
ನ್ಯೂಯಾರ್ಕ್, ಜೂನ್ 30: ಅಮೆರಿಕದ ಅತಿದೊಡ್ಡ ನಗರ ಎನಿಸಿದ ನ್ಯೂಯಾರ್ಕ್ ಸಿಟಿಯ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿರುವ ಭಾರತ ಮೂಲದ ಜೋಹ್ರಾನ್ ಮಮ್ದಾನಿ (Zohran Mamdani) ಅವರು ಆರ್ಥಿಕ ಅಸಮಾನತೆ (wealth inequality) ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ. ಎನ್ಬಿಸಿ ವಾಹಿನಿಯ ಸಂದರ್ಶನ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ 33 ವರ್ಷದ ಜೋಹ್ರಾಮ್ ಮಮ್ದಾನಿ ಅವರು ಬಿಲಿಯನೇರ್ಗಳೇ ಇಲ್ಲದಂತಹ ಪರಿಸ್ಥಿತಿ ಇರಬೇಕು ಎಂದು ಹೇಳಿದ್ದಾರೆ.
‘ಬಿಲಿಯನೇರ್ಗಳು ಇರಬೇಕು ಅಂತ ನನಗೆ ಅನಿಸುವುದಿಲ್ಲ. ಅವರ ಬಳಿ ಇಷ್ಟು ಹಣ ಶೇಖರಣೆ ಆಗಿರುವುದರಿಂದ ಈ ಅಸಮಾನತೆ ನೆಲಸಿದೆ. ಅಂತಿಮವಾಗಿ ನಮ್ಮ ನಗರ, ರಾಜ್ಯ ಹಾಗೂ ದೇಶಾದ್ಯಂತ ನಮಗೆ ಬೇಕಿರುವುದು ಸಮಾನತೆ’ ಎಂದು ಮಮ್ದಾನಿ ಹೇಳಿದ್ದಾರೆ.
ತಾನು ಮೇಯರ್ ಆಗಿ ಆಯ್ಕೆಯಾದರೆ ನ್ಯೂಯಾರ್ಕ್ ನಗರವನ್ನು ಎಲ್ಲರಿಗೂ ಬೇಕಾಗುವ ರೀತಿಯಲ್ಲಿ ಎಲ್ಲರೊಂದಿಗೂ ಕೆಲಸ ಮಾಡಲು ಸಿದ್ಧನಿದ್ದೇನೆ. ಬಿಲಿಯನೇರ್ಗಳ ಜೊತೆಗೂ ಕೆಲಸ ಮಾಡಲು ಸಿದ್ಧ ಎಂದು ಡೆಮಾಕ್ರಾಟ್ ಪಕ್ಷದ ಜೋಹ್ರಾನ್ ಮಮ್ದಾನಿ ತಿಳಿಸಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನದ ಪಿಆರ್; ನ್ಯೂಯಾರ್ಕ್ ಮೇಯರ್ ಅಭ್ಯರ್ಥಿ ಜೋಹ್ರಾನ್ ಮಮ್ದಾನಿ ವಿರುದ್ಧ ಕಾಂಗ್ರೆಸ್, ಬಿಜೆಪಿ ವಾಗ್ದಾಳಿ
33 ವರ್ಷದ ಜೋಹ್ರಾನ್ ಮಮ್ದಾನಿ ಅವರು ಭಾರತ ಮೂಲದವರಾದರೂ ಹುಟ್ಟಿದ್ದು ಉಗಾಂಡ ದೇಶದಲ್ಲಿ. ಖ್ಯಾತ ಚಿತ್ರ ತಯಾರಕಿ ಮೀರಾ ನಾಯರ್ ಹಾಗೂ ಗುಜರಾತ್ ಮೂಲದ ಇತಿಹಾಸಕಾರ ಮಹಮೂದ್ ಮಮ್ದಾನಿ ಅವರ ಮಗನಾದ ಜೊಹ್ರಾನ್ ಮಮ್ದಾನಿ ಅಪ್ಪಟ ಸೋಷಿಯಲಿಸ್ಟ್ ಸಿದ್ಧಾಂತಿ ಹೌದು. ಅಂತೆಯೇ ಅವರು ಅಮೆರಿಕದ ಉದಾರ ಧೋರಣೆಯ ಡೆಮಾಕ್ರಾಟ್ ಪಕ್ಷದ ರಾಜಕಾರಣಿಯಾಗಿದ್ದಾರೆ.
ಜೋಹ್ರಾನ್ ಮಮ್ದಾನಿ ಅವರು ನ್ಯೂಯಾರ್ಕ್ ನಗರದ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಲು ಡೆಮಾಕ್ರಾಟ್ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಅಭ್ಯರ್ಥಿಯಾಗಲು ಪಕ್ಷದೊಳಗೆ ನಡೆದ ಸ್ಪರ್ಧೆಯಲ್ಲಿ ಅಚ್ಚರಿ ರೀತಿಯಲ್ಲಿ ಗೆಲುವು ಸಾಧಿಸಿದ್ದಾರೆ. ಹಾಲಿ ಮೇಯರ್ ಆಗಿರುವ ಎರಿಕ್ ಅಡಮ್ಸ್ ಹಾಗೂ ಅನುಭವಿ ರಾಜಕಾರಣಿ, ಮಾಜಿ ನ್ಯೂಯಾರ್ಕ್ ಗವರ್ನರ್ ಆಂಡ್ರ್ಯೂ ಕುವೋಮೋ ಅವರಂತಹ ದಿಗ್ಗಜರನ್ನು ಸೋಲಿಸಿ ಡೆಮಾಕ್ರಾಟ್ ಮೇಯರ್ ಅಭ್ಯರ್ಥಿಯಾಗಿದ್ದಾರೆ ಮಮ್ದಾನಿ.
ನ್ಯೂಯಾರ್ಕ್ ನಗರ ಬಹುತೇಕ ಡೆಮಾಕ್ರಾಟ್ ಪಕ್ಷದ ಭದ್ರಕೋಟೆ ಎನಿಸಿದೆ. ಇಲ್ಲಿ ರಿಪಬ್ಲಿಕನ್ ಪಕ್ಷ ಮೇಯರ್ ಗದ್ದುಗೆ ಹಿಡಿದಿದ್ದು ಬಹಳ ಕಡಿಮೆ. 2005ರಲ್ಲಿ ಮಿಕೇಲ್ ಬ್ಲೂಮ್ಬರ್ಗ್ ಅವರು ಗೆದ್ದಿದ್ದು ಬಿಟ್ಟರೆ ಕಳೆದ 20 ವರ್ಷಗಳಿಂದ ಮೇಯರ್ ಗದ್ದುಗೆ ಡೆಮಾಕ್ರಾಟ್ ಪಕ್ಷದ ಬಳಿಯೇ ಇದೆ.
ಇದನ್ನೂ ಓದಿ: ಭಯೋತ್ಪಾದನೆಯನ್ನು ಹೋರಾಟವೆಂದು ಕರೆದು ಮತ್ತೆ ಭಾರತದ ವಿರುದ್ಧ ವಿಷ ಕಾರಿದ ಆಸಿಮ್ ಮುನೀರ್
ಆದರೆ, ಈ ಬಾರಿ ಮಮ್ದಾನಿ ಅವರಿಗೆ ಗೆಲುವು ಅಷ್ಟು ಸುಲಭವಿದ್ದಂತಿಲ್ಲ. ಡೆಮಾಕ್ರಾಟ್ ಪಕ್ಷದ ಇಬ್ಬರು ಘಟಾನುಘಟಿಗಳು ರೆಬೆಲ್ ಆಗಿ ಸ್ಪರ್ಧಿಸಿದ್ದಾರೆ. ಅಂದರೆ ಪಕ್ಷೇತರ ಅಭ್ಯರ್ಥಿಯಾಗಿ ಮೇಯರ್ ಚುನಾವಣೆಯಲ್ಲಿ ನಿಂತಿದ್ದಾರೆ. ರಿಪಬ್ಲಿಕನ್ ಪಕ್ಷದಿಂದ ಕರ್ಟಿಸ್ ಸಿಲ್ವಾ ಇದ್ದಾರೆ. ಡೆಮಾಕ್ರಾಟ್ ಪಕ್ಷಕ್ಕೆ ಬರುವ ಮತಗಳು ಹಂಚಿಹೋಗುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ, ಜೋಹ್ರಾನ್ ಮಮ್ದಾನಿ ಗೆಲುವು ಅಷ್ಟು ಸುಲಭವಲ್ಲ.
ಜೋಹ್ರಾನ್ ಮಮ್ದಾನಿ ಅವರು ಕೆಲವಾರು ವರ್ಷಗಳಿಂದ ಭಾರತ ವಿರೋಧಿ ನಿಲುವು ತಳೆದಿದ್ದಾರೆ. 2002ರ ಗುಜರಾತ್ ಗಲಭೆ ಘಟನೆಯನ್ನು ಮುಸ್ಲಿಮರ ನರಮೇಧ ಎಂದು ಅವರು ಬಣ್ಣಿಸಿದ್ದಿದೆ. ನ್ಯೂಯಾರ್ಕ್ ನಗರದಲ್ಲಿ ನಡೆದ ಹಿಂದೂ ವಿರೋಧಿ ಪ್ರತಿಭಟನೆಗಳಲ್ಲಿ ಅವರು ಪಾಲ್ಗೊಂಡಿದ್ದರು. ಕಾಶ್ಮೀರ ವಿಚಾರದಲ್ಲಿ ಪಾಕಿಸ್ತಾನ ಪರ ಮಾತನಾಡಿದ್ದಿದೆ.
ವಿದೇಶ ವಿಭಾಗದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ