ಅಂತೂ ಇಂತೂ ಕೊನೆಗೂ ಡೆಡ್ಲಿ ವೈರಸ್ ಕೊರೊನಾಗೆ ಒಂದು ಔಷಧಿ ಸಿಕ್ಕಿದೆ. ಅಮೆರಿಕದ ಫೈಜರ್, ಕಂಪನಿ ಜರ್ಮನಿಯ ಬಯೋಎನ್ಟೆಕ್ ಸಹಯೋಗದಲ್ಲಿ ಔಷಧಿ ಕಂಡು ಹಿಡಿದಿದೆ. ಆದ್ರೆ, ಇದು ತುಂಬಾ ದುಬಾರಿಯಾಗಿದ್ದು, ಅದನ್ನ ಸಂಗ್ರಹಿಸೋದು ಮತ್ತು ಸಾಗಣೆ ಮಾಡೋದು ಈಗ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಭಾರತ್ ಬಯೋಟೆಕ್.. ಆಸ್ಟ್ರಾಜೆನೆಕಾ.. ಮೊಡೆರ್ನಾ.. ಈ ಹೆಸರುಗಳನ್ನ ಕೇಳಿದಾಕ್ಷಣ ಡೆಡ್ಲಿ ಕೊರೊನಾಗೆ ಔಷಧಿ ಕಂಡು ಹಿಡಿಯೋ ಕಂಪನಿಗಳು ನೆನಪಿಗೆ ಬರುತ್ವೆ. ಈ ಸಾಲಿಗೆ ಹೊಸದಾಗಿ ಎರಡು ಹೆಸರುಗಳು ಸೇರ್ಪಡೆಯಾಗಿವೆ. ಅದೇ ಫೈಜರ್ ಮತ್ತು ಬಯೋಎನ್ಟೆಕ್. ಅಮೆರಿಕದ ಫೈಜರ್ ಔಷಧ ಕಂಪನಿ, ಜರ್ಮನಿಯ ಬಯೋಎನ್ಟೆಕ್ ಕಂಪನಿ ಸಹಯೋಗದಲ್ಲಿ ಕೊರೊನಾಗೆ ಔಷಧಿ ಕಂಡು ಹಿಡಿದಿರೋದಾಗಿ ಹೇಳಿದ್ದು ಇದು ಕೊರೊನಾ ವಿರುದ್ಧ ಶೇಕಡ 90ರಷ್ಟು ಯಶಸ್ಸು ಕಂಡಿದೆ ಅಂತಾ ಹೇಳಿಕೊಂಡಿದೆ. ಹೀಗಾಗಿ ಈ ಔಷಧಿಕೊಳ್ಳಲು ಶ್ರೀಮಂತ ದೇಶಗಳು ಮುಗಿ ಬಿದ್ದಿವೆ.
ಕೊರೊನಾಗೆ ಔಷಧಿ ಬಂದರೂ ಭಾರತದಲ್ಲಿ ಸಿಗೋದು ಅನುಮಾನ!
ಫೈಜರ್ ಮತ್ತು ಬಯೋಎನ್ಟೆಕ್ ಕಂಪನಿ ಎಂಆರ್ಎನ್ಎ ಆಧಾರಿತ ಔಷಧಿ ಕಂಡು ಹಿಡಿದಿದೆ. ಈ ಔಷಧಿಯನ್ನ ನೀಡಿದ್ರೆ, ದೇಹದಲ್ಲಿ ಕೊರೊನಾ ವೈರಸ್ ವಿರುದ್ಧ ಪ್ರತಿಕಾಯಗಳನ್ನ ಸೃಷ್ಟಿಸಲು ಪ್ರಚೋದನೆ ನೀಡುವ ಪ್ರೋಟಿನ್ಗಳನ್ನ ಉತ್ಪಾದಿಸುತ್ತದೆ. ಈ ಮೂಲಕ ಕೊರೊನಾ ವಿರುದ್ಧ ಔಷಧಿ ಕಾರ್ಯನಿರ್ವಹಿಸುತ್ತದೆ.
ಯಾವಾಗ ಫೈಜರ್ ಕಂಪನಿ ಕೊರೊನಾಗೆ ಔಷಧಿ ಕಂಡು ಹಿಡಿದಿದ್ದೇನೆ ಅಂತಾ ಘೋಷಿಸಿತೋ ಬಹುತೇಕ ಶ್ರೀಮಂತ ರಾಷ್ಟ್ರಗಳು ತಮ್ಮ ದೇಶಗಳಿಗೆ ಔಷಧಿ ಪೂರೈಸುವಂತೆ ಈಗಾಗಲೇ ಕಂಪನಿಗೆ ಆರ್ಡರ್ ಕೂಡ ಮಾಡಿ ಬಿಟ್ಟಿವೆ. ಫೈಜರ್ ಕೊರೊನಾಗೆ ಔಷಧಿ ಕಂಡು ಹಿಡಿದಿರುವ ಘೋಷಣೆ ಮಾಡಿರೋದು ಅಮೆರಿಕದಲ್ಲಿ ವಿವಾದಕ್ಕೆ ಕಾರಣವಾಗಿದೆ. ಅಮೆರಿಕದ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಫೈಜರ್ ಕಂಪನಿ ಚುನಾವಣೆಗೂ ಮುನ್ನವೇ ಔಷಧಿ ಕಂಡು ಹಿಡಿದಿದ್ರೂ ಬೇಕೆಂದೇ ಘೋಷಣೆ ಮಾಡಿಲ್ಲ. ಈಗ ಎಲ್ಲ ಮುಗಿದ ಬಳಿಕ ಔಷಧಿ ಕುರಿತು ಘೋಷಣೆ ಮಾಡಿದೆ ಅಂತಾ ಆರೋಪಿಸಿದ್ದಾರೆ.
ಕೊರೊನಾಗೆ ಔಷಧಿ ಕಂಡು ಹಿಡಿದಿದ್ರೂ ಇದು ಭಾರತದಲ್ಲಿ ಸಿಗೋದು ಬಹಳ ಕಷ್ಟ ಅಥವಾ ದುಬಾರಿಯಾಗಲಿದೆ. ಯಾಕಂದ್ರೆ, ಈ ಔಷಧಿಯನ್ನ ಮೈನಸ್ 70 ಡಿಗ್ರಿ ಉಷ್ಣಾಂಶದಲ್ಲಿ ಶೇಖರಿಸಬೇಕು. ಸಾಗಾಟ ಮಾಡಬೇಕು. ಅಲ್ದೆ, ಇದನ್ನ 5 ದಿನದಲ್ಲಿ ಇಂಜೆಕ್ಟ್ ಮಾಡಬೇಕು. ಇಷ್ಟೆಲ್ಲ ಮಾಡಬೇಕು ಅಂದ್ರೆ, ಭಾರತದಲ್ಲಿ ಅಸಾಧ್ಯ ಅಂತಾ ಏಮ್ಸ್ ನಿರ್ದೇಶಕರಾದ ರಣದೀಪ್ ಗುಲೇರಿಯಾ ಹೇಳಿದ್ದಾರೆ. ಕೊನೆಗೂ ಕೊರೊನಾಗೆ ಔಷಧ ಕಂಡು ಹಿಡಿದಿದ್ದು, ಅತಿ ಶೀಘ್ರದಲ್ಲೇ ಮಾರುಕಟ್ಟೆಗೆ ಬರೋದ್ರಲ್ಲಿ ಡೌಟ್ ಇಲ್ಲ.