸಿಕೊಂಡ ರಿಷಿ ಸುನಕ್ ಸರ್ಕಾರ
ಅಸಿಫ್ ಅಲಿ ಜರ್ದಾರಿ ಅವರು ಪಾಕಿಸ್ತಾನದ ಮಾಜಿ ಪ್ರಧಾನಿ, ದಿವಂಗತೆ ಬೇನಜೀರ್ ಭುಟ್ಟೋ ಅವರ ಪತಿ. ಇವರ ಮಗ ಬಿಲಾವಲ್ ಭುಟ್ಟೋ ಹಿಂದಿನ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದರು. ಬಿಲಾವಲ್ ಅವರನ್ನು ಭವಿಷ್ಯದ ಪ್ರಧಾನಿ ಎಂದು ಪರಿಗಣಿಸಲಾಗಿದೆ.
1955ರಲ್ಲಿ ಜನಿಸಿದ ಅಸಿಫ್ ಅಲಿ ಜರ್ದಾರಿ ಅವರು 2008ರಿಂದ 2013ರವರೆಗೆ ಪಾಕಿಸ್ತಾನದ 11ನೇ ಅಧ್ಯಕ್ಷರಾಗಿದ್ದರು. ಹತ್ತು ವರ್ಷದ ಬಳಿಕ ಈಗ ಮತ್ತೊಮ್ಮೆ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ.
ಇದನ್ನೂ ಓದಿ: ರಷ್ಯಾ ಸೇನೆಯಲ್ಲಿ ಕೆಲಸ ಮಾಡುತ್ತಿರುವ ಭಾರತೀಯರ ಶೀಘ್ರ ಬಿಡುಗಡೆ : ಕೇಂದ್ರ ಸರ್ಕಾರ
ಜರ್ದಾರಿ ವಿರುದ್ದ ಬಹಳಷ್ಟು ಕ್ರಿಮಿನಲ್ ಕೇಸ್ಗಳಿದ್ದು, 11 ವರ್ಷ ಜೈಲುವಾಸ ಕೂಡ ಅನುಭವಿಸಿದ್ದಾರೆ. ಆದರೆ, ಯಾವ ಪ್ರಕರಣದಲ್ಲೂ ಅವರು ದೋಷಿ ಎಂಬುದು ಸಾಬೀತಾಗಿಲ್ಲ. ಸತತವಾಗಿ ಆರೋಪ, ನಿಂದನೆಗಳಿಂದ ಹೊಡೆತ ತಿನ್ನುತ್ತಾ ಬಂದಿರುವ ಜರ್ದಾರಿ ಅವರು ಕ್ಲಿಷ್ಟ ಸಂದರ್ಭಗಳನ್ನು ಬಹಳ ಸಂಯಮದಿಂದ ನಿಭಾಯಿಸುವ ಚಾಕಚಕ್ಯತೆ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಅಧ್ಯಕ್ಷರಾಗಿ ಅವರಿಂದ ಪಾಕಿಸ್ತಾನಿಗರು ಬಹಳ ನಿರೀಕ್ಷೆ ಇಟ್ಟುಕೊಂಡಿರಬಹುದು.
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ