ಜಗತ್ತಿನ ಪ್ರತಿಷ್ಠಿತ ಎಲ್ ಌಂಡ್ ಗ್ರಾಜಿಯಾ (Elle and Grazia) ಫ್ಯಾಷನ್ ಮ್ಯಾಗಜೀನ್ನ ಮುಖಪುಟವನ್ನು ರಾರಾಜಿಸುತ್ತಿದ್ದ ಸೂಪರ್ ಮಾಡಲ್ ಒಬ್ಬಳ ದುರಂತ ಕಥೆಯಿದು. ಕಳೆದ ಒಂದು ವರ್ಷದ ಹಿಂದೆ ಕಾಣೆಯಾಗಿದ್ದ ಈ ರೂಪದರ್ಶಿ ಇದೀಗ ದಯನೀಯ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.
ಹೌದು, ಎಲ್ ಌಂಡ್ ಗ್ರಾಜಿಯಾ ಮ್ಯಾಗ್ಜೀನ್ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಎಲಾಯ್ಸಾ ಪಿಂಟೋ ಫಾಂಟೆಸ್ ಎಂಬ ಬ್ರೆಜಿಲ್ ಮೂಲದ ಈ ಮದನಾರಿ ಕಳೆದ ಒಂದು ವರ್ಷದ ಹಿಂದೆ ಅಮೆರಿಕದ ನ್ಯೂ ಯಾರ್ಕ್ನಲ್ಲಿ ನಾಪತ್ತೆಯಾಗಿದ್ದಳು. ಆದರೆ ಇದೀಗ ಎಲ್ಲರ ಕಣ್ಮನದಿಂದ ಕಣ್ಮರೆಯಾಗಿದ್ದ ಎಲಾಯ್ಸಾ ಬ್ರೆಜಿಲ್ನ ಕೊಳೆಗೇರಿಯಲ್ಲಿ ಕಂಡುಬಂದಿದ್ದಾಳೆ.
ಸ್ಲಂನ ರಕ್ಷಣೆಗಾಗಿ ನಿಯೋಜಿತವಾಗಿದ್ದ ಸ್ವಸಹಾಯಕರ ತಂಡಕ್ಕೆ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ರೂಪದರ್ಶಿಯನ್ನು ರಕ್ಷಿಸಿದ್ದಾರೆ. ಮಾನಸಿಕ ಅಸ್ವಸ್ಥೆಯಾಗಿ ಕಾಣಿಸಿಕೊಂಡ ಎಲಾಯ್ಸಾ ಅರೆ ನಗ್ನಾವಸ್ಥೆಯಲ್ಲಿ ಅಲೆದಾಡುತ್ತಿರುವುದನ್ನ ಕಂಡು ಸ್ಥಳೀಯರು ತಂಡಕ್ಕೆ ಮಾಹಿತಿ ನೀಡಿದ್ದರು. ಇದೀಗ, ಎಲಾಯ್ಸಾಳನ್ನು ಮಾನಸಿಕ ಆರೋಗ್ಯ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಿಸಲಾಗಿದೆ.