AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸತ್ತ ಆರ್ಥಿಕತೆಯಷ್ಟೇ ಅಲ್ಲ, ಸತ್ತ ಸಮಾಜವೂ ಆಗುತ್ತಿದ್ದೇವೆ: ಉನ್ನಾವೋ ರೇಪ್ ಸಂತ್ರಸ್ತೆ ಭೇಟಿ ಬಳಿಕ ರಾಹುಲ್ ಗಾಂಧಿ ಆಕ್ರೋಶದ ಹೇಳಿಕೆ

Unnao rape survivor meets Rahul Gandhi: ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಹಾಗೂ ಆಕೆಯ ತಾಯಿ ಇಂದು ರಾಹುಲ್ ಗಾಂಧಿಯನ್ನು ಭೇಟಿ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ. ಅತ್ಯಾಚಾರ ಆರೋಪಿ ಶಾಸಕ ಕುಲದೀಪ್ ಸಿಂಗ್ ಸೆಂಗರ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡಿದ್ದನ್ನು ರೇಪ್ ಸಂತ್ರಸ್ತೆ ವಿರೋಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಮೂರು ನೆರವುಗಳನ್ನು ಕೇಳಿದ್ದಾರೆ. ಪ್ರಧಾನಿಯನ್ನೂ ಭೇಟಿ ಮಾಡಬಯಸಿದ್ದಾರೆ.

ಸತ್ತ ಆರ್ಥಿಕತೆಯಷ್ಟೇ ಅಲ್ಲ, ಸತ್ತ ಸಮಾಜವೂ ಆಗುತ್ತಿದ್ದೇವೆ: ಉನ್ನಾವೋ ರೇಪ್ ಸಂತ್ರಸ್ತೆ ಭೇಟಿ ಬಳಿಕ ರಾಹುಲ್ ಗಾಂಧಿ ಆಕ್ರೋಶದ ಹೇಳಿಕೆ
ರಾಹುಲ್ ಗಾಂಧಿ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Dec 24, 2025 | 8:16 PM

Share

ನವದೆಹಲಿ, ಡಿಸೆಂಬರ್ 24: ಉನ್ನಾವೋ ಅತ್ಯಾಚಾರ ಘಟನೆಯ ಸಂತ್ರಸ್ತೆ (Unnao rape survivor) ಇಂದು ಬುಧವಾರ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಅವರನ್ನು ಭೇಟಿ ಮಾಡಿದ್ದಾರೆ. ಅತ್ಯಾಚಾರ ಆರೋಪಿ ಹಾಗೂ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ವಿರುದ್ಧ ಸುಪ್ರೀಂಕೋರ್ಟ್​ನಲ್ಲಿ ಹೋರಾಡಲು ಒಬ್ಬ ವಕೀಲರನ್ನು ನೇಮಿಸಿಕೊಡುವುದು ಸೇರಿದಂತೆ ಮೂರು ಮನವಿಗಳನ್ನು ಸಂತ್ರಸ್ತ ಬಾಲಕಿಯ ತಾಯಿ ಮಾಡಿದ್ದಾರೆ. ಅಮ್ಮ ಮತ್ತು ಮಗಳ ಭೇಟಿ ಬಳಿಕ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರ ಹಾಗೂ ದೇಶದ ವ್ಯವಸ್ಥೆ ಬಗ್ಗೆ ಕಿಡಿಕಾರಿದ್ದಾರೆ.

‘ಅತ್ಯಾಚಾರಿಗಳಿಗೆ ಜಾಮೀನು ಸಿಗುತ್ತೆ. ಅತ್ಯಾಚಾರ ಸಂತ್ರಸ್ತರನ್ನು ಕ್ರಿಮಿನಲ್​ಗಳಂತೆ ನಡೆಸಿಕೊಳ್ಳಲಾಗುತ್ತೆ. ಯಾವ ಸೀಮೆಯ ನ್ಯಾಯ ಇದು? ನಾವು ಸತ್ತ ಆರ್ಥಿಕತೆ ಮಾತ್ರ ಆಗುತ್ತಿಲ್ಲ, ಇಂಥ ಅಮಾನವೀಯ ಘಟನೆಗಳು ನಮ್ಮನ್ನು ಸತ್ತ ಸಮಾಜವಾಗಿ ಮಾರ್ಪಡಿಸುತ್ತಿವೆ’ ಎಂದು ರಾಹುಲ್ ಗಾಂಧಿ ತಮ್ಮ ಎಕ್ಸ್​ನಲ್ಲಿ ಸಿಡಿಗುಟ್ಟಿದ್ದಾರೆ.

ಇದನ್ನೂ ಓದಿ: 12,000 ಕೋಟಿ ರೂ ವೆಚ್ಚದಲ್ಲಿ ಡೆಲ್ಲಿ ಮೆಟ್ರೋ ವಿಸ್ತರಣೆ; ಬರಲಿವೆ 13 ಹೊಸ ನಿಲ್ದಾಣಗಳು; ಸಂಪುಟ ಅನುಮೋದನೆ

ಉನ್ನಾವೋದಲ್ಲಿ 2017ರಲ್ಲಿ ಆಗ 17 ವರ್ಷ ವಯಸ್ಸಿದ್ದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಆದ ಆರೋಪ ಇರುವ ಪ್ರಕರಣ ಇದು. ಆಗ ಬಿಜೆಪಿ ನಾಯಕರಾಗಿದ್ದ ಮತ್ತು ಶಾಸಕನೂ ಆಗಿದ್ದ ಕುಲದೀಪ್ ಸಿಂಗ್ ಸೇರಿದಂತೆ ವಿವಿಧ ವ್ಯಕ್ತಿಗಳ ಮೇಲೆ ಆರೋಪ ದಾಖಲಾಗಿತ್ತು. ಕೋರ್ಟ್​ವೊಂದರಲ್ಲೂ ಈತ ದೋಷಿ ಎಂದು ತೀರ್ಪು ನೀಡಲಾಗಿ, ಜೈಲು ಶಿಕ್ಷೆಯಾಗಿತ್ತು. ಈಗ ತನ್ನ ವಿರುದ್ಧದ ತೀರ್ಪನ್ನು ಪ್ರಶ್ನಿಸಿ ಕುಲದೀಗ್ ಸಿಂಗ್ ಸೆಂಗರ್ ಅವರು ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಕೋರ್ಟ್​ನಿಂದ ಅಂತಿಮ ತೀರ್ಪು ಬರುವವರೆಗೂ ಇವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಜೈಲಿಂದ ಬಿಡುಗಡೆ ಮಾಡಿರುವುದನ್ನು ಅತ್ಯಾಚಾರ ಸಂತ್ರಸ್ತೆ ಹಾಗೂ ಆಕೆಯ ತಾಯಿ ಇಬ್ಬರೂ ಬಲವಾಗಿ ವಿರೋಧಿಸುತ್ತಿದ್ದಾರೆ. ಸೆಂಗರ್​ನಿಂದ ತಮ್ಮ ಪ್ರಾಣಕ್ಕೆ ಆಪತ್ತಿದೆ ಎಂದು ಹೇಳುತ್ತಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಲು ತಮ್ಮನ್ನು ಬಿಡುತ್ತಿಲ್ಲ ಎಂದು ಅಮ್ಮ-ಮಗಳು ಅಲವತ್ತುಕೊಳ್ಳುತ್ತಿದ್ಧಾರೆ.

ಇದನ್ನೂ ಓದಿ: ದೆಹಲಿ ಮಾಲಿನ್ಯದ ಭೀಕರತೆಯನ್ನು ತೆರೆದಿಟ್ಟ ಸಚಿವ ನಿತಿನ್ ಗಡ್ಕರಿ

ಇದೇ ವೇಳೆ, ನಿನ್ನೆ ವಿದೇಶದಿಂದ ಭಾರತಕ್ಕೆ ಬಂದ ರಾಹುಲ್ ಗಾಂಧಿ ಅವರನ್ನು ಬಾಲಕಿ ಹಾಗೂ ಆಕೆಯ ತಾಯಿ ಭೇಟಿಯಾಗಿದ್ದಾರೆ. ಸುಪ್ರೀಂಕೋರ್ಟ್​ನಲ್ಲಿ ಸೆಂಗರ್ ವಿರುದ್ಧ ಹೋರಾಡಲು ದೊಡ್ಡ ವಕೀಲರನ್ನು ಕೊಡಬೇಕು; ತಮ್ಮನ್ನು ಕೊಲ್ಲುವ ಸಾಧ್ಯತೆ ಇರುವುದರಿಂದ ಕಾಂಗ್ರೆಸ್ ಆಡಳಿತದ ರಾಜ್ಯದಲ್ಲಿ ಇರಲು ಅವಕಾಶ ಕೊಡಬೇಕು; ಹಾಗು ಮೂರನೆಯದು, ಮಹಿಳೆಯ ಗಂಡನಿಗೆ ಉದ್ಯೋಗ ಒದಗಿಸಬೇಕು. ಅತ್ಯಾಚಾರ ಸಂತ್ರಸ್ತೆ ಹಾಗೂ ಆಕೆಯ ತಾಯಿಯ ಈ ಮೂರು ಬೇಡಿಕೆಗಳಿಗೆ ರಾಹುಲ್ ಗಾಂಧಿ ಒಪ್ಪಿದರೆನ್ನಲಾಗಿದೆ.

ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ ಇವರು, ತಾವು ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಭೇಟಿ ಮಾಡಬಯಸುತ್ತಿರುವುದಾಗಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ