ಒಂದು ಕಾಲದಲ್ಲಿ ಮಹಾತ್ಮ ಗಾಂಧೀಜಿ ಬಳಸಿದ ಲೋಹದ ಬಟ್ಟಲು, ಮರದ ಚಮಚ, ಫೋರ್ಕ್ ಎಲ್ಲವಕ್ಕೂ ಈಗ ಭರಪೂರ ಡಿಮ್ಯಾಂಡ್ ಬಂದಿದೆ. ಬ್ರಿಟನ್ನ ಬ್ರಿಸ್ಟಲ್ನಲ್ಲಿ ಜನವರಿ 10ರಂದು ಹರಾಜು ಪ್ರಕ್ರಿಯೆ ನಡೆಯಲಿದ್ದು ಹರಾಜಿನ ಆರಂಭಿಕ ಬೆಲೆ ಭಾರತೀಯ ಮೌಲ್ಯದಲ್ಲಿ ₹54,59,808.20 (GBP 55,000) ಆಗಿರಲಿದೆ. ಅದರೊಂದಿಗೆ ಹರಾಜು ಸಮಿತಿಯ ಕಮಿಷನ್, ಜಿಎಸ್ಟಿ, ವಿಮೆ, ಭಾರತದಿಂದ ಆಮದು ಮಾಡಿಕೊಂಡ ಮೊತ್ತ ಇತ್ಯಾದಿ ಸೇರಿಕೊಂಡು ಒಟ್ಟು ಮೊತ್ತ ₹ 1.2 ಕೋಟಿ ಆಗಬಹುದು ಎಂದು ಆಯೋಜಕರು ತಿಳಿಸಿದ್ದಾರೆ.
ಇದು ಆಯೋಜಕರು ನಿರೀಕ್ಷಿಸುತ್ತಿರುವ ಕನಿಷ್ಠ ಮೌಲ್ಯವಾಗಿದ್ದು ಹರಾಜಿನ ಸಂದರ್ಭದಲ್ಲಿ 2-3 ಪಟ್ಟು ಹೆಚ್ಚು ಮೌಲ್ಯಕ್ಕೆ ಹೋಗುವ ಸಾಧ್ಯತೆಯೂ ಇದೆ ಎಂದು ಅಂದಾಜಿಸಲಾಗಿದೆ. ಈ ವಸ್ತುಗಳನ್ನು ಮಹಾತ್ಮ ಗಾಂಧೀಜಿಯವರು 1942ರಿಂದ 1944ರ ಅವಧಿಯಲ್ಲಿ ಪುಣೆಯ ಅಗಾ ಖಾನ್ ಅರಮನೆಯಲ್ಲಿ ಸೆರೆಯಾಳಾಗಿದ್ದಾಗ ಹಾಗೂ ಮುಂಬೈನ ಪಂಬನ್ ಹೌಸ್ನಲ್ಲಿದ್ದಾಗ ಬಳಕೆ ಮಾಡಿದ್ದರು ಎಂದು ಹರಾಜು ಪ್ರಕ್ರಿಯೆ ಆಯೋಜಕರು ತಿಳಿಸಿದ್ದಾರೆ.
ಯಾರ ಸಂಗ್ರಹಣೆಯಲ್ಲಿತ್ತು ಇದು?
ಈ ವಸ್ತುಗಳು ಗಾಂಧೀಜಿಯವರ ಕಟ್ಟಾ ಅನುಯಾಯಿ ಆದ ಸುಮತಿ ಮೊರಾರ್ಜಿ ಅವರ ಸಂಗ್ರಹಣೆಯಲ್ಲಿತ್ತು. ಈ ಕುರಿತು 1970ರಲ್ಲಿ ಸುಮತಿ ಮೊರಾರ್ಜಿ ಅವರ ಗೌರವಾರ್ಥವಾಗಿ ಪ್ರಕಟಿಸಿದ ಸ್ಮರಣ ಗ್ರಂಥ ಮತ್ತು ವಿಠ್ಠಲ ಭಾಯಿ ಝಾವೇರಿ ಬಯೋಪಿಕ್ನಲ್ಲೂ ಉಲ್ಲೇಖವಿದೆ. ಈ ವಸ್ತುಗಳು ಗಾಂಧೀಜಿಯವರಿಗೆ ಸಂಬಂಧಿಸಿದ್ದಷ್ಟೇ ಅಲ್ಲದೇ ಭಾರತೀಯ ಇತಿಹಾಸಕ್ಕೂ ಸಂಬಂಧಿಸಿದ್ದಾಗಿದ್ದರಿಂದ ಹರಾಜು ಪ್ರಕ್ರಿಯೆ ಬಹಳಷ್ಟು ಕುತೂಹಲ ಮೂಡಿಸಿದೆ.
ಬ್ರಿಟನ್ನಲ್ಲಿರುವ ಗಾಂಧಿ ಹಾಗೂ ಮಾಜಿ ಪ್ರಧಾನಿ ವಿನ್ಸ್ಟನ್ ಚರ್ಚಿಲ್ ಪ್ರತಿಮೆ ತೆರವು ಸಾಧ್ಯತೆ.. ಕಾರಣವೇನು..?