ನವದೆಹಲಿ: ಶ್ರೀಲಂಕಾದಲ್ಲಿ (Sri Lanka) ತೀವ್ರವಾದ ಆರ್ಥಿಕ ಸಂಕಷ್ಟ ಎದುರಾಗಿದ್ದು, ಕರಾಳ ದಿನಗಳನ್ನು ಎದುರಿಸುತ್ತಿದೆ. ಶ್ರೀಲಂಕಾದ ಬಂಕ್‌ಗಳಲ್ಲಿ ಪೆಟ್ರೋಲ್, ಡೀಸೆಲ್ ಲಭ್ಯವಾಗುತ್ತಿಲ್ಲ. ಅಗತ್ಯ ವಸ್ತುಗಳು ಕೂಡ ಸಿಗುತ್ತಿಲ್ಲ. ಶ್ರೀಲಂಕಾದಲ್ಲಿ ಉದ್ಯೋಗ ಹಾಗೂ ಆಹಾರದ ಕೊರತೆಯ ಕಾರಣ ಅಲ್ಲಿ ಬದುಕಲು ಸಾಧ್ಯವಾಗದೆ ಭಾರತದತ್ತ ಬರುತ್ತಿದ್ದಾರೆ. ಶ್ರೀಲಂಕಾದ ಪೂರ್ವ ಪ್ರಾಂತ್ಯದ ಬಟ್ಟಿಕಾಲೋವಾದಲ್ಲಿ ಕೆಲಸ ಮಾಡುತ್ತಿರುವ 31 ವರ್ಷದ ಶಾಲಾ ಶಿಕ್ಷಕಿ ವಾಣಿ ಸುಸೈ, ಜನವರಿ ಕೊನೆಯ ವಾರದಲ್ಲಿ ಉಂಟಾದ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ನೆನಪಿಸಿಕೊಂಡಿದ್ದಾರೆ. ಆ ಭಾನುವಾರ ಬೆಳಿಗ್ಗೆ, ನಮ್ಮ ಮನೆಯ ಗ್ಯಾಸ್ ಖಾಲಿಯಾಯಿತು. ಸಿಲಿಂಡರ್‌ಗಾಗಿ ಪರಿಶೀಲಿಸಲು ನಾನು ಏಜೆನ್ಸಿಗೆ ಕರೆ ಮಾಡಿದ್ದೆ. ಅವರು ಹಲವಾರು ದಿನಗಳವರೆಗೆ ಅದನ್ನು ವಿತರಿಸಲು ಸಾಧ್ಯವಿಲ್ಲ ಎಂದು ಹೇಳಲಾಯಿತು. ಅಂಗಡಿಯಿಂದ ಅಂಗಡಿಗೆ ಅಲೆದು, ಮಾರನೇ ದಿನ ಸಿಲಿಂಡರ್ ಸಿಕ್ಕಿತು ಎಂದಿದ್ದಾರೆ.
ತನ್ನ ತಾಯಿ, ಮಗಳು ಮತ್ತು ಅವಳ ಮೂರು ಜನರ ಕುಟುಂಬಕ್ಕೆ ಅಗತ್ಯ ವಸ್ತುಗಳ ಸಾಮಾನ್ಯ ವೆಚ್ಚವು ಶ್ರೀಲಂಕಾದಲ್ಲಿ ತಿಂಗಳಿಗೆ ಸುಮಾರು 30,000 ರೂ.ಗಳಷ್ಟಿತ್ತು ಎಂದು ಸುಸೈ ಹೇಳಿದ್ದಾರೆ. ಆದರೆ ಈ ತಿಂಗಳು ನಾನು ಈಗಾಗಲೇ 83,000 ರೂ. ಖರ್ಚಾಗಿದೆ. ಆದರೂ ಅನ್ನ, ಬೇಳೆಗಾಗಿ ಜನರು ಪರದಾಡಬೇಕು. ಏಳು ತಾಸು ಲೋಡ್ ಶೆಡ್ಡಿಂಗ್ ಇದ್ದರೂ ಕ್ಯಾಂಡಲ್ ಇಲ್ಲ. 12 ಪ್ಯಾರಸಿಟಮಾಲ್ ಮಾತ್ರೆಗಳ ಸ್ಟ್ರಿಪ್ 420 ರೂ.ಗಳಾಗಿದ್ದು, ಹಲವು ಔಷಧಗಳು ಸಿಗುತ್ತಿಲ್ಲ. ನನ್ನ ಸಂಬಳ ರೂ 55,000 ಮತ್ತು ನನ್ನ ಪತಿ ಕಳುಹಿಸಿದ ಹಣ ಸಿಕ್ಕರೂ ನಾವು ಹಣವನ್ನು ತಿನ್ನಬಹುದೇ? ಎಂದು ಆಕೆ ಪ್ರಶ್ನೆ ಮಾಡಿದ್ದಾರೆ. ”
ಕಳೆದ ವಾರ, ಇದೇ ರೀತಿಯ ಆರ್ಥಿಕ ಒತ್ತಡದಲ್ಲಿ ಲಂಕಾದಿಂದ ಪಲಾಯನ ಮಾಡಿದ ಹನ್ನೆರಡು ಜನರನ್ನು ತಮಿಳುನಾಡು ಸ್ವೀಕರಿಸಿದೆ. ಏಪ್ರಿಲ್ 2019ರ ಈಸ್ಟರ್ ಭಾನುವಾರದ ಸ್ಫೋಟಗಳು, ಎರಡು ಕೋವಿಡ್ ಅಲೆಗಳು ಮತ್ತು ಈಗ ರಷ್ಯಾ-ಉಕ್ರೇನ್ ಯುದ್ಧದಿಂದ ಜರ್ಜರಿತವಾಗಿರುವ ಶ್ರೀಲಂಕಾ ದೇಶವು ಭಾರೀ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇದು ಶ್ರೀಲಂಕಾದ ಆರ್ಥಿಕತೆಯ ತಳಹದಿಯಾಗಿರುವ ಪ್ರವಾಸೋದ್ಯಮವನ್ನು ಘಾಸಿಗೊಳಿಸಿದೆ. ಹೊರಗಿನಿಂದ ಬಹುತೇಕ ಎಲ್ಲವನ್ನೂ ಆಮದು ಮಾಡಿಕೊಳ್ಳುವ ದ್ವೀಪ ದೇಶವು ಸರಬರಾಜುಗಳನ್ನು ನಿರ್ವಹಿಸಲು ಹೆಣಗಾಡುತ್ತಿದೆ.
ವಿದೇಶಿ ವಿನಿಮಯದ ಕುಸಿತದ ಪರಿಣಾಮ ಶ್ರೀಲಂಕಾ ತೀವ್ರವಾದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಆಮದುಗಳಿಗೆ ಹಣ ಪಾವತಿಸಲು ವ್ಯಾಪಾರಿಗಳಿಗೆ ಸಾಧ್ಯವಾಗುತ್ತಿಲ್ಲ. ದೇಶದ ಪ್ರಮುಖ ವಿದೇಶಿ ವಿನಿಮಯ ಮೂಲವಾಗಿರುವ ಪ್ರವಾಸೋದ್ಯಮ ವಲಯ ಕೋವಿಡ್ ಕಾರಣದಿಂದ ಸಂಕಷ್ಟಕ್ಕೆ ಸಿಲುಕಿದೆ. ಇದಷ್ಟೇ ಅಲ್ಲದೆ ಮೂಲಸೌಕರ್ಯ ಯೋಜನೆಗಳಿಗಾಗಿ ಚೀನಾದಿಂದ ವಿಪರೀತ ಸಾಲ ಪಡೆದಿರುವುದು ಅದನ್ನು ಸಾಲದ ಸುಳಿಯಲ್ಲಿ ಮುಳುಗಿಸಿದೆ.
2019ರಲ್ಲಿ ಈಸ್ಟರ್ ವೇಳೆ ಕೊಲಂಬೋದಲ್ಲಿ ನಡೆದ ಭೀಕರ ಸರಣಿ ಬಾಂಬ್ ಸ್ಫೋಟವು ಶ್ರೀಲಂಕಾದ ಪ್ರವಾಸೋದ್ಯಮ ವಲಯಕ್ಕೆ ದೊಡ್ಡ ಪೆಟ್ಟು ನೀಡಿದೆ. ಆರ್ಥಿಕತೆ ಕುಸಿತದಿಂದ ಲಂಕಾದಲ್ಲಿ ಅಗತ್ಯ ವಸ್ತುಗಳ ಬೆಲೆಯೂ ಗಗನಕ್ಕೇರಿದೆ. ಕುರುನೇಗಾಲ ವಾಯವ್ಯ ಪ್ರಾಂತ್ಯದ ದಂತ ವೈದ್ಯ ಡಾ. ಸಮಂತ್ ಕುಮಾರ ಅವರದೂ ಇದೇ ಸ್ಥಿತಿ. ಅವರ ಮಗ ಆಸ್ಟ್ರೇಲಿಯಾದಲ್ಲಿ ಓದುತ್ತಿದ್ದು, ಅವರಿಗೆ ಹಣ ಕಳುಹಿಸಲು ಸಾಧ್ಯವಾಗುತ್ತಿಲ್ಲ. “ಎಲ್ಲಾ ಡಾಲರ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ” ಎಂದು ಡಾ ಕುಮಾರ್ ಬೇಸರ ಹೊರಹಾಕಿದ್ದಾರೆ.
ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ರಹಮಾನ್ ತಸ್ಲೀಮ್ ಅವರು ಈಗ ಪಶ್ಚಿಮ ಕರಾವಳಿ ನಗರವಾದ ನೆಗೊಂಬೋದಲ್ಲಿ ಮರಗೆಲಸವನ್ನು ಮಾಡಿಕೊಂಡಿದ್ದಾರೆ. ಭಾರತವು ತನಗೆ ಆಶ್ರಯ ನೀಡುತ್ತದೆಯೇ ಅಥವಾ ದುಬೈಗೆ ಪ್ರಯತ್ನಿಸಬೇಕೇ ಎಂದು ಅವರು ಯೋಚನೆ ಮಾಡುತ್ತಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಐದು ಉದ್ಯೋಗಗಳನ್ನು ಬದಲಾಯಿಸಿರುವ ತಸ್ಲೀಮ್ ಇದೀಗ ಜೀವನ ನಿರ್ವಹಿಸಲು ಹೆಣಗಾಡುತ್ತಿದ್ದಾರೆ. “ಅನಿಲ ಮತ್ತು ಇಂಧನ ಕೊರತೆಯಿಂದಾಗಿ ನಾನು ಕಟ್ಟಿಗೆ ಪಡೆದು ಬೆಂಕಿ ಒಲೆಯಲ್ಲಿ ಅಡುಗೆ ಮಾಡುತ್ತಿದ್ದೇವೆ. ಅದು ಬಹಳ ಕಷ್ಟವಾಗುತ್ತಿದೆ ಎಂದಿದ್ದಾರೆ.
ಈ ರೀತಿ ಹಲವರು ಶ್ರೀಲಂಕಾದಲ್ಲಿನ ತಮ್ಮ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ. ಬೆಲೆ ಏರಿಕೆಯಾದ ವಸ್ತುಗಳ ಪಟ್ಟಿ ಹೀಗಿದೆ. ದಿನಬಳಕೆ ವಸ್ತುಗಳಾದ ಅಕ್ಕಿ, ಹಾಲಿನಪುಡಿ ಸೇರಿದಂತೆ ಅನೇಕ ವಸ್ತುಗಳ ಬೆಲೆ ಧಿಡೀರ್ ಏರಿಕೆಯಾಗಿದೆ. 400 ಗ್ರಾಂ ಹಾಲಿನಪುಡಿಯ ಬೆಲೆ 790 ರುಪಿಗೆ (ರುಪಿ ಶ್ರೀಲಂಕಾದ ಕರೆನ್ಸಿ ಹೆಸರು) ತಲುಪಿದ್ದರೆ, 1 ಕೆಜಿ ಅಕ್ಕಿಯ ಬೆಲೆ 290 ಲಂಕಾ ರುಪಿ., ಟೀ 1ಕಪ್‍ಗೆ 100 ರುಪಿ., ಗೋಧಿ ಹಿಟ್ಟು 160 ರುಪಿ., ಕಾಳುಗಳು 270 ರುಪಿ., ಪೆಟ್ರೋಲ್ 283 ರುಪಿ, ಡೀಸೆಲ್ 254 ರುಪಿ., ಎಲ್‍ಪಿಜಿ 2000 ರುಪಿ. ಆಗಿದೆ.