
ಢಾಕಾ, ಡಿಸೆಂಬರ್ 24: ಬಾಂಗ್ಲಾದೇಶ ಹೊತ್ತಿ ಉರಿಯುವುದು ಮುಂದುವರಿದಿದೆ. ಅದರ ರಾಜಧಾನಿ ಢಾಕಾದ ಮೋಘಬಜಾರ್ ಪ್ರದೇಶದಲ್ಲಿ ಬುಧವಾರ ಸಂಜೆ ಬಾಂಬ್ ದಾಳಿಯಾಗಿದೆ. ಇಲ್ಲಿಯ ಫ್ಲೈಓವರ್ ಮೇಲಿಂದ ಅಪರಿಚಿತ ದುಷ್ಕರ್ಮಿಗಳು ಕಚ್ಛಾ ಬಾಂಬ್ (crude bomb blast) ಅನ್ನು ಎಸೆದಿದ್ದಾರೆ. ಕೆಳಗೆ ರಸ್ತೆಬದಿಯಲ್ಲಿ ಚಹಾ ಕುಡಿಯುತ್ತಿದ್ದ ವ್ಯಕ್ತಿಯ ತಲೆ ಮೇಲೆ ಬಾಂಬ್ ಬಿದ್ದು ಸ್ಫೋಟಗೊಂಡಿದೆ. ಪರಿಣಾಮವಾಗಿ, ಆ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬುಧವಾರ ಸಂಜೆ 7 ಗಂಟೆಗೆ ಈ ಘಟನೆ ಸಂಭವಿಸಿರುವುದು ತಿಳಿದುಬಂದಿದೆ. ಬಾಂಬ್ಗೆ ಬಲಿಯಾದ ವ್ಯಕ್ತಿ 21 ವರ್ಷದ ಯುವಕ ಸೈಫುಲ್ ಎಂದು ಗುರುತಿಸಲಾಗಿದೆ.
‘ರಸ್ತೆಬದಿ ಅಂಗಡಿಯಲ್ಲಿ ಸೈಫೂಲ್ ಚಹಾ ಸೇವಿಸುತ್ತಿದ್ದಾಗ, ಫ್ಲೈ ಓವರ್ ಮೇಲಿಂದ ಎಸೆಯಲಾದ ಕಚ್ಛಾ ಬಾಂಬ್ ಆತನ ಮೇಲೆ ಬಿದ್ದಿದೆ. ತಲೆಗೆ ತೀವ್ರ ಪೆಟ್ಟು ಬಿದ್ದು ವಿಪರೀತ ರಕ್ತ ಸ್ರಾವವವಾಗಿ ಆತ ಸ್ಥಳದಲ್ಲೇ ಮೃತಪಟ್ಟಿರುತ್ತಾನೆ’ ಎಂದು ಢಾಕಾದ ಹಾತಿರ್ಜೀಲ್ ಪೊಲೀಸ್ ಸ್ಟೇಷನ್ ಇನ್ಸ್ಪೆಕ್ಟರ್ ಹೇಳಿದ್ದಾರೆ.
ಇದನ್ನೂ ಓದಿ: ಬಾಂಗ್ಲಾದೇಶ ಮಾರ್ಗದ ಮೂಲಕ ಭಾರತಕ್ಕೆ ಉಗ್ರರನ್ನು ನುಸುಳಿಸಲು ಪಾಕಿಸ್ತಾನ ಪ್ಲಾನ್
ಬಾಂಬ್ ನೇರವಾಗಿ ತಲೆಗೆ ಬಡಿದು ಸ್ಫೋಟಗೊಂಡಿದ್ದರಿಂದ ಸೈಫುಲ್ನ ತಲೆಯಿಂದ ಮಿದುಳು ಹೊರಬಂದು ಎಲ್ಲೆಡೆ ಚೆಲ್ಲಾಪಿಲ್ಲಿಯಾಗಿತ್ತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಭಯಾನಕ ದೃಶ್ಯವನ್ನು ಬಣ್ಣಿಸಿದ್ದಾರೆ. ಬಾಂಬ್ ಬಿದ್ಧ ಜಾಗವು 1971ರ ಬಾಂಗ್ಲಾ ಮುಕ್ತಿ ಹೋರಾಟಗಾರರ ಕಚೇರಿಗೆ ಸಮೀಪ ಇದೆ ಎನ್ನಲಾಗಿದೆ.
ಕಳೆದ ವರ್ಷ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆಗಳಿಂದ ಶುರುವಾದ ಹೋರಾಟ, ದಂಗೆ, ಹಿಂಸಾಚಾರ ಇವತ್ತು ಆ ದೇಶದಲ್ಲಿ ರಕ್ತಪಾತ ತೀರಾ ಸಾಮಾನ್ಯವಾಗಿಸಿದೆ. ಪ್ರಧಾನಿ ಶೇಖ್ ಹಸೀನಾ ದೇಶ ಬಿಟ್ಟು ಭಾರತಕ್ಕೆ ಓಡಿ ಬರುವಂತಾಯಿತು. ಆ ಸಂದರ್ಭದಲ್ಲಿ ಬಾಂಗ್ಲಾದ ವಿವಿಧೆಡೆ ಸಾಕಷ್ಟು ಹಿಂಸಾಚಾರಗಳಾದವು. ನಂತರ ಬಂದ ಮಧ್ಯಂತರ ಸರ್ಕಾರವು ಭಾರತ ವಿರೋಧಿ ನೀತಿಗಳನ್ನು ಅನುಸರಿಸುತ್ತಾ ಬಂದಿದೆ.
ವಿದ್ಯಾರ್ಥಿ ಪ್ರತಿಭಟನೆಯ ರೂವಾರಿಯಾಗಿದ್ದ ಷರೀಫ್ ಉಸ್ಮಾನ್ ಹದಿ ಅವರನ್ನು ಡಿಸೆಂಬರ್ 12ರಂದು ಆಗಂತುಕರು ಹತ್ಯೆ ಮಾಡಿದರು. ಇದಾದ ಬಳಿಕ ಮತ್ತೊಮ್ಮೆ ಬಾಂಗ್ಲಾದಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಭಾರತೀಯರು, ಹಿಂದೂಗಳನ್ನು ಗುರಿಯಾಗಿಸಿಕೊಂಡು ದಾಳಿಗಳು ಹೆಚ್ಚಾಗಿವೆ.
ಇನ್ನಷ್ಟು ಅಂತರರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ