ನಿಜ್ಜರ್​ ಹತ್ಯೆಯಲ್ಲಿ ಮೋದಿ, ದೋವಲ್ ಕೈವಾಡ ಆರೋಪ: ವರದಿಯಲ್ಲಿ ಹುರುಳಿಲ್ಲವೆಂದ ಕೆನಡಾ

ಭಾರತ ಕೆನಡಾ ಸಂಬಂಧ ಮತ್ತಷ್ಟು ಹದಗೆಡುತ್ತಿರುವ ಸಂದರ್ಭದಲ್ಲೇ ಕೆನಡಾ ಸರ್ಕಾರ ಮಹತ್ವದ ಹೇಳಿಕೆಯೊಂದನ್ನು ನೀಡಿದೆ. ಖಲಿಸ್ತಾನ್​ ಪ್ರತ್ಯೇಕತಾವಾದಿ ಹರ್ದೀಪ್​ ಸಿಂಗ್​ ನಿಜ್ಜರ್​ ಹತ್ಯೆ ಪ್ರಕರಣದಲ್ಲಿ ಭಾರತದ ಪ್ರಧಾನಿ ಮೋದಿ, ವಿದೇಶಾಂಗ ಸಚಿವ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರರ ಪಾತ್ರ ಇರುವುದಕ್ಕೆ ಯಾವುದೇ ಸಾಕ್ಷ್ಯಗಳಿಲ್ಲ ಎಂದಿದೆ.

ನಿಜ್ಜರ್​ ಹತ್ಯೆಯಲ್ಲಿ ಮೋದಿ, ದೋವಲ್ ಕೈವಾಡ ಆರೋಪ: ವರದಿಯಲ್ಲಿ ಹುರುಳಿಲ್ಲವೆಂದ ಕೆನಡಾ
ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಪ್ರಧಾನಿ ಮೋದಿ (ಸಂಗ್ರಹ ಚಿತ್ರ)

Updated on: Nov 22, 2024 | 11:24 AM

ನವದೆಹಲಿ, ನವೆಂಬರ್ 22: ಮಹತ್ವದ ಬೆಳವಣಿಗೆಯೊಂದರಲ್ಲಿ, ಕೆನಡಾದಲ್ಲಿ ಖಲಿಸ್ತಾನ್ ಮುಖಂಡನ ಹತ್ಯೆ ಹಿಂದೆ ಭಾರತದ ಕೈವಾಡವಿದೆ ಎಂಬ ಆರೋಪಗಳಿಗೆ ಯಾವುದೇ ಪುರಾವೆಗಳು ಇಲ್ಲ ಎಂದು ಕೆನಡಾ ಸರ್ಕಾರ ಸ್ಪಷ್ಟನೆ ನೀಡಿದೆ. ಖಲಿಸ್ತಾನ್​ ಪ್ರತ್ಯೇಕತಾವಾದಿ ಹರ್ದೀಪ್​ ಸಿಂಗ್​ ನಿಜ್ಜರ್​ ಹತ್ಯೆ ಹಾಗೂ ಕೆನಡಾದ ಅಪರಾಧ ಪ್ರಕರಣಗಳಲ್ಲಿ ಭಾರತದ ಪ್ರಧಾನಿ ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವ ಎಸ್. ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಶಾಮೀಲಾಗಿದ್ದಾರೆ ಎಂಬ ಆರೋಪ ಹಾಗೂ ವರದಿಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಅದು ತಿಳಿಸಿದೆ.

ಪ್ರಧಾನಿ ಮೋದಿ, ಸಚಿವ ಜೈಶಂಕರ್ ಅಥವಾ ಎನ್‌ಎಸ್‌ಎ ಅಜಿತ್ ದೋವಲ್ ಕೆನಡಾದೊಳಗೆ ಯಾವುದೇ ಕ್ರಿಮಿನಲ್ ಚಟುವಟಿಕೆಯಲ್ಲಿ ಶಾಮೀಲಾಗಿದ್ದಾರೆ ಎಂಬುದಕ್ಕೆ ಕೆನಡಾ ಸರ್ಕಾರದ ಬಳಿ ಯಾವುದೇ ಪುರಾವೆಗಳಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಕೆನಡಾದ ಪತ್ರಿಕೆಯೊಂದರಲ್ಲಿ ಪ್ರಕಟವಾದ ವರದಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ನಿಜ್ಜರ್ ಹತ್ಯೆಗೆ ಭಾರತದ ಉನ್ನತ ನಾಯಕರೇ ಸಂಚು ರೂಪಿಸಿದ್ದರು ಎಂದು ವರದಿಯಲ್ಲಿ ಆರೋಪಿಸಲಾಗಿತ್ತು. ಇದೀಗ ಕೆನಡಾ ಸರ್ಕಾರದಿಂದ ಸ್ಪಷ್ಟನೆ ನೀಡಿದೆ.

ಭಾರತದ ವಿರುದ್ಧ ಆರೋಪ ಮಾಡಿ ಪ್ರಕಟವಾದ ವರದಿಯ ಬಗ್ಗೆ ಪ್ರತಿಕ್ರಿಯಿಸಿರುವ ಕೆನಡಾ, ಆ ವರದಿ ಊಹಾತ್ಮಕವಾಗಿದ್ದು, ನಿಖರವಾಗಿಲ್ಲ. ಅದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದಿದೆ.

ಪ್ರಕರಣದ ಹಿನ್ನೆಲೆ

ಖಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮತ್ತು ಭಾರತೀಯ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಸಿಂಗ್ ಅವರಿಗೆ ತಿಳಿದಿತ್ತು. ಹತ್ಯೆ ಹಿಂದೆ ಭಾರತದ ಕೈವಾಡವಿದೆ ಎಂದು ಕೆನಡಾ ಸರ್ಕಾರದ ಮೂಲವನ್ನು ಉಲ್ಲೇಖಿಸಿ ಅಲ್ಲಿನ ಗ್ಲೋಬ್ ಆ್ಯಂಡ್ ಮೇಲ್ ಪತ್ರಿಕೆ ವರದಿ ಮಾಡಿತ್ತು.

ಆದರೆ, ವರದಿಗೆ ಭಾರತ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಇದು ಕೆನಡಾದ ‘ಭಾರತದ ಮಾನಹಾನಿ ಮಾಡುವ ಅಭಿಯಾನ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಟೀಕಿಸಿದ್ದರು.

ಕಳೆದ ವರ್ಷ ಜೂನ್ 18 ರಂದು ಕೆನಡಾದ ಸರ್ರೆಯಲ್ಲಿ ಹರ್ದೀಪ್ ಸಿಂಗ್ ನಿಜ್ಜರ್​ನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಈ ವಿಚಾರದಲ್ಲಿ ಕೆನಡಾದ ಎಲ್ಲ ಆರೋಪಗಳನ್ನು ಭಾರತ ತಳ್ಳಿಹಾಕಿದೆ.

ಇದನ್ನೂ ಓದಿ: ಹರ್ದೀಪ್ ನಿಜ್ಜರ್ ಹತ್ಯೆ ಪ್ರಕರಣ, ಮೂವರು ಭಾರತೀಯರ ಬಂಧನ: ಜೈಶಂಕರ್​ ಪ್ರತಿಕ್ರಿಯೆ

ಖಲಿಸ್ತಾನ್​ ಪ್ರತ್ಯೇಕತಾವಾದಿ ಹರ್ದೀಪ್​ ಸಿಂಗ್​ ನಿಜ್ಜರ್​ ಹತ್ಯೆ ವಿಚಾರವಾಗಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಈ ಹಿಂದೆ ಭಾರತವನ್ನು ಟೀಕಿಸಿದ್ದರು. ಅದಕ್ಕೆ ಭಾರತವೂ ಸೂಕ್ತ ತಿರುಗೇಟು ನೀಡಿತ್ತು. ಈ ವಿದ್ಯಮಾನಗಳು ಉಭಯ ದೇಶಗಳ ನಡುವಣ ಹಳಸಿದ್ದ ಸಂಬಂಧವನ್ನು ಮತ್ತಷ್ಟು ಹದಗೆಡುವಂತೆ ಮಾಡಿತ್ತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:55 am, Fri, 22 November 24